ಭಾರತದಲ್ಲಿ ಆಪಲ್ ಐಫೋನ್ 18 ಪ್ರೋ ಬಿಡುಗಡೆಯಾಗಿದ್ದು, ಜನರ ಹುಚ್ಚಾಟ ಮಿತಿಮೀರಿದೆ. ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಈ ಫೋನ್ ಕೊಡಿಸಲು ಚಿನ್ನವನ್ನೇ ಮಾರಿದ್ದಾರೆ. ಪಂಜಾಬ್‌ನ ಯುವಕನೊಬ್ಬ ನಿಶ್ಚಿತಾರ್ಥಕ್ಕಾಗಿ 3.5 ಲಕ್ಷ ರೂ. ಖರ್ಚು ಮಾಡಿದ್ದು, ಬೆಲೆ ಏರಿಕೆಯ ನಡುವೆಯೂ ಐಫೋನ್ ಕ್ರೇಜ್ ಕಡಿಮೆಯಾಗಿಲ್ಲ.

ಪ್ರತಿ ವರ್ಷ ಆಪಲ್ ಹೊಸ ಐಫೋನ್ ಸರಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗಲೂ ದೇಶಾದ್ಯಂತ ಆಪಲ್ ಪ್ರಿಯರ ಹುಚ್ಚಾಟ ಮತ್ತು ಕ್ರೇಜ್ ಮುಗಿಲು ಮುಟ್ಟುವುದು ಹೊಸದೇನಲ್ಲ. ಆದರೆ ಈ ಬಾರಿ ನೂತನ 'ಐಫೋನ್ 18 ಪ್ರೊ' (iPhone 18 Pro) ಭಾರತೀಯ ಮಾರುಕಟ್ಟೆಗೆ ಕಾಲಿಡುತ್ತಿದ್ದಂತೆ ಆಪಲ್ ಅಭಿಮಾನಿಗಳ ಹುಚ್ಚಾಟ ಎಲ್ಲ ಗಡಿಗಳನ್ನೂ ದಾಟಿದೆ! ಬೆಳಗಿನ ಜಾವ ಅಂಗಡಿ ಬಾಗಿಲು ತೆರೆಯುವ ಮುನ್ನವೇ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತಿದ್ದ ಜನರು, ಐಫೋನ್ ಪಡೆಯಲು ಮಾಡಿದ ಗೀಳು ಮತ್ತು ಖರ್ಚು ಮಾಡಿದ ರೀತಿ ಕೇಳಿದರೆ ಎಂಥವರೂ ಹುಬ್ಬೇರಿಸುವುದು ಖಂಡಿತ.

ವಿಚಿತ್ರ ಸ್ಟೋರಿ!

ದೆಹಲಿ, ಪಂಜಾಬ್, ಹರಿಯಾಣ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಜನರು ನೋಯ್ಡಾದ ಡಿಎಲ್ಎಫ್ ಮಾಲ್ ಆಫ್ ಇಂಡಿಯಾದಲ್ಲಿರುವ ಆಪಲ್ ಸ್ಟೋರ್‌ಗೆ ಧಾವಿಸಿದ್ದರು. ಈ ವೇಳೆ ಇಂಡಿಯಾ ಟುಡೇ ಟೆಕ್ ತಂಡ ನಡೆಸಿದ ವಿಶೇಷ ಸಂವಾದದಲ್ಲಿ ಹಲವು ಕುತೂಹಲಕಾರಿ, ಆಶ್ಚರ್ಯಕರ ಮತ್ತು ತಮಾಷೆಯ ಕಥೆಗಳು ಹೊರಬಂದಿವೆ.

ಹೆಂಡತಿಯ ಪ್ರೀತಿಗಾಗಿ ಒಡವೆ ಮಾರಿದ ಗಂಡ!

