ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಹಿನ್ನೆಲೆಯಲ್ಲಿ, ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದು ಸಚಿವ ಬಿ.ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾವನಾತ್ಮಕವಾಗಿ ರಾಜೀನಾಮೆ ಪ್ರಕಟಿಸಿದ ಅವರು, ಇದೊಂದು ದಲಿತರ ಮೇಲಿನ ದಬ್ಬಾಳಿಕೆ ಎಂದು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರತಿಪಕ್ಷಗಳ ಪಾದಯಾತ್ರೆ ಎಚ್ಚರಿಕೆ ಹಾಗೂ ರಾಜ್ಯಪಾಲರ ಪ್ರಾಸಿಕ್ಯೂಷನ್ ಸೂಚನೆ ಬೆನ್ನಲ್ಲೇ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಒಂದೇ ಆರೋಪಕ್ಕೆ ಎರಡನೇ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಂತಾಗಿದೆ. ಜೊತೆಗೆ ಪದಗ್ರಹಣ ಮಾಡಿದ ಕೇವಲ 25 ದಿನಗಳಲ್ಲೇ ಸಚಿವ ಸ್ಥಾನ ತೊರೆಯುವಂತಾಗಿದೆ.
ಸಚಿವ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಘೋಷಿಸಿದ ಅವರು, ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ನಾಗೇಂದ್ರ ನೋವಿನಿಂದ ರಾಜೀನಾಮೆ ನೀಡಿದ್ದು, ನಾನು ನೋವಿನಿಂದ ಪಡೆದಿದ್ದೇನೆ. ಒಬ್ಬ ದಲಿತನ ಮೇಲೆ ದಬ್ಬಾಳಿಕೆ ಮಾಡಿ ರಾಜೀನಾಮೆ ಕೊಡಿಸಿದ್ದಾರೆ. ನಾನು ವರಿಷ್ಠರೊಂದಿಗೆ ಚರ್ಚಿಸಿ ಶನಿವಾರ ಬೆಳಗ್ಗೆ ಅಂಗೀಕಾರದ ಬಗ್ಗೆ ತೀರ್ಮಾನಿಸುತ್ತೇನೆ’ ಎಂದಿದ್ದಾರೆ.
ಕಣ್ಣೀರು ಹಾಕುತ್ತಾ ರಾಜೀನಾಮೆ ಪ್ರಕಟ
ಇದಕ್ಕೂ ಮೊದಲು ಕಣ್ಣೀರು ಹಾಕುತ್ತ ಭಾವನಾತ್ಮಕವಾಗಿ ತಮ್ಮ ರಾಜೀನಾಮೆ ಪ್ರಕಟಿಸಿದ ನಾಗೇಂದ್ರ ಅವರು, ದಲಿತ ಕಾರ್ಡ್ ಮೂಲಕ ಪ್ರತಿಪಕ್ಷಗಳ ವಿರುದ್ಧ ಪ್ರತಿ ಹೋರಾಟ ಸಜ್ಜಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ-ಜೆಡಿಎಸ್ ದೋಸ್ತಿಗಳ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ, ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಒತ್ತಡವನ್ನು ಸಮರ್ಥವಾಗಿ ಎದುರಿಸಿದ ಕಾಂಗ್ರೆಸ್ ಇದೀಗ ರಾಜೀನಾಮೆ ಕೊಡಿಸುತ್ತಿರುವುದಕ್ಕೆ ಬೇರೆಯದ್ದೇ ಕಾರಣವಿದೆ. ರಾಜೀನಾಮೆಯನ್ನು ರಾಜಕೀಯ ಲಾಭವಾಗಿ ಬದಲಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ ಎಂಬ ವಿಶ್ಲೇಷಣೆಯೂ ಕೇಳಿ ಬರುತ್ತಿದೆ.
