ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ನಟನೆ ನಿಲ್ಲಿಸಿಲ್ಲ ಎಂದು ಹೇಳಿರುವ ಅವರು..

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ಸಿನಿಮಾ ಜರ್ನಿ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನಂತ್ ನಾಗ್, ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಅವರು ನಟನೆಗೆ ವಿದಾಯ ಹೇಳಿಲ್ಲ. ಬದಲಿಗೆ, ಸಿನಿಮಾಗಳ ಕಥೆ-ಚಿತ್ರಕಥೆಯ ಗುಣಮಟ್ಟ ಕುಸಿಯುತ್ತಿರುವುದು, ಚಿತ್ರತಂಡಗಳ ನಡುವಿನ ಹೊಂದಾಣಿಕೆಯ ಕೊರತೆ ಮತ್ತು ಬಾಕ್ಸ್ ಆಫೀಸ್ ಕುರಿತ ತಪ್ಪು ಲೆಕ್ಕಾಚಾರಗಳು ತಮ್ಮ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಭಾಜನರಾಗಿರುವ ಅನಂತ್ ನಾಗ್, ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ನೂರಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ಬದಲಾಗುತ್ತಿರುವ ಕೆಲಸದ ರೀತಿಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆರೋಗ್ಯ ಸಮಸ್ಯೆಯಿಂದ ನಟನೆ ನಿಲ್ಲಿಸಿಲ್ಲ’

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನಂತ್ ನಾಗ್ ಅವರಿಗೆ, ಆರೋಗ್ಯ ಸಮಸ್ಯೆಯ ಕಾರಣದಿಂದ ನಟನೆಯಿಂದ ದೂರ ಉಳಿದಿದ್ದೀರಾ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ನಿರ್ಧಾರದ ಹಿಂದೆ ಆರೋಗ್ಯ ಸಮಸ್ಯೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿನಿಮಾಗಳ ಸ್ಕ್ರಿಪ್ಟ್‌ಗಳು ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ ಎಂದು ಹೇಳಿರುವ ಅನಂತ್ ನಾಗ್, ಇಂದಿನ ಚಿತ್ರರಂಗದಲ್ಲಿ ಕಥೆಗಿಂತ ಬೇರೆ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಹಿಂದೆ ಎಲ್ಲರೂ ಒಟ್ಟಿಗೆ ಕುಳಿತು ಕೆಲಸ ಮಾಡುತ್ತಿದ್ದೆವು’

ತಮ್ಮ ಕಾಲದ ಸಿನಿಮಾ ನಿರ್ಮಾಣದ ದಿನಗಳನ್ನು ನೆನಪಿಸಿಕೊಂಡ ಅನಂತ್ ನಾಗ್, ಹಿಂದೆ ನಟ, ನಿರ್ದೇಶಕ ಮತ್ತು ನಿರ್ಮಾಪಕರು ಒಂದೇ ಕಡೆ ಕುಳಿತು ಕಥೆ, ಚಿತ್ರಕಥೆ ಹಾಗೂ ಸಂಗೀತದ ಬಗ್ಗೆ ಚರ್ಚಿಸುತ್ತಿದ್ದರು ಎಂದು ಹೇಳಿದ್ದಾರೆ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದರಿಂದ ಸಿನಿಮಾದ ಮೇಲೆ ಒಗ್ಗಟ್ಟಿನ ಪ್ರಯತ್ನ ನಡೆಯುತ್ತಿತ್ತು. ಆದರೆ ಈಗ ಆ ವಾತಾವರಣ ಬದಲಾಗಿದೆ ಎನ್ನುವುದು ಅವರ ಮಾತು. ಈಗ ಚಿತ್ರತಂಡದ ನಡುವೆ ಆ ಒಗ್ಗಟ್ಟು ಮಾಯವಾಗಿದೆ. ಪ್ರತಿಯೊಬ್ಬರೂ ತಮ್ಮದೇ ಪ್ರತ್ಯೇಕ ದ್ವೀಪಗಳಂತಾಗಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕರ ನಡುವೆಯೂ ಹೊಂದಾಣಿಕೆ ಇರುವುದಿಲ್ಲ ಎಂದು ಅನಂತ್ ನಾಗ್ ಹೇಳಿದ್ದಾರೆ.