ಈ ಎಲ್ಲ ಘಟನೆಗಳ ಪೈಕಿ ಅತ್ಯಂತ ಗಮನಸೆಳೆದದ್ದು ದೆಹಲಿಯ ವ್ಯಕ್ತಿಯೊಬ್ಬರ ಕಥೆ. ಬೆಳಿಗ್ಗೆ 8 ಗಂಟೆಗೆ ಅಂಗಡಿ ತೆರೆಯುವ ಮುನ್ನವೇ ಸಾಲಿನಲ್ಲಿ ನಿಂತಿದ್ದ ಇವರು, ತಮ್ಮ ಪತ್ನಿಗೆ ಬಿಡುಗಡೆಯಾಗಿರುವ ನೂತನ 'ಬರ್ಗಂಡಿ' (Burgundy) ಬಣ್ಣದ ಐಫೋನ್ 18 ಪ್ರೊ ಉಡುಗೊರೆಯಾಗಿ ನೀಡಲು ಬಂದಿದ್ದರು. ಅವರ ಪತ್ನಿ ಇದುವರೆಗೆ ಐಫೋನ್ ಬಳಸಿಯೇ ಇರಲಿಲ್ಲವಂತೆ! ತಮ್ಮ ಪತ್ನಿಗೆ ಈ ಬಾರಿಯಾದರೂ ಐಫೋನ್ ಕೊಡಿಸಲೇಬೇಕೆಂಬ ಹಠಕ್ಕೆ ಬಿದ್ದ ಇವರು ಮಾಡಿದ ಕೆಲಸವೇನು ಗೊತ್ತಾ? ತಮ್ಮ ಬಳಿಯಿದ್ದ ಚಿನ್ನವನ್ನು ಮಾರಿ ಫೋನ್ ಖರೀದಿಸಿದ್ದಾರೆ!

ಈ ಬಗ್ಗೆ ಅವರು ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ ಅವರು, ಹಿಂದೆ ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ. ಆದರೆ ಇಂದು ಹಣವಿದೆ, ನಾಳೆ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ಹಾಗಾಗಿ ಇಂದು ಲೈಫ್ ಎಂಜಾಯ್ ಮಾಡಬೇಕು. ಚಿನ್ನಕ್ಕಿಂತ ಹೆಂಡತಿಯ ಸಂತೋಷವೇ ಮುಖ್ಯ, ಹಾಗಾಗಿ ಚಿನ್ನ ಮಾರಿ ಫೋನ್ ತಂದಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ನಿಶ್ಚಿತಾರ್ಥಕ್ಕಾಗಿ 3.5 ಲಕ್ಷ ರೂ. ಖರ್ಚು ಮಾಡಿದ ಪಂಜಾಬ್ ಯುವಕ!

ಐಫೋನ್ ಕ್ರೇಜ್ ಕೇವಲ ದೆಹಲಿಗೆ ಸೀಮಿತವಾಗಿರಲಿಲ್ಲ. ಪಂಜಾಬ್‌ನ ಗುರುದಿತಾ ಸಿಂಗ್ ಎಂಬ ಯುವಕ ತನಗಾಗಲಿರುವ ಭಾವಿ ಪತ್ನಿಗೆ ನಿಶ್ಚಿತಾರ್ಥದ ಉಡುಗೊರೆಯಾಗಿ ಐಫೋನ್ 18 ಪ್ರೊ ನೀಡಲು ಬೆಳಗಿನ ಜಾವ ೬ ಗಂಟೆಗೇ ನೋಯ್ಡಾ ತಲುಪಿದ್ದ. ಭಾವಿ ಪತ್ನಿಗೆ ಒಂದು ಐಫೋನ್ 18 ಪ್ರೊ ಹಾಗೂ ತನಗೆ ಐಫೋನ್ 18 ಪ್ರೊ ಮ್ಯಾಕ್ಸ್ – ಹೀಗೆ ಎರಡು ಹೈ-ಎಂಡ್ ಫೋನ್‌ಗಳಿಗಾಗಿ ಆತ ಬರೋಬ್ಬರಿ ೩.೫ ಲಕ್ಷ ರೂಪಾಯಿಗೂ ಹೆಚ್ಚು ಹಣ ಚೆಲ್ಲಿದ್ದಾನೆ! ಬೆಳಿಗ್ಗೆ ಫೋನ್ ಪಡೆದು ೧೧ ಗಂಟೆಯ ರೈಲಿಗೆ ಪಂಜಾಬ್‌ಗೆ ವಾಪಸ್ ಹೋಗುವ ಯೋಜನೆ ಆತನದ್ದಾಗಿತ್ತು.

