ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ರಾಷ್ಟ್ರೀಯ ಕ್ರೀಡಾ ನೀತಿಯ ವ್ಯಾಪ್ತಿಗೆ ಯಾಕೆ ತರಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಲೋಧಾ ಸಮಿತಿ ಶಿಫಾರಸುಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ವಿಚಾರಣೆಯಲ್ಲಿ, ಪದಾಧಿಕಾರಿಗಳ ಸೇವಾ ನಿಯಮಗಳ ಬಗ್ಗೆಯೂ ಕೋರ್ಟ್ ಸ್ಪಷ್ಟನೆ ಕೇಳಿದ್ದು, ಇದು ಬಿಸಿಸಿಐ ಆಡಳಿತದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ.

ನವದೆಹಲಿ: ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಯಾಕೆ ರಾಷ್ಟ್ರೀಯ ಕ್ರೀಡಾ ನೀತಿಯ ವ್ಯಾಪ್ತಿಗೆ ತರಬಾರದು ಅಂತ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳ ಸೇವಾ ನಿಯಮಗಳು ಮತ್ತು ಷರತ್ತುಗಳನ್ನು ಈ ಕಾಯ್ದೆಯಡಿ ಯಾಕೆ ತರಬಾರದು ಅಂತಾನೂ ಕೋರ್ಟ್ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠ, ಮಂಗಳವಾರ ಕೆಲವು ಕ್ರಿಕೆಟ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುವಾಗ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ಪಷ್ಟ ಉತ್ತರ ನೀಡುವಂತೆ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಅಂದಹಾಗೆ, ಈ ಕೇಸ್ 2014ರಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಲೋಧಾ ಸಮಿತಿ ಶಿಫಾರಸುಗಳು ಮತ್ತು ಹಿಂದಿನ ಆದೇಶಗಳು

ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ಮತ್ತು ಪಾರದರ್ಶಕತೆ ಖಚಿತಪಡಿಸಲು, ಸುಪ್ರೀಂ ಕೋರ್ಟ್ ಈ ಹಿಂದೆ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತ್ತು. ಲೋಧಾ ಸಮಿತಿ ಮುಂದಿಟ್ಟಿದ್ದ ಸಂವಿಧಾನಾತ್ಮಕ ಬದಲಾವಣೆಗಳು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಸುಪ್ರೀಂ ಕೋರ್ಟ್ ನಂತರ ಒಪ್ಪಿಕೊಂಡಿತ್ತು.

ನಂತರ, 2022ರ ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಸಂವಿಧಾನದಲ್ಲಿ ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಇದರ ಪ್ರಕಾರ, ಒಬ್ಬ ಪದಾಧಿಕಾರಿ ಸತತ 12 ವರ್ಷಗಳ ಕಾಲ (6 ವರ್ಷ ರಾಜ್ಯ ಸಂಸ್ಥೆಯಲ್ಲಿ ಮತ್ತು 6 ವರ್ಷ ಬಿಸಿಸಿಐನಲ್ಲಿ) ಹುದ್ದೆಯಲ್ಲಿ ಮುಂದುವರಿಯಬಹುದು. ನಂತರ 3 ವರ್ಷಗಳ ಕಡ್ಡಾಯ 'ಕೂಲಿಂಗ್-ಆಫ್' ಅವಧಿ (ವಿರಾಮ) ತೆಗೆದುಕೊಂಡರೆ ಸಾಕು ಅಂತ ತೀರ್ಪು ನೀಡಿತ್ತು. ಆದರೆ, ಇದಕ್ಕೂ ಮೊದಲು ಕೋರ್ಟ್ ಒಪ್ಪಿದ್ದ ನಿಯಮದ ಪ್ರಕಾರ, ರಾಜ್ಯ ಸಂಸ್ಥೆ ಅಥವಾ ಬಿಸಿಸಿಐನಲ್ಲಿ ಸತತವಾಗಿ ಎರಡು ಅವಧಿಗೆ (ತಲಾ ಮೂರು ವರ್ಷ) ಹುದ್ದೆ ಅಲಂಕರಿಸಿದರೆ, ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿ ಕಡ್ಡಾಯವಾಗಿತ್ತು. ಕ್ರೀಡಾ ಕ್ಷೇತ್ರದಲ್ಲಿ ಪಾರದರ್ಶಕತೆ ತರುವ ಗುರಿ ಹೊಂದಿರುವ 2025ರ ಹೊಸ ಕ್ರೀಡಾ ನೀತಿಯನ್ನು ಬಿಸಿಸಿಐಗೂ ಅನ್ವಯಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮುಂಬರುವ ದಿನಗಳಲ್ಲಿ ಹೆಚ್ಚಿನ ವಿಚಾರಣೆ ನಡೆಸಲಿದೆ.

ಏಷ್ಯಾಡ್‌ನಲ್ಲಿ ಆಯೋಜಕರು ನೀಡಿದ ಹೋಟೆಲ್‌ನಲ್ಲಿಯೇ ಕ್ರಿಕೆಟಿಗರ ವಾಸ್ತವ್ಯ: ಬಿಸಿಸಿಐ

ನವದೆಹಲಿ: ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್‌ ಸೌಲಭ್ಯಗಳ ಬಗ್ಗೆ ಬಿಸಿಸಿಐ ಅಸಮಾಧಾನ ಸುದ್ದಿ ನಡುವೆ ಕ್ರಿಕೆಟಿಗರು ಏಷ್ಯಾಡ್‌ ಗೇಮ್ಸ್‌ ಆಯೋಜಕರು ನೀಡಿದ ಹೋಟೆಲ್‌ಗಳಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ’ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬಿಸಿಸಿಐ ಸ್ಪಷ್ಟಪಡಿಸಿದೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕ್ರೀಡಾಕೂಟ ನಡೆಯಲಿರುವ ನಗೋಯಾದಲ್ಲಿ ಉನ್ನತ ದರ್ಜೆಯ ಹೋಟೆಲ್‌ಗಳ ಕೊರತೆಯಿಂದಾಗಿ ಕ್ರಿಕೆಟಿಗರಿಗೆ ಹೋಟೆಲ್‌ಗಳ ವಸತಿ ಸಮಸ್ಯೆ ಉದ್ಭವಿಸಿದೆ. ಕ್ರಿಕೆಟಿಗರಿಗೆ ವಸತಿ ದೊಡ್ಡ ಸಮಸ್ಯೆಯಲ್ಲ. ಬಿಸಿಸಿಐ ಮತ್ತು ಆಟಗಾರರು ಈ ವ್ಯವಸ್ಥೆಯಿಂದ ತೃಪ್ತರಾಗಿದ್ದಾರೆ. ಅವರು ಏನು ಒದಗಿಸುತ್ತಾರೆಯೋ ನಾವು ಅಲ್ಲಿಯೇ ಉಳಿದುಕೊಳ್ಳುತ್ತೇವೆ, ಅವರು ಕೂಡ ಆಟಗಾರರಿಗೆ ಅರಾಮಾದಾಯಕ ವಸತಿ ಸೌಕರ್ಯ ನೀಡುತ್ತಾರೆ ಎಂದು ಭಾವಿಸುತ್ತೇವೆ’ ಎಂದು ಹೇಳಿದ್ದಾರೆ.