ಕಣ್ಣಮಿಂಚು ಮತ್ತು ಮಂದಹಾಸದಲ್ಲೇ ಭಾವನೆ ಕಟ್ಟಿಕೊಟ್ಟ ಅನಂತ್ ನಾಗ್ ಅವರ ಅಪರೂಪದ ಸಿನಿಪಯಣ. ‘ಗೌರಿ ಗಣೇಶ’ದಿಂದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ವರೆಗೆ ಅವರ ಮರೆಯಲಾಗದ ಪಾತ್ರಗಳ ಕಥೆ ಇಲ್ಲಿದೆ.
ಸಂಭಾಷಣೆಯ ಅತಿಯಿಲ್ಲದೆ, ನಟನೆಯ ಅಬ್ಬರವಿಲ್ಲದೆ, ಕೇವಲ ಕಣ್ಣಮಿಂಚು ಮತ್ತು ಮಂದಹಾಸದಲ್ಲೇ ಭಾವ ಪ್ರಪಂಚವನ್ನೇ ಕಟ್ಟಿಕೊಡಬಲ್ಲ ಅಗಾಧ ಪ್ರತಿಭೆ ಅನಂತ್ ನಾಗ್. ಗಾಂಭೀರ್ಯವಿರಲಿ, ರೊಮ್ಯಾಂಟಿಕ್ ಪಾತ್ರವಾಗಿರಲಿ, ಇಲ್ಲವೇ ಹೊಟ್ಟೆ ಹುಣ್ಣಾಗಿಸುವ ತಮಾಷೆ ಪಾತ್ರಗಳಿರಲಿ ಪ್ರತೀ ಪಾತ್ರಕ್ಕೂ ಘನತೆ ತಂದುಕೊಟ್ಟ ಕನ್ನಡದ ಮೇರು ಪ್ರತಿಭೆ.
ರಂಗಭೂಮಿಯ ಗರಡಿಯಲ್ಲಿ ಅರಳಿದ ಪ್ರತಿಭೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಕೊಂಕಣಿ ಕುಟುಂಬದಲ್ಲಿ 1948ರ ಸೆಪ್ಟೆಂಬರ್ 4ರಂದು ಜನಿಸಿದ ಅನಂತ್ ನಾಗರಕಟ್ಟೆ, ಮುಂಬೈನಲ್ಲಿ ಶಿಕ್ಷಣ ಮುಗಿಸಿ ರಂಗಭೂಮಿಯತ್ತ ಆಕರ್ಷಿತರಾದರು. ಖ್ಯಾತ ರಂಗಕರ್ಮಿ ಸತ್ಯದೇವ್ ದುಬೆ ಗರಡಿಯಲ್ಲಿ ಪಳಗಿದ ಅನಂತ್, ಕೊಂಕಣಿ, ಮರಾಠಿ ಹಾಗೂ ಹಿಂದಿ ನಾಟಕಗಳಲ್ಲಿ ಮಿಂಚಿದರು. 1974ರಲ್ಲಿ ಶ್ಯಾಮ್ ಬೆನೆಗಲ್ ಅವರ ಪ್ರಸಿದ್ಧ ‘ಅಂಕುರ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’ ಮತ್ತು ‘ಕಲಿಯುಗ್’ ಮುಂತಾದ ಮೇರು ಕೃತಿಗಳಲ್ಲಿ ಅಮೋಘ ಅಭಿನಯ ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.
ಕನ್ನಡ ಬೆಳ್ಳಿಪರದೆಯ ‘ಕ್ಲಾಸ್’ ನಾಯಕ
ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ (1973) ಮೂಲಕ ಕನ್ನಡ ಪ್ರವೇಶಿಸಿದ ಅನಂತ್ ನಾಗ್, ನಂತರ ‘ಬಯಲು ದಾರಿ’, ‘ಹಂಸಗೀತೆ’ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದರು. ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ನಾ ನಿನ್ನ ಬಿಡಲಾರೆ’ ಮುಂತಾದ ವಿಭಿನ್ನ ಜಾನರ್‌ನ ಚಿತ್ರಗಳ ಮೂಲಕ . ‘ಚಾಕೋಲೇಟ್ ಹೀರೋ’ ಪಟ್ಟವನ್ನು ಕಳಚಿಹಾಕಿ ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬರ’ ಚಿತ್ರಗಳಲ್ಲಿ ಗಂಭೀರ ಪಾತ್ರಗಳನ್ನು ನಿರ್ವಹಿಸಿ ತಮ್ಮ ನಟನಾ ಸಾಮರ್ಥ್ಯವನ್ನು ಪರಿಚಯಿಸಿದರು. ‘ಬೆಳದಿಂಗಳ ಬಾಲೆ’ ಚಿತ್ರದ ರೇವಂತ್ ಪಾತ್ರವಂತೂ ಇಂದಿಗೂ ಕ್ಲಾಸಿಕ್.