ಬೆಲೆ ಏರಿದರೂ ಕಮ್ಮಿಯಾಗದ ಕ್ರೇಜ್!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಫೋನ್ 18 ಪ್ರೊ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಆದರೂ ಅಭಿಮಾನಿಗಳ ಉತ್ಸಾಹ ಕುಗ್ಗಿಲ್ಲ. ತಮ್ಮ ಪತಿಯೊಂದಿಗೆ ಎರಡು ಐಫೋನ್ ಖರೀದಿಸಲು ಬಂದಿದ್ದ ಮಹಿಳೆಯೊಬ್ಬರು, "ಬೆಲೆ ಹೆಚ್ಚಾಗಿರುವುದು ನಿಜ, ಆದರೆ ಐಫೋನ್ ಪ್ರಿಯರು ಎಷ್ಟು ಬೆಲೆಯಿದ್ದರೂ ಪಾವತಿಸಲು ಸಿದ್ಧರಿರುತ್ತಾರೆ" ಎಂದು ಸಮರ್ಥಿಸಿಕೊಂಡರು. ಅಷ್ಟೇ ಅಲ್ಲದೆ, ಹಾಂಗ್ ಕಾಂಗ್‌ನಲ್ಲಿರುವ ತಮ್ಮ ಸ್ನೇಹಿತನ ಮೂಲಕ ಅಕ್ಟೋಬರ್‌ನಲ್ಲಿ ಬರಲಿರುವ 'ಐಫೋನ್ ಡ್ಯುಯೊ' (iPhone Duo) ತರಿಸಿಕೊಳ್ಳುವುದಾಗಿಯೂ ಅವರು ತಿಳಿಸಿದರು. ಇತ್ತ ಹರಿಯಾಣದ ವಿಶಾಲ್ ಎಂಬ ಗ್ರಾಹಕ ಕೂಡ, "ಬೆಲೆ ಹೆಚ್ಚಾದರೆ ಏನಂತೆ, ಮ್ಯಾನೇಜ್ ಮಾಡಿಕೊಳ್ಳುತ್ತೇವೆ" ಎಂದು ಕೂಲ್ ಆಗಿ ಉತ್ತರಿಸಿದರು.

ಆರ್ಡರ್ ಮಾಡದೆ ಪರದಾಡಿದ ಗ್ರಾಹಕರು!

ಆದರೆ, ಮುಂಗಡ ಕಾಯ್ದಿರಿಸುವಿಕೆ (Pre-order) ಮಾಡದೆ ನೇರವಾಗಿ ಸ್ಟೋರ್‌ಗೆ ಬಂದ ಹಲವರು ಫೋನ್ ಸಿಗದೆ ನಿರಾಶೆಗೊಂಡರು. ಪ್ರೀ-ಆರ್ಡರ್ ನಿಯಮ ತಿಳಿಯದ ವ್ಯಕ್ತಿಯೊಬ್ಬರು, "ಫೋನ್ ಪಡೆಯಲು ಅಂಗಡಿಯೊಳಗೆ ಹೋಗಲು ಲಂಚ ನೀಡಲು ಸಿದ್ಧ ಎಂದು ತಮಾಷೆಯಾಗಿ ಹೇಳಿದ್ದು ಆಪಲ್ ಫೋನ್‌ಗಳ ಮೇಲಿರುವ ಹುಚ್ಚಾಟಕ್ಕೆ ಹಿಡಿದ ಕನ್ನಡಿಯಾಗಿದೆ. ಒಟ್ಟಿನಲ್ಲಿ, ಐಫೋನ್ 18 ಪ್ರೊ ಬಿಡುಗಡೆಯು ದೇಶದಲ್ಲಿ ಕೇವಲ ಟೆಕ್ ಹವಾ ಸೃಷ್ಟಿಸಿಲ್ಲ, ಬದಲಿಗೆ ಜನರ ಜೇಬು ಮತ್ತು ಭಾವನೆಗಳ ಜೊತೆ ಹೊಸ ಕಥೆಗಳನ್ನು ಸೃಷ್ಟಿಸಿದೆ.