ಬಿಜೆಪಿಯನ್ನು ದಲಿತ ವಿರೋಧಿ, ವಾಲ್ಮೀಕಿ ನಾಯಕರ ವಿರೋಧಿ ಎಂದು ಬಿಂಬಿಸಲು ಹಾಗೂ ವಾಲ್ಮೀಕಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಅನುಕಂಪ ಹಾಗೂ ಜನಾಭಿಪ್ರಾಯ ರೂಪಿಸಲು ಬಳಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಪಕ್ಷದ ಹಂತದಲ್ಲಿ ರಣತಂತ್ರ ಹೆಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಂಭೂಕನಂತೆ ಹತ್ಯೆಗೆ ಯತ್ನ
ದೆಹಲಿಯಿಂದ ಆಗಮಿಸಿ ಸುದ್ದಿಗೋಷ್ಠಿ ನಡೆಸಿದ ಬಿ.ನಾಗೇಂದ್ರ, ‘ದಲಿತನಾದ ನನ್ನನ್ನು ಮನುವಾದಿ ಪಕ್ಷದವರು ಶಂಭೂಕನಂತೆ ಹತ್ಯೆ ಮಾಡಲು ಹೊರಟಿದ್ದಾರೆ. ಆದರೆ ನಾನು ಶಂಭೂಕನಲ್ಲ, ಅನ್ಯಾಯದ ವಿರುದ್ಧ ಹೋರಾಡುವವನು’ ಎಂದು ಗುಡುಗಿದ್ದಾರೆ. ನಾನು ನಿರಪರಾಧಿ. ಆದರೆ ಸಂವಿಧಾನದ ಮೇಲೆ ನಂಬಿಕೆ ಇಟ್ಟು, ಪಕ್ಷಕ್ಕೆ, ಸರ್ಕಾರಕ್ಕೆ ಹಾಗೂ ಅಭಿವೃದ್ಧಿಗೆ ಆಗುತ್ತಿರುವ ಅಡ್ಡಿ ನಿವಾರಣೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಮರ್ಥಿಸಿದ್ದಾರೆ.
ಕಸರತ್ತು ವಿಫಲ
ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ಧರಿಸಿದ ಬೆನ್ನಲ್ಲೇ ಸಚಿವ ಸ್ಥಾನ ಉಳಿಸಿಕೊಳ್ಳಲು ನಾಗೇಂದ್ರ ದೆಹಲಿಗೆ ತೆರಳಿದ್ದರು. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ ಸಚಿವ ನಾಗೇಂದ್ರ ಅವರು, ಒಂದೇ ಅವಧಿಯಲ್ಲಿ ತನ್ನದಲ್ಲದ ತಪ್ಪಿಗೆ ಎರಡೆರಡು ಬಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.
ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಾಗೂ ರಾಜೀನಾಮೆ ಯಾಕೆ ಅನಿವಾರ್ಯ? ಎಂಬುದರ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಚುನಾವಣೆ ಹತ್ತಿರ ಬರುತ್ತಿದ್ದು ಸರ್ಕಾರದ ವಿರುದ್ಧ ಯಾವುದೇ ವಿಷಯವಿಲ್ಲದ ಬಿಜೆಪಿಗೆ ನಾವೇ ವಿಷಯ ನೀಡಿದಂತಾಗುತ್ತದೆ. ಜತೆಗೆ ರಾಜ್ಯಪಾಲರು ಸಿಬಿಐ ಕೋರಿರುವ ಪ್ರಾಸಿಕ್ಯೂಷನ್‌ಗೆ ಅನುಮತಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ಸದ್ಯಕ್ಕೆ ರಾಜೀನಾಮೆ ಪಡೆಯುವುದು ಸೂಕ್ತ ಎಂದು ಮನವೊಲಿಸಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ರಾಜೀನಾಮೆಗೆ ಸೂಚನೆ ನೀಡಿದ್ದು, ಬೆನ್ನಲ್ಲೇ ಬೆಂಗಳೂರಿಗೆ ಬಂದ ಸಚಿವ ನಾಗೇಂದ್ರ ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಹಾಕುತ್ತಾ ರಾಜೀನಾಮೆ ಘೋಷಿಸಿದರು.
