ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ವಿಡಿಯೋ ಸರಣಿಯನ್ನು ಅನಾವರಣ ಮಾಡಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರು ಮಾತನಾಡಿರು ವಿಡಿಯೋ ಇದಾಗಿದೆ. ಇದನ್ನು ಬೆಂಗಳೂರು ಬಜ್ (Bengaluru Buzz)' ಯೂಟ್ಯೂಬ್ ಲಿಂಕ್ ಮೂಲಕ ನೋಡಬಹುದು.

ಚಂದನವನದಲ್ಲಿ ಸಿನಿಸಂಭ್ರಮದ ತ್ರಿವೇಣಿ ಸಂಗಮ: ವಿಷ್ಣುದಾದಾ ಅಮೃತ ಮಹೋತ್ಸವ, ಉಪ್ಪಿ-ಶ್ರುತಿ ಬರ್ತ್‌ಡೇ ಧಮಾಕಾ! Dr Vishnuvardhan 75th Birthday- Upendra Birtgday- Shruti Birthday

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಸೆಪ್ಟೆಂಬರ್ ತಿಂಗಳು ಎಂದರೆ ಕೇವಲ ದಿನಾಂಕವಲ್ಲ, ಅದೊಂದು ಬೃಹತ್ ಸಿನಿಸಂಭ್ರಮ! ಏಕೆಂದರೆ, ಈ ದಿನ ಕನ್ನಡ ಚಿತ್ರರಂಗವನ್ನು ಆಳಿದ, ಆಳುತ್ತಿರುವ ದಿಗ್ಗಜರ ಜನ್ಮದಿನದ ತ್ರಿವೇಣಿ ಸಂಗಮ. ಸಾಹಸಸಿಂಹ ಡಾ. ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಅವರ ಹುಟ್ಟುಹಬ್ಬದ ಸಂಭ್ರಮ ಒಂದೇ ದಿನ. ಅವರೆಲ್ಲರ ಅಭಿಮಾನಿಗಳು ಗಲ್ಲಿಗಲ್ಲಿಯಿಂದ ಗಾಂಧಿನಗರದವರೆಗೆ ತಮ್ಮ ಮೆಚ್ಚಿನ ಕಲಾವಿದರ ಪ್ರೀತಿ-ಅಭಿಮಾನಗಳಿಗೆ ಹಬ್ಬದ ವಾತಾವರಣ ಸೃಷ್ಟಿಮಾಡಿದ್ದಾರೆ. ಈ ವರ್ಷ ಪ್ರತಿಯೊಬ್ಬರ ಆಚರಣೆಯಲ್ಲೂ ಸಾಕಷ್ಟು ವಿಶೇಷತೆಗಳಿವೆ! ಅದೇನು ನೋಡಿ..

ಈ ವಿಶೇ‍ಷ ಸಂದರ್ಭದಲ್ಲಿ ಅವರ ಹುಟ್ಟೂರಾದ ಮೈಸೂರಿನಲ್ಲಿ, ನಟಿ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ನಟ ಹಾಗೂ ವಿಷ್ಣು ಅಳಿಯ ಅನಿರುದ್ಧ ಸೇರಿದಂತೆ ಇಡೀ ಕುಟುಂಬ ಹಾಗೂ ಅಭಿಮಾನಿಗಳು ಇಂದು ಹತ್ತುಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ

ಮುಖ್ಯವಾಗಿ, ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ.

ಜೊತೆಗೆ, ಬೆಂಗಳೂರಿನಲ್ಲೂ ಅಭಿಮಾನಿಗಳು ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅನೇಕ ಕಡೆಗಳಲ್ಲಿ ಆಚರಿಸುತ್ತಿದ್ದಾರೆ. ಒಟ್ಟಿನಲ್ಲಿ, ಇಂದು ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ.

ವಿಷ್ಣುದಾದಾ ಅಮೃತ ಮಹೋತ್ಸವ: 18 ಗಂಟೆಗಳ ಬೃಹತ್ ಮಹಾಸಂಭ್ರಮ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ (ಅಮೃತ ಮಹೋತ್ಸವ) ಪ್ರಯುಕ್ತ ಅಭಿಮಾನಿಗಳು ಅಭೂತಪೂರ್ವ ಪ್ಲಾನ್ ಮಾಡಿಕೊಂಡಿದ್ದಾರೆ. ವಿಷ್ಣು ಸೇನಾ ಸಮಿತಿಯು ಈ ಬಾರಿಯ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಜ್ಜಾಗಿದ್ದು, ಸೆಪ್ಟೆಂಬರ್-18ರ ಬದಲಾಗಿ ಸೆಪ್ಟೆಂಬರ್-27ರಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಬರೋಬ್ಬರಿ 18 ಗಂಟೆಗಳ ಕಾಲ ಸುದೀರ್ಘವಾಗಿ ನಡೆಯಲಿರುವ ಈ ಮೆಗಾ ಈವೆಂಟ್‌ನಲ್ಲಿ ಬೃಹತ್ ಧ್ವಜದ ಮೆರವಣಿಗೆ ಹಾಗೂ ಸಾಂಸ್ಕೃತಿಕ ವೈಭವ ಕಣ್ಮನ ಸೆಳೆಯಲಿದೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಅಭಿಮಾನಿಗಳು ಈ ದಿನ ಜಮಾಯಿಸಿ 'ವಿಷ್ಣುದಾದಾ' ಸ್ಮರಣೆಯಲ್ಲಿ ಮುಳುಗೇಳಲಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರಗೆ 58ನೇ ವಸಂತ: ನೆಕ್ಸ್ಟ್ ಲೆವೆಲ್ ಸರ್ಪ್ರೈಸ್

