ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ 2ನೇ ರಾಜ್ಯ ಭಾಷೆ ಸ್ಥಾನಮಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಜೊತೆಗೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಝೆಡ್ ನಿಯಮ ಸಡಿಲಿಕೆ ಘೋಷಣೆಯ ನಿರೀಕ್ಷೆ.
ಬೆಂಗಳೂರು (ಸೆ.17) ಕರಾವಳಿಯಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಿಸಲು ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಸೆ.18ರಂದು ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲಿದೆ.
ಜಿಲ್ಲೆಯ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ (ಪ್ರಜಾಸೌಧ) ನಡೆಯುವ ಸಂಪುಟ ಸಭೆಯಲ್ಲಿ ಪ್ರಮುಖವಾಗಿ ತುಳು ಭಾಷೆಗೆ 2ನೇ ಹೆಚ್ಚುವರಿ ರಾಜ್ಯ ಭಾಷೆ ಸ್ಥಾನಮಾನ ನೀಡುವ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಗಂಭೀರ ಪ್ರಯತ್ನ ನಡೆದಿದೆ ಎಂದು ಸಚಿವ ಶಿವರಾಜ ತಂಗಡಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಹಾಗಾಗಿ ಈ ವಿಷಯ ತುಳುನಾಡಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರಾವಳಿ ನಿಯಂತ್ರಣ ವಲಯಕ್ಕೆ(ಸಿಆರ್‌ಝೆಡ್) ಸಂಬಂಧಿಸಿ ಇರುವ ಕಠಿಣ ನಿಯಮ ಸಡಿಲಿಸುವ ಕುರಿತು ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಸಿಆರ್‌ಝೆಡ್ ನಿಯಮಗಳ ಪ್ರಕಾರ ಕಡಲತೀರದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸೇತುವೆ, ಕಟ್ಟಡ ಮತ್ತಿತರ ನಿರ್ಮಾಣ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ. ಆದರೆ, ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇಂಥ ಯೋಜನೆಗಳನ್ನು ಮೂಲಸೌಲಭ್ಯ ವ್ಯಾಪ್ತಿಗೆ ತಂದು ನಿಯಮಗಳಲ್ಲಿ ಬದಲಾವಣೆ ಮಾಡಲು ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಬಹುದೆಂಬ ನಿರೀಕ್ಷೆ ಇದೆ.
ಜಿಲ್ಲೆ ಹೆಸರು ಬದಲಾವಣೆ?:
ಮತ್ತೊಂದೊಡೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ವಿಚಾರ ಕೂಡ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಕೂಡ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಮರು ನಾಮಕರಣ ಮಾಡುವ ಕುರಿತು ಜಿಲ್ಲಾಧಿಕಾರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಬ್ರಾಂಡ್ ಮಂಗಳೂರು ಇಮೇಜ್ ಮತ್ತಷ್ಟು ಬೆಳೆಸಲು ಪೂರಕವಾಗಿ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಕುರಿತು ಚರ್ಚಿಸಿ ತೀರ್ಮಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇವುಗಳ ಜೊತೆಗೆ ಕರಾವಳಿ ಭಾಗದ ಅಭಿವೃದ್ಧಿಗೆ ವಿಶೇಷ ಯೋಜನೆ, ಪ್ಯಾಕೇಜ್ ಘೋಷಣೆಯ ನಿರೀಕ್ಷೆ ಆ ಭಾಗದ ಜನರದ್ದಾಗಿದೆ.
ಪ್ರತಿ ಗ್ರಾಪಂಗೆ 1 ಕೋಟಿ ವೆಚ್ಚ-ಖಂಡ್ರೆ:
ಇದೇ ವೇಳೆ ರಾಜ್ಯದ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಬರುವ ಸಚಿವ ಸಂಪುಟ ಸಭೆಯಲ್ಲಿ 6,000 ಕೋಟಿ ರು. ವೆಚ್ಚ ಮಾಡಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಇದಲ್ಲದೆ, ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗಾಗಿ ರಾಜ್ಯ ಸರ್ಕಾರ 10ಸಾವಿರ ಕೋಟಿ ರು. ಅನ್ನು ಖರ್ಚು ಮಾಡುವ ನಿಟ್ಟಿನಲ್ಲೂ ನಿರ್ಧಾರ ಕೈಗೊಳ್ಳುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಿದ್ದೇವೆ ಎಂದಿದ್ದಾರೆ.
ಬುಧವಾರ ಬೀದರ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಗ್ರಾಪಂಗೆ ತಲಾ ಒಂದು ಕೋಟಿ ರುಪಾಯಿಗಳಂತೆ 6,000 ಗ್ರಾಪಂಗಳಿಗೆ 6,000 ಕೋಟಿಗಳನ್ನು ಖರ್ಚು ಮಾಡಲು ಯೋಜನೆ ಸಿದ್ಧಗೊಂಡಿದ್ದು, ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯೋಜಿಸಿದೆ ಎಂದರು.


