ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಭೂಸ್ವಾಧೀನ ಪರಿಹಾರ ವಿತರಣೆಯಲ್ಲಿ ಎಸ್‌ಎಲ್‌ಒ ಮಂಜುನಾಥ್ ನಿಯಮ ಉಲ್ಲಂಘಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ರೋಹಿತ್ ಬಿ.ಆರ್. ಆರೋಪಿಸಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಇದ್ದರೂ ವಾದಿಗೆ ಮಾಹಿತಿ ನೀಡದೆ ಪ್ರತಿವಾದಿಗೆ ಹಣ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಹಾಸನ: ಚಿಕ್ಕಮಗಳೂರು- ಸಕಲೇಶಪುರ ರೈಲ್ವೆ ಭೂಸ್ವಾಧೀನ ಪರಿಹಾರದ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ನಿಯಮ ಉಲ್ಲಂಘನೆ ಹಾಗೂ ಭ್ರಷ್ಟಾಚಾರದ ಆರೋಪ ಮಾಡಿರುವ ಎಸ್. ಬೊಮ್ಮಡೀಹಳ್ಳಿ ಗ್ರಾಮದ ರೋಹಿತ್ ಬಿ.ಆರ್. ಸಂಬಂಧಪಟ್ಟ ಎಸ್‌ಎಲ್‌ಒ ಮಂಜುನಾಥ್ (ಎಚ್‌ಆರ್‌ಪಿ) ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಅಧಿಕಾರಿ ವಿರುದ್ಧ ಕೇಳಿ ಬಂದ ಆರೋಪ ಏನು?

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಲೂರು ತಾಲೂಕಿನ ಎಸ್. ಬೊಮ್ಮಡೀಹಳ್ಳಿ ಗ್ರಾಮದ ಸರ್ವೇ ನಂ.128/3/ರ 0.07.08 ಗುಂಟೆ ಹಾಗೂ ಸರ್ವೇ ನಂ.128/5ರ 0.15 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಾದಿ ಮತ್ತು ಪ್ರತಿವಾದಿಗಳನ್ನು ಕರೆಸಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಸರ್ವೇ ನಂ.129/2ರ 0.22.08 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಾದಿಗೆ ಮಾಹಿತಿ ನೀಡದೆ ಪ್ರತಿವಾದಿಯ ಪರವಾಗಿ ಪರಿಹಾರದ ಹಣ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಮಾಹಿತಿ ನೀಡದೇ ಹಣ ಬಿಡುಗಡೆಗೆ ಪ್ರಯತ್ನ

ಸರ್ವೇ ನಂ.129/1ರ 0.22.08 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಾದಿ ಮತ್ತು ಪ್ರತಿವಾದಿ ಇಬ್ಬರನ್ನೂ ವಿಚಾರಣೆಗೆ ಕರೆಸಲಾಗಿತ್ತು. ಈ ಸಂಬಂಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 492/2023 ದಾಖಲಾಗಿರುವ ಹಿನ್ನೆಲೆಯಲ್ಲಿ ವಿವಾದವನ್ನು ನ್ಯಾಯಾಲಯದಲ್ಲಿಯೇ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿ, ಅಂತಿಮ ನ್ಯಾಯಾಲಯದ ಆದೇಶಕ್ಕೆ ಕಾಯ್ದಿರಿಸಲಾಗಿದೆ ಎಂದು ಆದೇಶಿಸಲಾಗಿದೆ. ಆದರೂ ಇದೀಗ ಮತ್ತೆ ವಾದಿಗೆ ಯಾವುದೇ ಮಾಹಿತಿ ನೀಡದೆ ಪ್ರತಿವಾದಿಗೆ ಪರಿಹಾರದ ಹಣ ಬಿಡುಗಡೆ ಮಾಡಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಈ ಕುರಿತು ಎಸ್‌ಎಲ್‌ಒ ಮಂಜುನಾಥ್ ಅವರನ್ನು ಪ್ರಶ್ನಿಸಿದಾಗ, ಹಣ ಬಿಡುಗಡೆ ಮಾಡುವುದಾಗಿ ಹೇಳಿ, ಮಾಧ್ಯಮದವರ ಬಳಿಗೆ ಅಥವಾ ಮೇಲಾಧಿಕಾರಿಗಳ ಬಳಿಗೆ ಬೇಕಾದರೂ ಹೋಗುವಂತೆ ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ರೋಹಿತ್ ಆರೋಪಿಸಿದರು. ತಕರಾರು ಪ್ರಕರಣಗಳಲ್ಲಿ ಹೆಚ್ಚಿನ ಹಣ ನೀಡುವವರ ಪರವಾಗಿ ಆದೇಶಗಳನ್ನು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.

ರಜೆ ದಿನಗಳಲ್ಲಿಯೂ ಕಾನೂನುಬಾಹಿರವಾಗಿ ಕೆಲಸ

ಎಸ್‌ಎಲ್‌ಒ ಕಚೇರಿಯಲ್ಲಿ ರೈಲ್ವೆಗೆ ಸಂಬಂಧಿಸದ ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಂದ ಕಚೇರಿ ಸಮಯದ ನಂತರವೂ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ರಜೆ ದಿನಗಳಲ್ಲಿಯೂ ಕಾನೂನುಬಾಹಿರವಾಗಿ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು. ಕೀರ್ತಿಕುಮಾರ್ ಯು.ಆರ್. ಸೇರಿದಂತೆ ಬೇರೆ ನಿಗಮದ ಸಿಬ್ಬಂದಿ, ಚಿನ್ಮಯಿ ಎಂಬ ರೈಲ್ವೆ ನೌಕರರು ಹಾಗೂ ಹೊರಗುತ್ತಿಗೆದಾರರಾದ ನಯನ ಅವರಿಂದ ರೈಲ್ವೆ ಸಂಬಂಧಿತ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸರ್ವೆ ನಂ.129/1ಕ್ಕೆ ಸಂಬಂಧಿಸಿದ ರೈಲ್ವೆ ಪರಿಹಾರದ ಮೊತ್ತವನ್ನು ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವವರೆಗೆ ಬಿಡುಗಡೆ ಮಾಡಬಾರದು ಎಂದು ತಾವು ಖುದ್ದಾಗಿ ಎಸ್‌ಎಲ್‌ಒ ಮಂಜುನಾಥ್ ಅವರಿಗೆ ಮನವಿ ಮಾಡಿದ್ದರೂ, ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಹೇಳಿದಾಗ ತಮ್ಮ ವಿರುದ್ಧ ಪ್ರಭಾವಿ ವ್ಯಕ್ತಿಗಳಿದ್ದಾರೆ ಎಂದು ಬೆದರಿಕೆ ಧಾಟಿಯಲ್ಲಿ ಮಾತನಾಡಿದ್ದಾರೆ ಎಂದು ರೋಹಿತ್ ಆರೋಪಿಸಿದರು.

ಅಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ನಿಯಮ ಉಲ್ಲಂಘನೆ ಅಥವಾ ಅಕ್ರಮ ನಡೆದಿರುವುದು ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೋಹನ್, ಸುಬ್ರಮಣ್ಯ, ಮುರುಳಿ ಇತರರು ಉಪಸ್ಥಿತರಿದ್ದರು.