ಮತ್ತೆ ಚುನಾವಣೆ ಕಣಕ್ಕೆ ಇಳಿವೆ: ನಿಮ್ಗೆ ತಾಕತ್ತಿದ್ರೆ ನನ್ನ ಎದುರಿಸಿ, ಸೋಲಿಸಿ; ಜನಾರ್ಧನ ರೆಡ್ಡಿ, ರಾಮುಲುಗೆ ಸವಾಲ್
ಬೆಂಗಳೂರು:ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಾ ಅಧಿವೇಶನದಲ್ಲಿ ಸದನದೊಳಗೆ ಪ್ರತಿಭಟನೆ ನಡೆಸಿ, ಇದೀಗ ಪಾದಯಾತ್ರೆಗೆ ಮುಂದಾಗಿರುವ ವಿಪಕ್ಷಗಳಿಗೆ ಜನ ಬುದ್ಧಿ ಕಲಿಸುತ್ತಾರೆ. ದಲಿತನೊಬ್ಬ ಬೆಳೆಯುತ್ತಾನೆಂಬ ಕಾರಣಕ್ಕಾಗಿ ಮನುವಾದಿಗಳು ಷಡ್ಯಂತ್ರ ಮಾಡಿದ್ದಾರೆ. ಇದಕ್ಕೆಲ್ಲ ಬಳ್ಳಾರಿ ಬಿಜೆಪಿ ನಾಯಕರಾದ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಕುತಂತ್ರ ಮುಖ್ಯ ಕಾರಣ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ಎದುರಿಸುತ್ತೇನೆ. ನನ್ನ ತಪ್ಪಿದ್ದರೆ ನಾನು ಸೋಲುತ್ತೇನೆ. ಶ್ರೀರಾಮುಲು ಸೇರಿ ಬಳ್ಳಾರಿ ಬಿಜೆಪಿ ನಾಯಕರು ತಾಕತ್ತಿದ್ದರೆ ನನ್ನನ್ನು ಎದುರಿಸಿ, ಸೋಲಿಸಲಿ ಎಂದು ನಾಗೇಂದ್ರ ಸವಾಲು ಹಾಕಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ವಿಪಕ್ಷಗಳ ಪಟ್ಟಿಗೆ ಮಣಿದ ಬಿ.ನಾಗೇಂದ್ರ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶುಕ್ರವಾರ ಘೋಷಿಸಿದರು. ಇದೇ ವೇಳೆ ಪಕ್ಷದ ವರಿಷ್ಠರು ಒಪ್ಪಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಿ ಜನತಾ ನ್ಯಾಯಾಲಯದಲ್ಲಿ ಗೆದ್ದು ಬರುತ್ತೇನೆ. ತಾಕತ್ತಿದ್ದರೆ ಬಳ್ಳಾರಿ ಬಿಜೆಪಿ ನಾಯಕರು ನನ್ನ ಗೆಲುವು ತಡೆಯಲಿ ಎಂದು ನಾಗೇಂದ್ರ ಸವಾಲು ಹಾಕಿದರು.
ರಾಜೀನಾಮೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ನಾಗೇಂದ್ರ, ದಲಿತ ಎಂಬ ಕಾರಣಕ್ಕಾಗಿ ಮನುವಾದಿಗಳಾದ ಬಿಜೆಪಿ ನಾಯಕರು ನನ್ನ ವಿರುದ್ಧ ಕುತಂತ್ರ ಮಾಡಿದ್ದಾರೆ. ಸುಳ್ಳನ್ನು ಪದೇ ಪದೆ ಹೇಳಿ ಸತ್ಯ ಮಾಡಲು ಹೊರಟರು. ವಿಪಕ್ಷಗಳು ನಡೆಸುತ್ತಿರುವ ಕುತಂತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಬಾರದು, ಮುಖ್ಯಮಂತ್ರಿ ಅವರ ಆಡಳಿತಕ್ಕೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಅವರಿಗೆ ನನ್ನ ರಾಜೀನಾಮೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಸೇರಿ ಪಕ್ಷದ ವರಿಷ್ಠರು ರಾಜೀನಾಮೆ ನೀಡದಂತೆ ತಡೆದಿದ್ದಾರೆ. ಆದರೆ, ಪಕ್ಷದ ಹಿತದೃಷ್ಟಿಯಿಂದ ರಾಜನಾಮೆ ನೀಡುತ್ತೇನೆ ಎಂದು ಹೇಳಿದರು.
