ರಕ್ಷಾ ಬಂಧನದ ದಿನದಂದು ಉದ್ಯಮಿಯೊಬ್ಬ ತನ್ನ ಸಹೋದರಿಗೆ 5 ಕೋಟಿ ರೂಪಾಯಿ ಮೌಲ್ಯದ Maserati MC20 ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಈ ಸುದ್ದಿಯ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲವಾದರೂ, ಈ ದುಬಾರಿ ಉಡುಗೊರೆಯು ನೆಟ್ಟಿಗರಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಇಂದು ರಕ್ಷಾ ಬಂಧನ. ಸಹೋದರ-ಸಹೋದರಿಯರ ಪ್ರೀತಿಯನ್ನು ಬಿಂಬಿಸುವ ಹಬ್ಬವಿದು. ಅಣ್ಣನಾದವ ತನ್ನ ತಂಗಿಯನ್ನು ಸದಾ ಶ್ರೀರಕ್ಷೆಯಿಂದ ಕಾಪಾಡಬೇಕು ಎನ್ನುವ ದ್ಯೋತಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆಯೇ ಇಂದು ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗೆ ರಾಖಿಯನ್ನು ಕಟ್ಟುವ ಮೂಲಕ ಹಬ್ಬ ಆಚರಿಸಿದರು. ಸಹೋದರಿ ಪ್ರೀತಿಯಿಂದ ರಾಖಿ ಕಟ್ಟಿದಾಗ, ಸಹೋದರ ತನ್ನ ಕೈಯಲ್ಲಿ ಸಾಧ್ಯವಾದಷ್ಟು ಹಣವನ್ನೋ, ಉಡುಗೊರೆಯನ್ನೋ ನೀಡುತ್ತಾನೆ. ಇದೇನು ಕಡ್ಡಾಯ ಅಲ್ಲದಿದ್ದರೂ, ಸಹೋದರಿಗೆ ಪ್ರೀತಿಯಿಂದ ಕೊಡುವ ಕಾಣಿಕೆ ಇದಾಗಿದೆ.

ಆದರೆ ಇಂದು ಇದೊಂದು ರೀತಿಯಲ್ಲಿ ವ್ಯವಹಾರ ಆಗುತ್ತಿದೆ. ರಕ್ಷಾ ಬಂಧನ ಯಾಕಾದರೂ ಬಂತೇನೋ ಎನ್ನುವ ಹಾಗೆ ಕೆಲವು ಗಂಡುಮಕ್ಕಳು ಪರದಾಡುತ್ತಿದ್ದಾರೆ. ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಇದೊಂದು ರೀತಿಯಲ್ಲಿ ಆಟವಾಗಿ ಬಿಟ್ಟಿದೆ. ಹುಡುಗಿಯರು ಬಂದು ತಮ್ಮನ್ನು ಚುಡಾಯಿಸುವ ಹುಡುಗರಿಗೆ ಕಟ್ಟುವುದು, ಅವರು ಓಡಿ ಹೋಗುವುದು... ಹೀಗೆ ಒಂದು ಪವಿತ್ರ ಹಬ್ಬವನ್ನು ಅಸಹ್ಯಕರ ರೀತಿಯಲ್ಲಿ ಬದಲಾಯಿಸಿಬಿಟ್ಟಿದ್ದಾರೆ ಯುವಕ, ಯುವತಿಯರು. ಇದು ಒಂದೆಡೆಯಾದರೆ, ಹಣಕ್ಕಾಗಿಯೇ ರಾಖಿ ಕಟ್ಟುವವರು ಇದ್ದಾರೆ. ಯಾರಿಗೆ ರಾಖಿ ಕಟ್ಟಿದರೆ ತಮಗೆ ದುಡ್ಡು ಸಿಗುತ್ತದೆ ಎಂದು ಲೆಕ್ಕಾಚಾರ ಹಾಕಿ ರಾಖಿ ಕಟ್ಟುವ ಕಾರಣ, ಎಷ್ಟೋ ಹುಡುಗರು ದುಡ್ಡಿಗಾಗಿ ಪರದಾಡುವಂತಾಗಿದೆ.

5 ಕೋಟಿಯ ಕಾರು

ಅದೇನೇ ಇದ್ದರೂ, ತಮ್ಮ ಅಂತಸ್ತಿಗೆ ತಕ್ಕಂತೆ ಕೆಲವು ಸಹೋದರರು ಗಿಫ್ಟ್​ ಕೊಡುವುದು ಇದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್​ ಆಗ್ತಿರೋದು, ಉದ್ಯಮಿಯಾಗಿರುವ ಅಣ್ಣನೊಬ್ಬ ತನ್ನ ತಂಗಿಗೆ, ಸುಮಾರು ಐದು ಕೋಟಿ ರೂಪಾಯಿ ಬೆಲೆ ಬಾಳುವ Maserati MC20 luxury sports car ಉಡುಗೊರೆಯಾಗಿ ನೀಡಿದ್ದಾನೆ ಎನ್ನುವುದಕ್ಕೆ. ಜಾಲತಾಣದಲ್ಲಿ ವೈರಲ್​ ಆಗ್ತಿರೋ ಈ ಸುದ್ದಿಯಲ್ಲಿ, ರಕ್ಷಾ ಬಂಧನದಂದು, ರಾಕೇಶ್ ಕುಮಾರ್ ಎಂಬ ಉದ್ಯಮಿ ತನ್ನ ಸಹೋದರಿಗೆ ಅವಳು ಎಂದಿಗೂ ನಿರೀಕ್ಷಿಸದ ಅಚ್ಚರಿಯನ್ನು ನೀಡಿದ್ದಾಳೆಂದು ವರದಿಯಾಗಿದೆ.

ಯಾರೀ ಉದ್ಯಮಿ?

ಅವಳು ಅವನಿಗೆ ರಾಖಿ ಕಟ್ಟಿದ ನಂತರ, ಅವಳು ಸ್ಮರಣೀಯ ಕ್ಷಣವಾಗುವ ಉಡುಗೊರೆಯನ್ನು ಬಯಸಿದ್ದಳು. ಮತ್ತು ಅವಳ ನಿರೀಕ್ಷೆಗೂ ಮೀರಿದ ಉಡುಗೊರೆಯನ್ನು ಅಣ್ಣ ನೀಡಿದ ಎಂದು ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೋಗಳನ್ನು ಶೇರ್​ ಮಾಡಲಾಗಿದೆ. ಆದರೆ ಇದು ಎಲ್ಲಿಯದ್ದು, ಇದರ ಸತ್ಯಾಸತ್ಯತೆ ಮಾತ್ರ ಬಹಿರಂಗಗೊಳ್ಳಲಿಲ್ಲ. ಇದು ನಿಜವೋ, ಎಐ ಸೃಷ್ಟಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಜಾಲತಾಣದಲ್ಲಂತೂ ಸಾಕಷ್ಟು ಹವಾ ಕ್ರಿಯೇಟ್​ ಮಾಡುತ್ತಿದೆ ಈ ಉಡುಗೊರೆ! ಕೆಲವರು ಈತ ಯಾರು ಇರಬಹುದು ಎಂದು ತಡಕಾಡುತ್ತಿದ್ದಾರೆ. ನಮಗೂ ಇಂಥ ಅಣ್ಣ ಇರಬಾರದಿತ್ತೆ ಎಂದು ಕೆಲವು ಹೆಣ್ಣುಮಕ್ಕಳು ಕಮೆಂಟ್​ ಮಾಡುತ್ತಿದ್ದಾರೆ.