ಟೀಮ್ ಇಂಡಿಯಾ ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಗಣಪತಿ ವಿಸರ್ಜನೆ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು.

ಟೀಮ್ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ (Yuzvendra Chahal) ಅವರ ಮಾಜಿ ಪತ್ನಿ ಹಾಗೂ ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ (Dhanashree Verma), ಗಣಪತಿ ವಿಸರ್ಜನೆಯ (Ganpati Visarjan) ವೇಳೆ ತೀವ್ರ ಭಾವುಕರಾಗಿ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಗಣೇಶೋತ್ಸವದ ಕೊನೆಯ ದಿನದಂದು ಗಣಪತಿಗ ವಿದಾಯ ಹೇಳುವ ಕ್ಷಣದಲ್ಲಿ ಧನಶ್ರೀ ತಮ್ಮ ಕಣ್ಣೀರನ್ನು ತಡೆದುಕೊಳ್ಳಲಾಗದೆ ಭಾವುಕರಾಗಿದ್ದು, ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಕಳೆದ ವರ್ಷದ ಮಾರ್ಚ್‌ನಲ್ಲಿ (ಮಾರ್ಚ್ 2025) ಕಾನೂನುಬದ್ಧವಾಗಿ ವಿಚ್ಛೇದನ (Divorce) ಪಡೆದು ಬೇರೆಯಾಗಿದ್ದರು.

ಕ್ಯಾಮೆರಾದಲ್ಲಿ ಸೆರೆಯಾಯ್ತು ಭಾವುಕ ಕ್ಷಣ

ಗಣಪತಿ ವಿಸರ್ಜನೆಯ ಪ್ರತಿಯೊಂದು ಕ್ಷಣವೂ ಭಕ್ತರಿಗೆ ಅತ್ಯಂತ ಭಾವನಾತ್ಮಕವಾಗಿರುತ್ತದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಧನಶ್ರೀ ವರ್ಮಾ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಿಯಾಗಿದ್ದು, ಅವರ ಸುತ್ತಲೂ ನೂರಾರು ಭಕ್ತಾದಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕ್ಯಾಮೆರಾಗಳಿದ್ದವು. ಮೂರ್ತಿಯನ್ನು ನೀರಿಗೆ ವಿಸರ್ಜನೆ ಮಾಡುವಾಗ ಧನಶ್ರೀ ಇದ್ದಕ್ಕಿದ್ದಂತೆ ಭಾವುಕರಾಗಿದ್ದು, ಅವರ ಕಣ್ಣುಗಳಿಂದ ನೀರು ಹರಿಯುತ್ತಿರುವುದು ಹಾಗೂ ಮುಖದಲ್ಲಿ ಬೇಸರದ ಭಾವನೆ ಎದ್ದು ಕಾಣುತ್ತಿತ್ತು. ಜನಸಂದಣಿಯ ನಡುವೆ ನಡೆದ ಈ ಭಾವನಾತ್ಮಕ ಕ್ಷಣ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ.

ಕೋವಿಡ್‌ ಕಾಲದ ಪ್ರೇಮಕಥೆ - ಮಾರ್ಚ್ 2025 ರಲ್ಲಿ ಡಿವೋರ್ಸ್!

ಧನಶ್ರೀ ವರ್ಮಾ ಅವರ ವೈಯಕ್ತಿಕ ಜೀವನವು ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರೊಂದಿಗಿನ ಸಂಬಂಧದ ವಿಚಾರವಾಗಿ ದೀರ್ಘಕಾಲದಿಂದ ಮಾಧ್ಯಮಗಳಲ್ಲಿ ಸುದ್ದಿಯಲ್ಲಿತ್ತು. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಇಬ್ಬರ ನಡುವೆ ಮೊದಲ ಭೇಟಿಯಾಗಿತ್ತು. ಚಹಾಲ್ ಅವರು ಧನಶ್ರೀ ಬಳಿ ಡ್ಯಾನ್ಸ್ ಕಲಿಯಲು ಸಂಪರ್ಕಿಸಿದ್ದರು. ಆ ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೇಮಕ್ಕೆ ತಿರುಗಿ ಡಿಸೆಂಬರ್ 2020 ರಲ್ಲಿ ಗುರುಗ್ರಾಮದಲ್ಲಿ ವಿಜೃಂಭಣೆಯಿಂದ ವಿವಾಹವಾಗಿದ್ದರು.