2021-22ರಲ್ಲಿ ಮಾಡಿದ ಆ ಐದು ಸಿನಿಮಾಗಳ ಅನುಭವ

ತಮ್ಮ ನಿರ್ಧಾರದ ಹಿಂದೆ ವೈಯಕ್ತಿಕ ಅನುಭವವೂ ಇದೆ ಎಂದು ಅನಂತ್ ನಾಗ್ ವಿವರಿಸಿದ್ದಾರೆ.2021-22ರ ಅವಧಿಯಲ್ಲಿ ತಾವು ಸುಮಾರು ಐದು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾಗಿ ಅವರು ಹೇಳಿದ್ದಾರೆ. ಅವುಗಳಲ್ಲಿ ಹಲವು ಚಿತ್ರತಂಡಗಳು ಹೊಸಬರಿಂದ ಕೂಡಿದ್ದವು. ಅವರಿಗೆ ತಮ್ಮ ಅನುಭವದ ಆಧಾರದ ಮೇಲೆ ಅಗತ್ಯ ಸಲಹೆಗಳನ್ನು ನೀಡಿದ್ದಾಗಿಯೂ ತಿಳಿಸಿದ್ದಾರೆ. ಚಿತ್ರೀಕರಣ ನಡೆಯುವವರೆಗೂ ಎಲ್ಲವೂ ಸರಿಯಾಗಿಯೇ ಕಾಣುತ್ತಿತ್ತು.

ಆದರೆ ಸಿನಿಮಾಗಳು ಬಿಡುಗಡೆಯಾದ ಬಳಿಕ ನಿರೀಕ್ಷಿತ ಪ್ರತಿಕ್ರಿಯೆ ಸಿಗದೆ ಆ ಐದೂ ಸಿನಿಮಾಗಳು ಹೀನಾಯವಾಗಿ ಸೋತವು ಎಂದು ಅನಂತ್ ನಾಗ್ ಹೇಳಿದ್ದಾರೆ. ಈ ಅನುಭವದ ಬಳಿಕವೇ, 'ಸಾಕು, ಇನ್ನಿಲ್ಲಿ ನಟನೆ ಮಾಡುವುದು ವ್ಯರ್ಥ' ಎಂಬ ನಿರ್ಧಾರಕ್ಕೆ ಬಂದೆ ಎಂದು ಅವರು ತಿಳಿಸಿದ್ದಾರೆ. 2022ರ ಮಾರ್ಚ್‌ನಲ್ಲಿ ತಮ್ಮ ಕೊನೆಯ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ ಬಳಿಕ ನಟನೆಯಿಂದ ದೂರ ಸರಿದಿರುವುದಾಗಿ ಅನಂತ್ ನಾಗ್ ಹೇಳಿದ್ದಾರೆ.

‘ಪ್ರೇಕ್ಷಕರ ಬಗ್ಗೆ ಯಾರಿಗೂ ಕಾಳಜಿ ಇಲ್ಲ’

ಇಂದಿನ ಚಿತ್ರರಂಗದಲ್ಲಿ ಪ್ರೇಕ್ಷಕರಿಗಿಂತ ವೈಯಕ್ತಿಕ ಅಹಂ ಮತ್ತು ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂಬುದು ಅನಂತ್ ನಾಗ್ ಅವರ ಮತ್ತೊಂದು ಆರೋಪ.ಓಟಿಟಿ ವೇದಿಕೆಗಳ ಬಗ್ಗೆ ಮಾತನಾಡುವವರು, ಪ್ರೇಕ್ಷಕರು ಯಾವ ರೀತಿಯ ಸಿನಿಮಾಗಳನ್ನು ಬಯಸುತ್ತಿದ್ದಾರೆ ಮತ್ತು ಚಿತ್ರಗಳು ಏಕೆ ಸೋಲುತ್ತಿವೆ ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಹ ಬಲವಾದ ಕಂಟೆಂಟ್ ಸಿನಿಮಾಗಳಲ್ಲಿ ಕಾಣಿಸುತ್ತಿಲ್ಲ. ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಗೌರವವಿಲ್ಲದೆ, ಸಿನಿಮಾ ಮಾರಾಟವಾಗುತ್ತದೆ ಎಂಬ ಒಂದೇ ಆಲೋಚನೆಯೊಂದಿಗೆ ಚಿತ್ರಗಳನ್ನು ಮಾಡಲಾಗುತ್ತಿದೆ ಎಂದು ಅನಂತ್ ನಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘1000 ಕೋಟಿ, 2000 ಕೋಟಿ ಎಂದು ಸುಳ್ಳು ಲೆಕ್ಕ ಹೇಳುತ್ತಾರೆ’