ಸಚಿವ ಸ್ಥಾನವಷ್ಟೇ ಅಲ್ಲದೆ ಪಕ್ಷದ ವರಿಷ್ಠರು ಒಪ್ಪಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಮತ್ತೆ ಚುನಾವಣೆ ಎದುರಿಸಿ ಜನತಾ ನ್ಯಾಯಾಲಯದಲ್ಲಿ ನಾನು ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಿಸುತ್ತೇನೆ. ನನಗಾಗಿರುವ ಅನ್ಯಾಯ ಸರಿಪಡಿಸಲು ವರಿಷ್ಠರು ಅವಕಾಶ ನೀಡಬೇಕು ಎಂದು ಕೋರುತ್ತೇನೆ. ಇದು ಬ್ಲ್ಯಾಕ್‌ಮೇಲ್ ಅಲ್ಲ. ಬದಲಿಗೆ ಮನವಿ ಎಂದರು.
ಲಕ್ಷ ನಾಗೇಂದ್ರರಿದ್ದಾರೆ: ನಾನು ರಾಜೀನಾಮೆ ನೀಡಿದೆ ಎಂಬ ಮಾತ್ರಕ್ಕೆ ಹೆದರಿದ್ದೇನೆ ಎಂದು ತಿಳಿಯುವುದು ಬೇಡ. ರಾಜ್ಯದಲ್ಲಿ ಎಲ್ಲ ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ನಾನು ಶ್ರಮಿಸುತ್ತೇನೆ. ತಾಕತ್ತಿದ್ದರೆ ಬಿಜೆಪಿ ನಾಯಕರು ನಮ್ಮ ಪಕ್ಷವನ್ನು ಎದುರಿಸಲಿ. ಇನ್ನು, ನನ್ನ ರಾಜೀನಾಮೆಯನ್ನು ಸಂಭ್ರಮಿಸುವ ಬಿಜೆಪಿ ನಾಯಕರು, ಬಳ್ಳಾರಿಯಲ್ಲಿ ನನ್ನಂತಹ ಲಕ್ಷ ನಾಗೇಂದ್ರರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ತಂದೆಯ ಸಹಿ ಫೋರ್ಜರಿ ಮಾಡಿದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೂ ಹೋರಾಟಕ್ಕೆ ಜಯ ಸಿಕ್ಕಿದೆ: ಅಶೋಕ್
ಬೆಂಗಳೂರು (ಆ.29): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ 187 ಕೋಟಿ ರು. ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರ ಅವರನ್ನು ರಕ್ಷಿಸಲು ವಿಧಾನಮಂಡಲ ಅಧಿವೇಶನವನ್ನೇ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ, ಕೊನೆಗೂ ನಮ್ಮ ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಬಿಜೆಪಿಯಿಂದ ಪಾದಯಾತ್ರೆ ಘೋಷಣೆ ಮಾಡಿದ ಕೂಡಲೇ ಬೆವರಿ ಬೆದರಿದ ಕಾಂಗ್ರೆಸ್ ಕೂಡಲೇ ರಾಜೀನಾಮೆ ಪಡೆದು ಅಲ್ಪಸ್ವಲ್ಪ ಮಾನ ಉಳಿಸಿಕೊಂಡಿದೆ. ಮಾತು ಮಾತಿಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರ ಹೆಸರು ಹೇಳಿಕೊಂಡು ದಲಿತರನ್ನು ತುಳಿದ ಕಾಂಗ್ರೆಸ್‌ಗೆ ದಲಿತರ ಆಕ್ರೋಶದ ಬಿಸಿ ತಟ್ಟಿದೆ. ಕರ್ನಾಟಕ ರಾಜಕೀಯದಲ್ಲಿ ಭ್ರಷ್ಟರನ್ನು ಸಚಿವರನ್ನಾಗಿಟ್ಟುಕೊಂಡು ಆಡಳಿತ ನಡೆಸಲು ಸಾಧ್ಯವೇ ಇಲ್ಲ ಎಂಬ ಸಂದೇಶ ರವಾನೆಯಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ಅಹಂಕಾರಕ್ಕೆ ಬಿದ್ದ ಪೆಟ್ಟು: ಇದು ಕೇವಲ ರಾಜೀನಾಮೆಯಲ್ಲ, ಇದು ಕಾಂಗ್ರೆಸ್ ಸರ್ಕಾರದ ಅಹಂಕಾರದ ಮೇಲೆ ಬಿದ್ದ ಬಲವಾದ ಹೊಡೆತ. ಇದು ಕೋಟ್ಯಂತರ ದಲಿತರಿಗೆ ಸಿಕ್ಕಿರುವ ದಿಗ್ವಿಜಯ. ಬಿಜೆಪಿ-ಜೆಡಿಎಸ್ ಸದನದ ಒಳಗೆ ಹಾಗೂ ಹೊರಗೆ ನಿರಂತರವಾಗಿ ಹೋರಾಟ ಮಾಡಿತ್ತು. ನಾವು ಪ್ರಶ್ನೆ ಕೇಳಿದಾಗ ಸದನದಿಂದ ಪಲಾಯನ, ನಾವು ಉತ್ತರ ಕೇಳಿದಾಗ ಅಧಿವೇಶನ ಮೊಟಕು, ನಾವು ಸತ್ಯ ಬಯಲು ಮಾಡಿದಾಗ ಆರೋಪಿಗಳನ್ನು ರಕ್ಷಿಸುವ ಸರ್ಕಸ್ ಮಾಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದನ ಮುಂದೂಡಬಹುದು, ಚರ್ಚೆ ತಪ್ಪಿಸಿಕೊಳ್ಳಬಹುದು, ಸತ್ಯವನ್ನು ಮಾತ್ರ ಮುಚ್ಚಿಡಲು ಸಾಧ್ಯವಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.
ಇದು ಭ್ರಷ್ಟರ ವಿರುದ್ಧ ನಮ್ಮ ಹೋರಾಟದ ಗೆಲುವು. ಇದು ದಲಿತರ ಹಣಕ್ಕೆ ನ್ಯಾಯ ಬೇಕೆಂಬ ಆಗ್ರಹಕ್ಕೆ ಸಿಕ್ಕ ಜಯ. ಆದರೆ, ಒಬ್ಬ ಸಚಿವನ ರಾಜೀನಾಮೆ ಕೊಡಿಸಿದರೆ ದಲಿತರಿಗೆ ನ್ಯಾಯ ಸಿಕ್ಕಂತೆ ಆಗುವುದಿಲ್ಲ. ನಾಗೇಂದ್ರ ರಾಜೀನಾಮೆ ಕೊಟ್ಟ ಮಾತ್ರಕ್ಕೆ ಕಾಂಗ್ರೆಸ್ ಪಾಪದ ಕೊಡ ಖಾಲಿಯಾಗುವುದಿಲ್ಲ ಎಂದಿದ್ದಾರೆ.
