ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಅವರ ನಿಶ್ಚಿತಾರ್ಥ ಮುರಿದುಬಿದ್ದಿದೆ. ಇದರ ಬೆನ್ನಲ್ಲೇ ಪೃಥ್ವಿ ಶಾ ತಮ್ಮ ಇನ್‌ಸ್ಟಾಗ್ರಾಮ್‌ನ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇತ್ತ ಕ್ರಿಕೆಟ್‌ನಲ್ಲೂ ಅವಕಾಶ ವಂಚಿತರಾಗಿರುವ ಅವರು ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಬದುಕಲ್ಲಿ, ವೃತ್ತಿ ಬದುಕಲ್ಲಿ ಶಿಸ್ತು ಇಲ್ಲದಿದ್ದರೆ ಜೀವನ ಹೇಗೆ ಬರ್ಬಾದ್ ಆಗಿ ಹೋಗುತ್ತದೆ ಅನ್ನೋದಕ್ಕೆ ಕ್ರಿಕೆಟಿಗ ಪೃಥ್ವಿ ಶಾ ಸಾಕ್ಷಿಯಾಗಿ ನಿಲ್ಲುತ್ತಾರೆ. ವೃತ್ತಿ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡಿರುವ ಅವರ ಬದುಕಲ್ಲಿ ಈಗ ಮತ್ತೊಂದು ಕೆಟ್ಟ ತಿರುವು ಪಡೆದಿದೆ.

ಏನಾಯ್ತು?

ಪೃಥ್ವಿ ಶಾ ಈ ಹಿಂದೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಕೃತಿ ಅಗರ್ವಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಅವರಿಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ರದ್ದಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಬೆನ್ನಲ್ಲೇ ಪೃಥ್ವಿ ಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿದ್ದ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಫೋಟೋ, ವಿಡಿಯೋ ಸೇರಿದಂತೆ ಬಹುತೇಕ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಆ ಮೂಲಕ ಕ್ರಿಕೆಟಿಗ ಮತ್ತೊಮ್ಮೆ ಬದುಕಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲವನ್ನೂ ಅಳಿಸಿಹಾಕಿರುವ ಶಾ, 10 ವರ್ಷಗಳ ಹಿಂದೆ ಹಾಕಿದ್ದ ಒಂದೇ ಒಂದು ಹಳೆಯ ಪೋಸ್ಟ್‌ ಉಳಿಸಿಕೊಂಡಿದ್ದಾರೆ. ಅದರಲ್ಲಿ ಏನಿದೆ ಅಂತಾ ನೋಡೋದಾದರೆ, ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವ ಅಗತ್ಯವಿಲ್ಲದ ಹಂತಕ್ಕೆ ತಲುಪುವವರೆಗೆ ಕಷ್ಟಪಟ್ಟು ಕೆಲಸ ಮಾಡಿ. (Work until you no longer have to introduce yourself) ಎಂಬ ಪ್ರೇರಣಾದಾಯಕ ಸಾಲುಗಳಿವೆ. ಈ ಮೂಲಕ ಅವರು ಮತ್ತೆ ತಮ್ಮ ಕ್ರಿಕೆಟ್ ಕಡೆಗೆ ಗಮನ ಹರಿಸುವ ಸುಳಿವು ನೀಡಿದ್ದಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.

ಯಾಕೆ ಹೀಗೆ ಆಯಿತು?

ಆಕೃತಿ ಹೇಳಿರುವ ಪ್ರಕಾರ.. ತುಂಬಾ ಭಾರವಾದ ಹೃದಯದಿಂದ ಈ ವಿಷಯ ಹಂಚಿಕೊಳ್ಳುತ್ತಿದ್ದೇನೆ. ನಾವಿಬ್ಬರೂ ನಮ್ಮ ಭವಿಷ್ಯದ ಗುರಿಗಳ ದೃಷ್ಟಿಯಿಂದ ಬೇರೆ ಆಗುತ್ತಿದ್ದೇವೆ. ಪ್ರಸ್ತುತ ಎದುರಾಗಿರುವ ಸನ್ನಿವೇಶಗಳ ಕಾರಣದಿಂದ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮಿಬ್ಬರ ನಡುವೆ ಪ್ರೀತಿ ಮತ್ತು ಕಾಳಜಿ ಇದೆ. ಆದರೆ ಜೀವನದ ದಾರಿಗಳು ಒಂದಾಗಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ ಎಂದು ಕೋರುತ್ತೇನೆ ಎಂದು ಬರೆದಿದ್ದಾರೆ.

ಮಾರ್ಚ್‌ನಲ್ಲಿ ನಿಶ್ಚಿತಾರ್ಥ

ಪೃಥ್ವಿ ಶಾ ಮತ್ತು ಆಕೃತಿ ನಿಶ್ಚಿತಾರ್ಥ ಕಳೆದ ಮಾರ್ಚ್‌ನಲ್ಲಿ ನಡೆದಿತ್ತು. ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ ಕ್ರಿಕೆಟಿಗ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಆಕೃತಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಕೆಲವು ನಿಗೂಢ ಪೋಸ್ಟ್‌ಗಳು ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿರುವ ಬಗ್ಗೆ ಅನುಮಾನ ಹುಟ್ಟುಹಾಕಿದ್ದವು. ಇದೀಗ ಆ ಅನುಮಾನ ನಿಜವಾಗಿದೆ.

ಮೈದಾನದ ಹೊರಗಷ್ಟೇ ಅಲ್ಲದೆ.. ಕ್ರಿಕೆಟ್ ಮೈದಾನದಲ್ಲೂ ಪೃಥ್ವಿ ಶಾ ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. 2021ರ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಅಲ್ಲೊಂದು ಇಲ್ಲೊಂದು ಉತ್ತಮ ಇನ್ನಿಂಗ್ಸ್ ಆಡಿದರೂ ರಾಷ್ಟ್ರೀಯ ತಂಡಕ್ಕೆ ಮರಳುವುದು ಸವಾಲಾಗಿದೆ. ಐಪಿಎಲ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಕ್ಕಿಲ್ಲ. ಬೆಂಚ್‌ಗೆ ಸೀಮಿತರಾಗಿದ್ದಾರೆ.