ಇಂದಿನ ಯುವಜನತೆ ಮದುವೆ ಹಾಗೂ ಹೊಂದಾಣಿಕೆಯಿಂದ ದೂರ ಸರಿಯುತ್ತಿರುವ ಕಾಲಘಟ್ಟದಲ್ಲಿ, ನಟ ಶಿವರಾಜ್‌ಕುಮಾರ್ ಅವರು ಯಶಸ್ವಿ ದಾಂಪತ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಪತ್ನಿ ಗೀತಾ ಅವರೊಂದಿಗಿನ ತಮ್ಮ ಸುದೀರ್ಘ ದಾಂಪತ್ಯದ ಅನುಭವವನ್ನು ಹಂಚಿಕೊಂಡಿರುವ ಅವರು, ಪರಸ್ಪರ ಹೊಂದಾಣಿಕೆ ಮತ್ತು ತ್ಯಾಗವೇ ಸುಂದರ ಜೀವನದ ಆಧಾರ ಎಂದಿದ್ದಾರೆ.
ಬೆಂಗಳೂರು: ಇಂದು ಸಂಬಂಧಗಳಿಗೆ ಬೆಲೆಯೇ ಇಲ್ಲ ಎಂದು ಹೇಳುವವರೇ ಹೆಚ್ಚು. ಅದರಲ್ಲಿಯೂ ದಂಪತಿಯ ನಡುವೆ ಹೊಂದಾಣಿಕೆ ಕಡಿಮೆಯಾಗುತ್ತಿದೆ. ಡಿವೋರ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕಪುಟ್ಟ ವಿಷಯಗಳಿಗೂ ಕೋರ್ಟ್ ಬಾಗಿಲಿಗೆ ಹೋಗುವ ದಂಪತಿ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಹಲವು ಆರೋಪಗಳು ಇವೆ. ಅದರಲ್ಲಿಯೂ ಇಂದಿನ ಯುವಕ ಯುವತಿಯರು ಅರ್ಥಾತ್ GenZಗಳು ಮದುವೆಯ ಬಗ್ಗೆ ಅಪಸ್ವರ ಎತ್ತುವವರೇ ಹೆಚ್ಚು. ಮದುವೆಯಾಗುವುದೇ ಇಲ್ಲ, ಆ ಬಂಧನವೇ ನಮಗೆ ಬೇಡ ಎನ್ನುವವರು ಹಲವರಾಗುತ್ತಿದ್ದಾರೆ. ಮದುವೆಯೆನ್ನುವುದು ಎಷ್ಟೋ ಮಂದಿ ಹೆಣ್ಣು ಮಕ್ಕಳಿಗೆ ಬಂಧನ ಎನ್ನಿಸುವುದು ಇದೆ. ಹೊಂದಾಣಿಕೆ ಕಷ್ಟ ಎನ್ನುವುದು ಮೊದಲೇ ಅರಿತುಕೊಳ್ಳುತ್ತಿದ್ದಾರೆ. ಗಂಡ, ಅತ್ತೆ, ಮಾವನ ಮನಸ್ಥಿತಿಗೆ ಹೊಂದಿಕೊಂಡು ಅಲ್ಲಿ ಇರುವುದು ಸಾಧ್ಯವೇ ಇಲ್ಲ ಎನ್ನುವ ಮಾತು ಬಹುದೊಡ್ಡ ಪ್ರಮಾಣದಲ್ಲಿ ಕೇಳಿಬರುತ್ತಿದ್ದರೆ, ಕೆಲವು ಯುವಕರು ಕೂಡ ಇಂದು ಯುವತಿಯರ ಡಿಮಾಂಡ್ಗಳಿಗೆ ಸುಸ್ತಾಗಿ ಮದುವೆಯೇ ಬೇಡ ಎನ್ನುತ್ತಿದ್ದಾರೆ.
