'ಶರಾರತ್' ಹಾಡಿನ ಮೂಲಕ ಖ್ಯಾತಿ ಗಳಿಸಿದ ನಟಿ ಆಯೇಷಾ ಖಾನ್, ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆ ವಜ್ರದ ಉಂಗುರವಿರುವ ಫೋಟೋ ಹಂಚಿಕೊಂಡು ನಿಶ್ಚಿತಾರ್ಥದ ಕುತೂಹಲ ಮೂಡಿಸಿದ್ದಾರೆ. ಆದರೆ, ಇದು ನಿಜವಾದ ನಿಶ್ಚಿತಾರ್ಥವೇ ಅಥವಾ ಕೇವಲ ಜ್ಯುವೆಲ್ಲರಿ ಬ್ರ್ಯಾಂಡ್‌ನ ಫೋಟೋಶೂಟೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅಭಿಮಾನಿಗಳು ಸ್ಪಷ್ಟನೆಗಾಗಿ ಕಾಯುತ್ತಿದ್ದಾರೆ.
ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ, ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾದ ‘ಶರಾರತ್’ ಹಾಡಿನ ಮೂಲಕ ಭಾರೀ ಸದ್ದು ಮಾಡಿದ್ದ ನಟಿ ಆಯೇಷಾ ಖಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಗ್ಲಾಮರಸ್ ಡ್ಯಾನಸ್ನಿಂದ ಪ್ರೇಕ್ಷಕರ ಮನ ಗೆದ್ದಿದ್ದ ಈ ನಟಿ, ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ. ಈ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ ತನಗೆ ಪೀರಿಯಡ್ಸ್ ಆಗಿತ್ತು, ಈ ಹಾಡಿನ ಸಮಯದಲ್ಲಿ ತನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸವಾಲಿನ ಕೆಲಸವಾಗಿತ್ತು ಎಂದು ಈಚೆಗೆ ಹೇಳಿಕೊಂಡಿದ್ದು ಭಾರಿ ಸದ್ದು ಮಾಡಿದ್ದರು ನಟಿ. ಆದರೆ ಈಗ ಮತ್ತೊಂದು ವಿಷಯಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದಾರೆ.
ಗುಟ್ಟಾಗಿ ನಿಶ್ಚಿತಾರ್ಥ?
ಅದೇನೆಂದರೆ, ನಟಿ ಆಯೇಷಾ ಖಾನ್ ಜಾಲತಾಣದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಆಕರ್ಷಕ ವಜ್ರದ ಉಂಗುರವೂ ಇದೆ. ಹೀಗಾಗಿ ಆಯೇಷಾ ಖಾನ್ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಈ ಕಥೆಯಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ. ಆಯೇಷಾ ಖಾನ್ ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅವರ ಕೈಯಲ್ಲಿರುವ ವಜ್ರದ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಆಯೇಷಾ ತಮ್ಮ ಜೊತೆಗಿರುವ ವ್ಯಕ್ತಿಯ ಮುಖವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಜೊತೆಗೆ ಕೈಯಲ್ಲಿ ಡೈಮಂಡ್ ರಿಂಗ್ ಕಾಣಿಸುತ್ತಿದ್ದರೂ, ನಿಶ್ಚಿತಾರ್ಥ ಎಂದು ಹೇಳಿಲ್ಲ. ಇದು ಯಾವುದೋ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್‌ನ ಫೋಟೋಶೂಟ್ ಆಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.
ಹಾಡಿನ ಶೂಟಿಂಗ್ ಕುರಿತು
ಅಂದಹಾಗೆ, ಭಾರಿ ಹಲ್ಚಲ್ ಸೃಷ್ಟಿಸಿರೋ ಶರಾರತ್ ಚಿತ್ರೀಕರಣದ ದಿನಗಳನ್ನು ಈಚೆಗೆ ನೆನೆದಿದ್ದ ನಟಿ, ಆ ಎರಡು ದಿನಗಳಲ್ಲಿ ಕೆಲಸದ ಹೊರೆ ಎಷ್ಟು ತೀವ್ರವಾಗಿತ್ತೆಂದರೆ ಸುತ್ತಲೂ ನೋಡಲು ಸಹ ಸಮಯವಿರಲಿಲ್ಲ ಎಂದು ಆಯೇಷಾ ವಿವರಿಸಿದರು. ಆ ಸಮಯದಲ್ಲಿ ಚಿತ್ರದ ವಿವಾಹದ ಸನ್ನಿವೇಶವನ್ನು ಸಹ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. "ನಿರಂತರ ನೃತ್ಯದಿಂದ ನಮ್ಮ ಮೂಳೆಗಳು ನೋಯುತ್ತಿದ್ದವು. ನಾವು ತುಂಬಾ ದಣಿದಿದ್ದೆವು. ಚಿತ್ರೀಕರಣ ಮುಗಿದ ನಂತರ, ನನಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ನಾನು ತುಂಬಾ ಅಳಲು ಪ್ರಾರಂಭಿಸಿದೆ. ಆ ಕಣ್ಣೀರು ಸಂತೋಷದಿಂದಲೋ ಅಥವಾ ನೋವಿನಿಂದಲೋ? ಇದರ ಹೊರತಾಗಿಯೂ, ನಾನು ಅದನ್ನು ಪೂರ್ಣಗೊಳಿಸಿದೆ" ಎಂದು ಹೇಳಿದ್ದರು.
ಸದ್ಯ, ಈಗ ನಟಿಯ ಈ ಫೋಟೋ ಸಾಕಷ್ಟು ಹಲ್ಚಲ್ ಸೃಷ್ಟಿಸಿದ್ದು, ನಟಿ ಆಯೇಷಾ ಖಾನ್ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವೈರಲ್ ಆಗಿರುವ ವಜ್ರದ ಉಂಗುರ ಹಾಗೂ ಮಿಸ್ಟ್ರಿ ಮ್ಯಾನ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ. ಅಭಿಮಾನಿಗಳು ಅವರ ಅಧಿಕೃತ ಅನೌನ್ಸ್‌ಮೆಂಟ್ ಒಂದಕ್ಕಾಗಿ ಕಾಯುತ್ತಿದ್ದಾರೆ.