ಹಾಸ್ಯ ಮತ್ತು ವಿಡಂಬನೆಯ ರಾಜಕುಮಾರ
ಅನಂತ್ ನಾಗ್ ಅವರ ಕಾಮಿಡಿ ಟೈಮಿಂಗ್ ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ. ಮುಖದಲ್ಲಿ ಗಂಭೀರತೆ ಕಾಪಾಡಿಕೊಂಡೇ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಅವರ ಶೈಲಿ ಅನನ್ಯ. ‘ಗೌರಿ ಗಣೇಶ’, ‘ಗಣೇಶನ ಮದುವೆ’, ‘ಉಂಡೂಹೋದ ಕೊಂಡೂಹೋದ’ ‘ಉದ್ಭವ’, ‘ಯಾರಿಗೂ ಹೇಳ್ಬೇಡಿ’, ‘ಗೋಲ್‌ಮಾಲ್ ರಾಧಾಕೃಷ್ಣ’ ಚಿತ್ರಗಳು ಸಾರ್ವಕಾಲಿಕ ಜನಪ್ರಿಯ. ರಾಜಕೀಯ ಹಾಗೂ ಸಾಮಾಜಿಕ ಬೂಟಾಟಿಕೆಯನ್ನು ವಿಡಂಬಿಸುವ ಪಾತ್ರಗಳಿಗೆ ಅವರಷ್ಟು ಜೀವ ತುಂಬಿದವರು ವಿರಳ.
ಶಂಕರ್ - ಅನಂತ್ ಜೋಡಿಯ ಬೆರಗು
ಸಹೋದರ ಶಂಕರ್ ನಾಗ್ ಅವರೊಂದಿಗೆ ಅನಂತ್ ನಾಗ್ ಕಟ್ಟಿದ ಸಿನಿಕನಸುಗಳು ಕನ್ನಡ ಚಿತ್ರರಂಗದ ಸ್ವರ್ಣಯುಗ. ಆರ್.ಕೆ. ನಾರಾಯಣ್ ಅವರ ಕಥೆಗಳನ್ನು ಆಧರಿಸಿ ಶಂಕರ್ ನಾಗ್ ನಿರ್ದೇಶಿಸಿದ ರಾಷ್ಟ್ರಮಟ್ಟದ ಪ್ರಸಿದ್ಧ ಧಾರಾವಾಹಿ ‘ಮಾಲ್ಗುಡಿ ಡೇಸ್’ನಲ್ಲಿ ಅನಂತ್ ಅವರ ಪಾತ್ರಗಳು ಇಂದಿಗೂ ಹಸಿರಾಗಿವೆ.
ಹೊಸ ತಲೆಮಾರಿನಲ್ಲೂ ಅಚ್ಚಳಿಯದ ಛಾಪು
ಹೊಸಬರ ಸಿನಿಮಾಗಳಲ್ಲಿಯೂ ಮಿಂಚಿದ ಅಪರೂಪದ ನಟ ಅವರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ವೆಂಕೋಬರಾವ್ ಪಾತ್ರದ ಮೂಲಕ ಮರೆವಿನ ಕಾಯಿಲೆಗೆ ತುತ್ತಾದ ತಂದೆಯಾಗಿ ಜೀವಿಸಿ ಮೆಚ್ಚುಗೆ ಗಳಿಸಿದರು. ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’, ‘ಕೆಜಿಎಫ್’ ಚಿತ್ರಗಳಲ್ಲಿ ಅವರ ಉಪಸ್ಥಿತಿಯೇ ಚಿತ್ರದ ಮೌಲ್ಯವನ್ನು ಹೆಚ್ಚಿಸಿತು.
ಸರಳತೆ ಮತ್ತು ಸೈದ್ಧಾಂತಿಕ ಸ್ಪಷ್ಟತೆ
ಸಿನಿಮಾದ ಜೊತೆಗೆ ಸಾಹಿತ್ಯ, ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಲ್ಲಿ ಮುಕ್ತವಾಗಿ ಧ್ವನಿ ಎತ್ತುವ ಅನಂತ್ ನಾಗ್, ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದವರು. ಪ್ರಶಸ್ತಿ-ಪ್ರಚಾರಗಳ ಹಂಗಿಲ್ಲದೆ, ಆರ್ಭಟವಿಲ್ಲದ ಜೀವನ ನಡೆಸುವ ಅನಂತ್ ನಾಗ್, ಕನ್ನಡ ಸಂಸ್ಕೃತಿ ಮತ್ತು ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ಸಾಂಸ್ಕೃತಿಕ ರಾಯಭಾರಿ.


