ವಿದ್ಯಾಲಕ್ಷ್ಮೀ ಪ್ರಹ್ಲಾದ್‌ ನಿರ್ದೇಶನದ ಹಾಗೂ ಆದರ್ಶ ಅಯ್ಯಂಗಾರ್‌ ನಿರ್ಮಾಣದ ‘ಘಮ’ ಕಿರುಚಿತ್ರವು ಆದರ್ಶ ಅಯ್ಯಂಗಾರ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಬಾಲ್ಯದ ನೆನಪು, ಸೋಪು, ಚರ್ಮದ ಬಣ್ಣ ಮತ್ತು..

ವಿದ್ಯಾಲಕ್ಷ್ಮೀ ಪ್ರಹ್ಲಾದ್‌ ನಿರ್ದೇಶನದ, ಆದರ್ಶ ಅಯ್ಯಂಗಾರ್‌ ನಿರ್ಮಾಣದ ‘ಘಮ’ ಹೆಸರಿನ ಕಿರುಚಿತ್ರವು ಆದರ್ಶ ಅಯ್ಯಂಗಾರ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದೆ. ಕನ್ನಡಪ್ರಭ ಪತ್ರಿಕೆಯ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ), ಪತ್ರಕರ್ತೆ ಭಾವನಾ ಬೆಳಗೆರೆ, ಸಂಗೀತ ನಿರ್ದೇಶಕ ವೀರ ಸಮರ್ಥ್‌, ನಿರ್ಮಾಪಕಿ ವಿದ್ಯಾರಾಜ್‌ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜೋಗಿ ಅವರು, ‘ಈ ಚಿತ್ರ ನೋಡುತ್ತಿದ್ದಾಗ ನಾವೇ ನಮ್ಮ ಬಾಲ್ಯದ ಓಣಿಯಲ್ಲಿ ಸಂಚರಿಸಿದಂತಾಯಿತು. ಯಾಕೆಂದರೆ ಆಗ ನಾವು ಬಳ‍ಸುತ್ತಿದ್ದ ಸೋಪು 501. ತಲೆ, ಮೈಗೆ ಹಾಗೂ ಬಟ್ಟೆಗೆ ಎಲ್ಲದಕ್ಕೂ ಇದೊಂದೇ ಸೋಪು. ಪರಿಮಳ ಬೀರುವ ಸೋಪಿನಲ್ಲಿ ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದ ದಿನ ಮಾತ್ರ ಸ್ನಾನ ಮಾಡುತ್ತಿದ್ವಿ. ಒಂದು ಸೋಪು, ಬಾಲಕಿ, ಚರ್ಮದ ಬಣ್ಣ, ಸೌಂದರ್ಯ ಇತ್ಯಾದಿ ವಿಷಯಗಳನ್ನು ಮಂಗಳೂರಿನ ಭಾಷೆಯಲ್ಲಿ ಸೊಗಸಾಗಿ ಕಟ್ಟಿಕೊಂಡಿದ್ದಾರೆ ನಿರ್ದೇಶಕರು. ಈ ಜನರೇಷನ್‌ಗೂ ಈ ಸಿನಿಮಾ ಕತೆ ತಲುಪುವಂತಿದೆ’ ಎಂದರು.

ವಿದ್ಯಾಲಕ್ಷ್ಮೀ ಪ್ರಹ್ಲಾದ್‌, ‘ನನ್ನ ಮೊದಲ ಕಿರುಚಿತ್ರ. ಬಾಲ್ಯದಲ್ಲಿ ನನ್ನ ಚಿಕ್ಕಪ್ಪ ಪರಿಮ‍ಳ ಬೀರುವ ಸೋಪು ಕೊಟ್ಟಿದ್ದರು. ಅದನ್ನು ಬಳಸಿದರೆ ಎಲ್ಲಿ ಮುಗಿದು ಹೋಗುತ್ತದೋ ಅಂತ ಬಚ್ಚಿಟ್ಟುಕೊಂಡಿದ್ದೆ. ಕೊನೆಗೆ ಅದನ್ನು ಬಳಸಲಿಕ್ಕೇ ಆಗಲಿಲ್ಲ. ಅದರ ಜೊತೆ ಹಲವು ಘಟನೆಗಳು ‘ಘಮ’ ಚಿತ್ರದ ಕತೆಯ ಹುಟ್ಟಿಗೆ ಕಾರಣ’ ಎಂದು ಹೇಳಿದರು. ‘ಅತ್ಯುತ್ತಮವಾದ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ’ ಎಂದು ಭಾವನಾ ಬೆಳಗೆರೆ ಹೇಳಿದರು.

ಸೋಪ್ ಪಡೆಯುವ ಹಂಬಲದ ಕಥೆ

ನಟಿ ಪ್ರಜ್ಞಾ ಶೆಟ್ಟಿ ಮಾತನಾಡಿ ಮಗು ಸೋಪ್ ಪಡೆಯುವ ಹಂಬಲದ ಕಥೆ ಇಷ್ಟವಾಯಿತು. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದರು. ಬಾಲಕಲಾವಿದೆ ವಜ್ರ ಭಾರ್ಗವಿ , ಕಲಾವಿದೆ ಫಾತಿಮಾ ಕಿರುಚಿತ್ರದ ಬಗ್ಗೆ ಸಂತಸ ಹಂಚಿಕೊಂಡರು. ಇನ್ನು ರಕ್ಷಿತ್‌ ತೀರ್ಥಹಳ್ಳಿ ಇದ್ದರು. ಬಾಲ ನಟಿ ವಜ್ರ ಭಾರ್ಗವಿ, ಅರ್ಪಿತ ಮೋಹಿತೆ, ಆದರ್ಶ ಅಯ್ಯಂಗಾರ್‌, ಪ್ರಜ್ಞಾ ಶೆಟ್ಟಿ, ಫಾತಿಮಾ ರೋಡ್ರಿಗಸ್‌ ಪಾತ್ರಧಾರಿಗಳು.