ಆದರೆ ಈ ವೈವಾಹಿಕ ಜೀವನ ಹೆಚ್ಚು ಕಾಲ ಬಾಳಿಕೆ ಬರಲಿಲ್ಲ. ವಿಚ್ಛೇದನದ ಅರ್ಜಿಯಲ್ಲಿ ಇಬ್ಬರೂ ಜೂನ್ 2022 ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಅಂತಿಮವಾಗಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು ಮಾರ್ಚ್ 2025 ರಲ್ಲಿ ಇಬ್ಬರಿಗೂ ಅಧಿಕೃತವಾಗಿ ವಿಚ್ಛೇದನ ಸಿಕ್ಕಿತ್ತು.

ಡಿವೋರ್ಸ್ ನಂತರದ ಚರ್ಚೆಗಳು ಹಾಗೂ 'ರೈಸ್‌ ಅಂಡ್ ಫಾಲ್' ರಿಯಾಲಿಟಿ ಶೋ

ಯಜುವೇಂದ್ರ ಚಹಾಲ್ ಅವರಿಂದ ಬೇರ್ಪಟ್ಟ ನಂತರವೂ ಧನಶ್ರೀ ಅವರ ವೈಯಕ್ತಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಗಳು ನಡೆಯುತ್ತಲೇ ಇವೆ. ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ಪಂದ್ಯದ ವೇಳೆ ಚಹಾಲ್ ಅವರು ದುಬೈನಲ್ಲಿ ಆರ್‌ಜೆ ಮಹವಶ್ (RJ Mahvash) ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದು ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿಗಳಿಗೆ ಕಾರಣವಾಗಿತ್ತು. ಆದರೆ ಆರ್‌ಜೆ ಮಹವಶ್ ನಾವು ಕೇವಲ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದರು. ತದನಂತರ ಚಹಾಲ್ ಮತ್ತು ಮಹವಶ್ ನಡುವಿನ ಸ್ನೇಹವೂ ಮುರಿದುಬಿದ್ದಿತ್ತು.

ಮತ್ತೊಂದೆಡೆ, ಧನಶ್ರೀ ವರ್ಮಾ ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಅನುಭವಗಳ ಬಗ್ಗೆ ಹಲವು ಬಾರಿ ಮುಕ್ತವಾಗಿ ಮಾತನಾಡಿದ್ದಾರೆ. ಅವರು 'ರೈಸ್ ಅಂಡ್ ಫಾಲ್' (Rise and Fall) ರಿಯಾಲಿಟಿ ಶೋನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆ ಶೋನಲ್ಲಿ ಚಹಾಲ್ ಅವರೊಂದಿಗಿನ ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಧನಶ್ರೀ ಹಂಚಿಕೊಂಡಿದ್ದ ವಿಚಾರಗಳು ಭಾರಿ ಸುದ್ದಿಯಾಗಿದ್ದವು.

ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಚಹಾಲ್

ಇನ್ನು ಯಜುವೇಂದ್ರ ಚಹಾಲ್ ಕಳೆದ ಸುದೀರ್ಘ ಸಮಯದಿಂದ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ದೂರವೇ ಉಳಿದಿದ್ದಾರೆ. ಚಹಾಲ್ ಭಾರತ ತಂಡದ ಪರ ಕೊನೆಯ ಪಂದ್ಯವನ್ನು ಆಗಸ್ಟ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲಾಡರ್‌ಹಿಲ್‌ನಲ್ಲಿ ಆಡಿದ್ದರು. ಚಹಾಲ್ ಭಾರತ ತಂಡದ ಪರ ಇದುವರೆಗೆ 72 ಏಕದಿನ (ODI) ಮತ್ತು 80 ಟಿ20 (T20I) ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 121 ವಿಕೆಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ 96 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಹೊಂದಿದ್ದಾರೆ.

Scroll to load tweet…