ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ನಡೆಯುತ್ತಿದ್ದ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಈ ಬಾರಿ ಭಾರತದಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದರ ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅಲ್ಲದೆ, 5ನೇ ಆವೃತ್ತಿಯ ಡಬ್ಲ್ಯುಪಿಎಲ್ ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ.
ನವದೆಹಲಿ: ಕಳೆದ 3 ಆವೃತ್ತಿಗಳಲ್ಲಿ ಭಾರತದ ಹೊರಗಡೆ, ಗಲ್ಫ್ ದೇಶಗಳಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದವು. ಆದರೆ ಈ ಬಾರಿ ಮತ್ತೆ ಭಾರತದಲ್ಲೇ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿರುವ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್, ‘ಪ್ರತಿ ವರ್ಷ ನಾವು ಹರಾಜು ಪ್ರಕ್ರಿಯೆಯನ್ನು ಭಾರತದಲ್ಲೇ ಆಯೋಜಿಸಲು ಪ್ರಯತ್ನಿಸುತ್ತೇವೆ. ಆದರೆ ಮದುವೆ ಸೀಸನ್ ಹಿನ್ನೆಲೆ ನಮಗೆ ಸೂಕ್ತ ಸ್ಥಳ ಸಿಗುತ್ತಿರಲಿಲ್ಲ. ಈ ಬಾರಿ ಖಂಡಿತಾ ಭಾರತದಲ್ಲೇ ನಡೆಸುತ್ತೇವೆ. ಮಿನಿ ಹರಾಜು ಆಗಿರುವುದರಿಂದ ನಮಗೆ ಸೂಕ್ತ ಸ್ಥಳ ಸಿಗಬಹುದು’ ಎಂದಿದ್ದಾರೆ. ಕಳೆದ 3 ಆವೃತ್ತಿಗಳ ಹರಾಜು ಪ್ರಕ್ರಿಯೆ ಕ್ರಮವಾಗಿ ಯುಎಇ ನಗರ ದುಬೈ, ಸೌದಿಯ ಜಿದ್ದಾ, ಯುಎಇ ರಾಜಧಾನಿ ಅಬುಧಾಬಿಯಲ್ಲಿ ನಡೆಸಲಾಗಿತ್ತು.
ಇನ್ನು, ಐಪಿಎಲ್‌ನ ಇಂಪ್ಯಾಕ್ಟ್ ನಿಯಮದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಧುಮಾಲ್ ತಿಳಿಸಿದ್ದು, ಇದರ ಬಗ್ಗೆ ಫ್ರಾಂಚೈಸಿಗಳು, ಆಟಗಾರರ ಜೊತೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಜ.14ರಿಂದ ಡಬ್ಲ್ಯುಪಿಎಲ್, ಅ.28ಕ್ಕೆ ಹರಾಜು
5ನೇ ಆವೃತ್ತಿಯ ಡಬ್ಲ್ಯುಪಿಎಲ್ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅ.28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಆಟಗಾರ್ತಿಯರನ್ನು ತಂಡಕ್ಕೆ ರಿಟೈನ್ ಮಾಡಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಫ್ರಾಂಚೈಸಿಗಳಿಗೆ ಸೆ.28ರ ಗಡುವು ನೀಡಲಾಗಿದೆ. ಲೀಗ್ 2027ರ ಜ.14ರಿಂದ ಫೆ.7ರ ವರೆಗೆ ನಡೆಯಲಿದೆ ಬಿಸಿಸಿಐ ತಿಳಿಸಿದೆ.
ಮಹಿಳಾ ಟಿ20 ಬೌಲರ್ಸ್ ರ್‍ಯಾಂಕಿಂಗ್: ನಂ.1 ಸ್ಥಾನ ಕಾಯ್ದುಕೊಂಡ ಶ್ರೀ ಚರಣಿ
ದುಬೈ: ಐಸಿಸಿ ಮಹಿಳಾ ಟಿ20 ಬೌಲರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಪಿನ್ನರ್ ಶ್ರೀ ಚರಣಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮಂಗಳವಾರ ಪ್ರಕಟಗೊಂಡ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅವರು ವೃತ್ತಿಬದುಕಿನ ಶ್ರೇಷ್ಠ 804 ರೇಟಿಂಗ್ ಅಂಕ ಸಂಪಾದಿಸಿದ್ದು, ಮೊದಲ ಬಾರಿ 800 ರೇಟಿಂಗ್ ಅಂಕ ದಾಟಿದ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರು 20 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇನ್ನು, ದೀಪ್ತಿ ಶರ್ಮಾ 4 ಸ್ಥಾನ ಪ್ರಗತಿ ಸಾಧಿಸಿ 2ನೇ ಸ್ಥಾನಕ್ಕೇರಿದ್ದು, ನಂದನಿ ಶರ್ಮಾ 10 ಸ್ಥಾನ ಜಿಗಿದು 94ನೇ ಸ್ಥಾನ ತಲುಪಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಶಫಾಲಿ ವರ್ಮಾ 6ನೇ ಸ್ಥಾನಕ್ಕೇರಿದ್ದು, ಸ್ಮೃತಿ ಮಂಧನಾ 5ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.