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಕಲೆಕ್ಷನ್ ಕುರಿತು ಹರಿದಾಡುವ ಅಂಕಿ-ಅಂಶಗಳ ಬಗ್ಗೆಯೂ ಅನಂತ್ ನಾಗ್ ಪ್ರಶ್ನೆ ಎತ್ತಿದ್ದಾರೆ. 1000 ಕೋಟಿ, 2000 ಕೋಟಿ ಬಂತು ಎಂದು ಸುಳ್ಳು ಲೆಕ್ಕಗಳನ್ನು ಸೃಷ್ಟಿಸುತ್ತಾರೆ. ಹಾಗಾದರೆ ನಿರ್ಮಾಪಕರು ಏಕೆ ದಿವಾಳಿಯಾಗುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ. ಮೊದಲು ನಿರ್ಮಾಪಕರಿಗೆ ಲಾಭ ಸಿಗಬೇಕು. ಅದರ ಜೊತೆಗೆ ಪ್ರೇಕ್ಷಕರಿಗೆ ಉತ್ತಮ ಸಿನಿಮಾ ತಲುಪಬೇಕು. ಆದರೆ ಸಿನಿಮಾಗಳಲ್ಲಿ ಆ ಗುಣಮಟ್ಟವೇ ಕಾಣೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ಈಗ ಕೆಲಸ ಮಾಡಲು ಬಯಸುವ ನಿರ್ದೇಶಕರೇ ಇಲ್ಲ’

ಸಂದರ್ಶನದಲ್ಲಿ, ಇಂದಿನ ಪೀಳಿಗೆಯಲ್ಲಿ ತಾವು ಮತ್ತೆ ಕೆಲಸ ಮಾಡಬೇಕು ಎಂದು ಬಯಸುವಂತಹ ನಿರ್ದೇಶಕರು ಯಾರಾದರೂ ಇದ್ದಾರೆಯೇ ಎಂದು ಅನಂತ್ ನಾಗ್ ಅವರನ್ನು ಕೇಳಲಾಯಿತು. ಇದಕ್ಕೆ ಅವರು ಖಂಡಿತವಾಗಿ ಯಾರೂ ಇಲ್ಲ. ಅದೇ ಈ ಕಾಲದ ದೊಡ್ಡ ದುರಂತ ಎಂದು ನೇರವಾಗಿ ಉತ್ತರಿಸಿದ್ದಾರೆ. ಹಿಂದೆ ಜನರು ಮನರಂಜನೆಯ ಜೊತೆಗೆ ಜ್ಞಾನ, ಅರಿವು ಮತ್ತು ಸಂಸ್ಕೃತಿಗಾಗಿ ಚಿತ್ರಮಂದಿರಗಳಿಗೆ ಬರುತ್ತಿದ್ದರು. ಆದರೆ ಈಗ ಸಿನಿಮಾಗಳಲ್ಲಿ ಅಂತಹ ಮೌಲ್ಯಗಳು ಉಳಿದಿಲ್ಲ ಎಂಬುದು ಅವರ ಅಭಿಪ್ರಾಯ.

‘ನಾನು ನನ್ನ ವೃತ್ತಿಜೀವನದ ಅಂತ್ಯದಲ್ಲಿದ್ದೇನೆ’

ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವುದರಿಂದ ಇದೀಗ ಯಾವುದರ ಬೆನ್ನಟ್ಟಿಯೂ ಹೋಗುವ ಅಗತ್ಯ ತಮಗಿಲ್ಲ ಎಂದು ಅನಂತ್ ನಾಗ್ ಹೇಳಿದ್ದಾರೆ. ಹೀಗಾಗಿ ಸದ್ಯಕ್ಕೆ ಮತ್ತೆ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆ ಕಾಣುತ್ತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅವರು ನೀಡಿದ್ದಾರೆ. ಇನ್ನು ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ಭಾಗವಾಗಿದ್ದ ಹಿರಿಯ ನಟರೊಬ್ಬರು, ಸಿನಿಮಾಗಳ ಗುಣಮಟ್ಟ ಮತ್ತು ಚಿತ್ರರಂಗದ ಕೆಲಸದ ಸಂಸ್ಕೃತಿಯ ಬಗ್ಗೆ ಇಷ್ಟೊಂದು ನೇರವಾಗಿ ಮಾತನಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.