ಇನ್ನೊಂದೆಡೆ, 'ಬುದ್ಧಿವಂತ' ಖ್ಯಾತಿಯ ರಿಯಲ್ ಸ್ಟಾರ್ ಉಪೇಂದ್ರ ಇಂದು ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಪ್ಪಿ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಸದಾ ಹೊಸತನದ ಹಬ್ಬ! ಎಂದಿನಂತೆ ತಮ್ಮ ನಿವಾಸದ ಮುಂದೆ ನೆರೆದಿರುವ ಅಭಿಮಾನಿ ಸಾಗರವನ್ನು ಭೇಟಿಯಾಗಿ, ಪ್ರೀತಿಯ ಶುಭಾಶಯ ಸ್ವೀಕರಿಸುತ್ತಿದ್ದಾರೆ. ಈ ಶುಭ ದಿನದ ಅಂಗವಾಗಿ ಬೆಳಗ್ಗೆ 11:01 ಗಂಟೆಗೆ ಉಪ್ಪಿ ಅವರ ಹೊಸ ಚಿತ್ರದ ಧಮಾಕಾ ಪೋಸ್ಟರ್ ಬಿಡುಗಡೆಯಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನದ ಹಾಗೂ ತರುಣ್ ಶಿವಪ್ಪ ನಿರ್ಮಾಣದ ಈ 'ನೆಕ್ಸ್ಟ್ ಲೆವೆಲ್' ಸಿನಿಮಾದಲ್ಲಿ ಒಂದು ದೊಡ್ಡ ವಿಶೇಷತೆಯಿದೆ—ಇಲ್ಲಿ ರಿಯಲ್ ಸ್ಟಾರ್ ಜೊತೆ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ತೆರೆ ಹಂಚಿಕೊಳ್ಳುತ್ತಿದ್ದು, ಚಿಕ್ಕಪ್ಪ-ಮಗನ ಕಾಂಬಿನೇಶನ್ ಸಿನಿಕಲಾಸಕ್ತರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹವಾ ಸೃಷ್ಟಿಸಲು ಸಜ್ಜಾಗಿದೆ.

ನಟಿ ಶ್ರುತಿ 'ಮದರ್' ಸ್ಪೆಷಲ್: ಮೈಸೂರು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ

ಕನ್ನಡದ ಫೇಮಸ್ ಹಿರಿಯ ನಟಿ ಶ್ರುತಿ ಅವರಿಗೂ ಇಂದು ಅತ್ಯಂತ ವಿಶೇಷವಾದ ದಿನ. ಪ್ರತಿವರ್ಷದಂತೆ ಈ ಬಾರಿಯೂ ಅವರ ಮಗಳು ಗೌರಿ ತಮ್ಮ ತಾಯಿಯ ಬರ್ತ್‌ಡೇಗಾಗಿ ಸ್ಪೆಷಲ್ ಪ್ಲಾನ್ ರೂಪಿಸಿದ್ದಾರೆ. ಈ ವರ್ಷ ಶ್ರುತಿ ಅವರ ಕುಟುಂಬ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿದೆ. ಇನ್ನು ಶ್ರುತಿ ಅವರ ವೃತ್ತಿಜೀವನದ 175ನೇ ಚಿತ್ರ ಸೆಟ್ಟೇರಿದ್ದು, 'ಮದರ್' ಎಂಬ ಶೀರ್ಷಿಕೆಯ ಈ ಸಿನಿಮಾವನ್ನು ರಾಕೇಶ್ ಸೋಮಣ್ಣ ನಿರ್ದೇಶಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲೂ ಈ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು.

ಒಟ್ಟಿನಲ್ಲಿ, ಸಾಹಸ ಸಿಂಹನ ಅಮೃತ ಮಹೋತ್ಸವದ ಸ್ಮರಣೆ, ರಿಯಲ್ ಸ್ಟಾರ್‌ನ ಮಾಸ್ ಸಿನಿಮಾ ಅಪ್‌ಡೇಟ್ ಹಾಗೂ ಹಿರಿಯ ನಟಿ ಶ್ರುತಿಯ ಮೈಲಿಗಲ್ಲಿನ 'ಮದರ್' ಸಿನಿಮಾ ಆಚರಣೆ ಸೇರಿ ಚಂದನವನದಲ್ಲಿ ಹಬ್ಬದ ಕಳೆ ಕಟ್ಟಿರುವುದಂತೂ ಸತ್ಯ!

ಇನ್ನೂ ಒಂದು ಭಾರೀ ವಿಶೇಷತೆ ನಿಮಗಾಗಿ ಕಾದಿದೆ!

ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಈ ವಿಶೇ‍ಷ ಸಂದರ್ಭದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ಒಂದು ಸರಣಿಯನ್ನು ಪೋಸ್ಟ್ ಮಾಡುತ್ತಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರ ಮಾತುಗಳನ್ನು ವಿಡಿಯೋ ರೂಪದಲ್ಲಿ ಅನಾವರಣ ಮಾಡಿದೆ. ಇದನ್ನು 'ಏಷ್ಯಾನೆಟ್ ಸುವರ್ಣ'ದ 'ಬೆಂಗಳೂರು ಬಜ್ (Bengaluru Buzz)' ಯೂಟ್ಯೂಬ್ ಲಿಂಕ್ ಮೂಲಕ ನೋಡಬಹುದು.

Link: ಈ ಲಿಂಕ್ ಕ್ಲಿಕ್ ಮಾಡಿ- https://www.youtube.com/results?search_query=Bengaluru+Buzz