ಇವೆಲ್ಲವುಗಳ ನಡುವೆಯೂ ಸುಖಮಯ ದಾಂಪತ್ಯ ಜೀವನ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಹಲವರನ್ನು ಕಾಡುವುದು ಇದೆ. ಇದೇ ಪ್ರಶ್ನೆಯನ್ನು ನಟಿ ಸಂಜನಾ ಆನಂದ್ ಅವರು, ನಟ ಶಿವರಾಜ್ ಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ. ನಾನು ಬಹಳ ವರ್ಷಗಳಿಂದ ನೋಡುತ್ತಿದ್ದೇನೆ. ಮದುವೆಯಾಗಿ ಇಷ್ಟು ವರ್ಷಗಳಾದ ಮೇಲೂ ನೀವು ಮತ್ತು ಪತ್ನಿ ಗೀತಾ ಅವರು ಎಲ್ಲಿಗೆ ಹೋಗುವುದಿದ್ದರೂ ಕೈ ಕೈ ಹಿಡಿದು ಹೋಗುತ್ತೀರಿ, ಇಂದಿಗೂ ಅದೇ ಪ್ರೀತಿಯನ್ನು ಉಳಿಸಿಕೊಂಡಿದ್ದೀರಿ. ಹೀಗೆ ದಾಂಪತ್ಯದ ಗುಟ್ಟೇನು, ಇಂದಿನ ಪೀಳಿಗೆಯವರಿಗೆ ಸುಖಮಯ ದಾಂಪತ್ಯದ ಕುರಿತು ನೀವು ಏನು ಸಲಹೆ ಕೊಡುವಿರಿ ಎಂದು ಪ್ರಶ್ನಿಸಿದ್ದಾರೆ.
ದಾಂಪತ್ಯ ಎಂದರೇನು?
ಅದಕ್ಕೆ, ಶಿವರಾಜ್ ಕುಮಾರ್ ನೀಡಿರುವ ಉತ್ತರಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಒಂದು ಕೈ ಹಿಡಿದ ಮೇಲೆ ಆ ಕೈಯನ್ನು ಹಿಡಿದುಕೊಂಡು ಹೋಗುತ್ತಲೇ ಇರಬೇಕು ಎಂದಿದ್ದಾರೆ. ಪರಸ್ಪರ ಅಂಡರ್ಸ್ಟ್ಯಾಂಡಿಂಗ್ ಇರಬೇಕು, ಇಬ್ಬರಲ್ಲಿಯೂ ತ್ಯಾಗ ಮನೋಭಾವನೆ ಇರಬೇಕು. ದಾಂಪತ್ಯದಲ್ಲಿ ನಾನು ಗೆದ್ದೆ, ಅವರು ಗೆದ್ದೆ ಎನ್ನುವ ಪ್ರಶ್ನೆ ಬರುವುದಿಲ್ಲ. ನಮ್ಮ ಲೈಫ್ ಗೆಲ್ಲಬೇಕು ಅಷ್ಟೇ. ಹೀಗೆ ಆಗಬೇಕು ಎಂದರೆ,, ಗಂಡನಾದ್ರೂ ಒಮ್ಮೆ ಸೋಲಬೇಕು, ಹೆಂಡ್ತಿಯಾದರೂ ಒಮ್ಮೆ ಸೋಲಬೇಕು. ಹೀಗೆ ಆದರೆ ಲೈಫ್ ಸುಂದರವಾಗಿ ಇರುತ್ತದೆ ಎಂದಿದ್ದಾರೆ.
ದಂಪತಿ ಕುರಿತು
ಅಂದಹಾಗೆ, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಗೀತಾ ಅವರು ಮೇ 19, 1986ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಸ್ಯಾಂಡಲ್‌ವುಡ್‌ನ ಆದರ್ಶ ದಂಪತಿಯೆಂದು ಗುರುತಿಸಿಕೊಂಡಿದ್ದಾರೆ. ಶಿವಣ್ಣ ಅವರು ಸಾರ್ವಜನಿಕವಾಗಿ ಹಲವು ಬಾರಿ ತಮ್ಮ ಪತ್ನಿಯನ್ನು 'ನನ್ನ ಕಣ್ಣುಗಳು' ಎಂದು ಪ್ರೀತಿಯಿಂದ ಬಣ್ಣಿಸಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಅನ್ಯೂನ್ಯ ಹಾಗೂ ಮಾದರಿ ಜೋಡಿಯಾಗಿದ್ದಾರೆ. ಬಹುತೇಕರಿಗೆ ತಿಳಿದಿರುವಂತೆ, ಗೀತಾ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿ. ಶಿವರಾಜ್‌ಕುಮಾರ್ ಅವರು ವರನಟ ಡಾ. ರಾಜ್‌ಕುಮಾರ್ ಅವರ ಹಿರಿಯ ಪುತ್ರ. ಈ ದಂಪತಿಗೆ ನಿವೇದಿತಾ ಮತ್ತು ನಿರುಪಮಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ


