ಆಸ್ತಿ ವಿವಾದದಲ್ಲಿ ಹೆತ್ತವರನ್ನೇ ನ್ಯಾಯಾಲಯಕ್ಕೆ ಎಳೆದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮೊದಲು ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಬುದ್ಧಿಮಾತು ಹೇಳಿದ ನ್ಯಾಯಪೀಠ, ಮಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
ನವದೆಹಲಿ (ಸೆ.9): ಆಸ್ತಿ ವಿವಾದಕ್ಕಾಗಿ ಹೆತ್ತ ತಂದೆ-ತಾಯಿಯನ್ನೇ ನ್ಯಾಯಾಲಯಕ್ಕೆ ಎಳೆದು ತಂದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ಕಾನೂನಿನ ಜೊತೆಗೆ ಮಾನವೀಯ ಸಂಬಂಧಗಳ ಮಹತ್ವವನ್ನು ನೆನಪಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಮಗನಿಗೆ ಮೊದಲು ನಿನ್ನ ತಾಯಿಯ ಬಳಿಗೆ ಹೋಗಿ, ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿ ಆಶೀರ್ವಾದ ಪಡೆದುಕೋ ಎಂದು ಮೌಖಿಕವಾಗಿ ಬುದ್ಧಿಮಾತು ಹೇಳಿದ್ದಲ್ಲದೆ, ಆತ ಸಲ್ಲಿಸಿದ್ದ ಅರ್ಜಿಯನ್ನೇ ವಜಾಗೊಳಿಸಿದೆ. ತಂದೆ-ತಾಯಿಗೆ ಸೇರಿದ ಆಸ್ತಿಯ ಮೊದಲ ಮಹಡಿಯಲ್ಲಿ ವಾಸವಿದ್ದ ಮಗ ಮತ್ತು ಸೊಸೆ, ಇಡೀ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಹೆತ್ತವರ ಮೇಲೆ ದೌರ್ಜನ್ಯ ಎಸಗುತ್ತಿದ್ದರು ಎಂಬುದು ಈ ಪ್ರಕರಣದ ಪ್ರಮುಖ ಆರೋಪವಾಗಿತ್ತು.
ಪ್ರಕರಣದ ಹಿನ್ನೆಲೆ
ಲೈವ್ ಲಾ (Live Law) ವರದಿಯ ಪ್ರಕಾರ, ಈ ಪ್ರಕರಣವು ದೆಹಲಿಯಲ್ಲಿರುವ ಬೃಹತ್ ಆಸ್ತಿಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಈ ಆಸ್ತಿಯ ಸಂಪೂರ್ಣ ಒಡೆತನವನ್ನು ತಂದೆ-ತಾಯಿ ಹೊಂದಿದ್ದರು. ಅವರು ಪ್ರೀತಿ ಮತ್ತು ಕರುಣೆಯಿಂದ ತಮ್ಮ ಮಗ ಮತ್ತು ಸೊಸೆಗೆ ಯಾವುದೇ ಬಾಡಿಗೆಯನ್ನು ಪಡೆಯದೆ ಮೊದಲ ಮಹಡಿಯಲ್ಲಿ ವಾಸಿಸಲು ಅವಕಾಶ ನೀಡಿದ್ದರು. ಅಂದರೆ, ಮಗ ಮತ್ತು ಸೊಸೆಗೆ ಆ ಆಸ್ತಿಯಲ್ಲಿ ಯಾವುದೇ ಕಾನೂನಾತ್ಮಕ ಅಥವಾ ಒಡೆತನದ ಹಕ್ಕಿರಲಿಲ್ಲ, ಬದಲಾಗಿ ಕೇವಲ ಹೆತ್ತವರ ಅನುಮತಿಯ ಮೇರೆಗೆ ವಾಸಿಸುವ ಹಕ್ಕಷ್ಟೇ ಇತ್ತು.
ಆದರೆ, ದಿನಕಳೆದಂತೆ ಮಗ ಮತ್ತು ಆತನ ಪತ್ನಿ ತಮ್ಮ ತಂದೆ-ತಾಯಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ತೀವ್ರ ಒತ್ತಡ ಹೇರಿದ್ದರು. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ, ಹೆತ್ತವರು ಮಗನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ (Public Notice) ನೀಡಿದ್ದರು.
ನಕಲಿ ದಾಖಲೆಗಳ ಸೃಷ್ಟಿ ಮತ್ತು ಎಫ್‌ಐಆರ್
ತಂದೆ-ತಾಯಿಯ ಆರೋಪದ ಪ್ರಕಾರ, ಮಗ ಮತ್ತು ಸೊಸೆ ಆಸ್ತಿಯ ಒಡೆತನ ಸಾಧಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಇದರಿಂದ ಬೇಸತ್ತ ತಂದೆ-ತಾಯಿ ಮಗನ ವಿರುದ್ಧ ಎಫ್‌ಐಆರ್ ದಾಖಲಿಸಿ, ಆತನಿಗೆ ನೀಡಿದ್ದ ವಾಸದ ಅನುಮತಿಯನ್ನು ಕಾಯಿದೆಯನ್ವಯ ರದ್ದುಗೊಳಿಸಿ, ತಕ್ಷಣವೇ ಮೊದಲ ಮಹಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಟು ಮಾತು
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಜಸ್ಟಿಸ್ ಶರ್ಮಾ ಅವರು ಮಗನ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನೀನು ತಕ್ಷಣವೇ ನಿನ್ನ ತಾಯಿಯ ಬಳಿಗೆ ಹಿಂತಿರುಗಬೇಕು, ಆಕೆಯ ಕಾಲಿಗೆ ಬಿದ್ದು ಮಾಡಿದ ತಪ್ಪಿಗೆ ಕ್ಷಮೆ ಕೇಳಿ, ಆಕೆಯ ಆಶೀರ್ವಾದವನ್ನು ಪಡೆಯಬೇಕು ಎಂದು ಹೇಳಿದರು. ನ್ಯಾಯಾಲಯದಲ್ಲಿದ್ದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, 'ತಾಯಿಯೊಂದಿಗೆ ಮಗ ಈ ರೀತಿ ನಡೆದುಕೊಳ್ಳುವುದು ತಪ್ಪಲ್ಲವೇ?'ಎಂದು ಪ್ರಶ್ನಿಸಿದರು.
ಟ್ರಯಲ್ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ
ತಮ್ಮ ಆಸ್ತಿಯನ್ನು ಮರಳಿ ಪಡೆಯಲು, ಮಗ-ಸೊಸೆಗೆ ಶಾಶ್ವತ ತಡೆಯಾಜ್ಞೆ ನೀಡಲು ಹಾಗೂ ನಷ್ಟ ಪರಿಹಾರ ಕೋರಿ ತಂದೆ-ತಾಯಿ ವಿಚಾರಣಾ ನ್ಯಾಯಾಲಯದ (Trial Court) ಮೆಟ್ಟಿಲೇರಿದ್ದರು. ಟ್ರಯಲ್ ಕೋರ್ಟ್ ತಂದೆ-ತಾಯಿಯೇ ಆಸ್ತಿಯ ನಿಜವಾದ ಮಾಲೀಕರು ಎಂದು ತೀರ್ಪು ನೀಡಿ, ಮಗನಿಗೆ ನೀಡಿರುವ ಅನುಮತಿಯನ್ನು ಸರಿಯಾಗಿಯೇ ರದ್ದುಗೊಳಿಸಿರುವುದರಿಂದ ತಕ್ಷಣವೇ ಮನೆ ಖಾಲಿ ಮಾಡುವಂತೆ ಮಗ ಹಾಗೂ ಸೊಸೆಗೆ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಮಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಏಪ್ರಿಲ್ 17 ರಂದು ದೆಹಲಿ ಹೈಕೋರ್ಟ್ ಟ್ರಯಲ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (Special Leave Petition) ಸಲ್ಲಿಸಿದ್ದನು. ಇದೀಗ ಸುಪ್ರೀಂ ಕೋರ್ಟ್ ಕೂಡ ಮಗನ ಅರ್ಜಿಯನ್ನು ವಜಾಗೊಳಿಸಿದ್ದು, ಕೆಳ ನ್ಯಾಯಾಲಯಗಳ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.