ರಾಜೀನಾಮೆ ಅಂತ್ಯವಲ್ಲ, ಸತ್ಯ ತನಿಖೆ ಶುರು: ನಾಗೇಂದ್ರ ಅವರ ರಾಜೀನಾಮೆ ಅಂತ್ಯವಲ್ಲ, ಇದು ಸತ್ಯ ತನಿಖೆಯ ಆರಂಭ. ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿದೆ. ಈಗ ಸತ್ಯ ಹೊರಬರಬೇಕು, ಲೂಟಿಯ ಸಂಪೂರ್ಣ ಲೆಕ್ಕ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಧಿಕಾರಿ ಪಿ.ಚಂದ್ರಶೇಖರನ್ ಆತ್ಮಕ್ಕೆ ಶಾಂತಿ ದೊರೆಯಬೇಕು. ಜನರ ಹಣಕ್ಕೆ ನ್ಯಾಯ ಸಿಗುವವರೆಗೂ, ಹಗರಣದ ಸಂಪೂರ್ಣ ಸತ್ಯ ಬಯಲಾಗುವವರೆಗೂ ತಪ್ಪಿತಸ್ಥರು ಕಾನೂನಿನ ಮುಂದೆ ನಿಲ್ಲುವವರೆಗೂ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಇದು ಕೇವಲ ರಾಜೀನಾಮೆಯ ಗೆಲುವಲ್ಲ. ಇದು ಸತ್ಯದ ಗೆಲುವಿನ ಆರಂಭ ಎಂದು ಆರ್.ಅಶೋಕ್ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಒಂದೇ ಆರೋಪಕ್ಕೆ 2 ಸಲ ನಾಗೇಂದ್ರ ರಾಜೀನಾಮೆ
ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದು ಕೊನೆಗೂ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಸಲ್ಲಿಸುವ ಮೂಲಕ ಒಂದೇ ಸರ್ಕಾರದ ಅವಧಿಯಲ್ಲಿ ಒಂದೇ ಪ್ರಕರಣದ ವಿಚಾರಕ್ಕೆ ಒಬ್ಬನೇ ಸಚಿವ ಎರಡು ಬಾರಿ ರಾಜೀನಾಮೆ ನೀಡಿದಂತಾಗಿದೆ.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಜಯಗಳಿಸಿದ ಬಳಿಕ ರಚನೆಯಾದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಮೊದಲ ಬಾರಿಗೆ ನಾಗೇಂದ್ರ ಅವರು ಸಚಿವರಾಗಿದ್ದರು. ಆ ವೇಳೆ ನಾಗೇಂದ್ರ ಅವರಿಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಜೊತೆಗೆ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯನ್ನೂ ನೀಡಲಾಗಿತ್ತು. ಅದೇ ಸಮಯದಲ್ಲೇ ಅವರ ಇಲಾಖೆಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಪ್ರತಿಪಕ್ಷಗಳ ಆಗ್ರಹದ ನಂತರ ಸಚಿವ ಸ್ಥಾನಕ್ಕೆ ಅವರ ರಾಜೀನಾಮೆ ಪಡೆಯಲಾಗಿತ್ತು.
ಬಳಿಕ ಪ್ರಕರಣವನ್ನು ಸರ್ಕಾರ ವಿಶೇಷ ತನಿಖಾ ದಳಕ್ಕೆ ವಹಿಸಿತ್ತು. ತನಿಖೆ ನಡೆಸಿ ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಚ್ ಶೀಟ್‌ನಲ್ಲಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಈ ಮಧ್ಯೆ, ಹಣ ವರ್ಗಾವಣೆ ಪ್ರಕರಣ ಸಂಬಂಧ ಬ್ಯಾಂಕ್‌ನವರ ಪತ್ರದ ಮೇರೆಗೆ ಸಿಬಿಐ ಕೂಡ ತನಿಖೆ ಕೈಗೆತ್ತಿಕೊಂಡಿತ್ತು. ಇದಕ್ಕೆ ನ್ಯಾಯಾಲಯವೂ ಅನುಮತಿ ನೀಡಿತ್ತು. ಜೊತೆಗೆ ಈ ಪ್ರಕರಣದಲ್ಲಿ ಇ.ಡಿ ಕೂಡ ಮಧ್ಯಪ್ರವೇಶಿಸಿ ತನಿಖೆ ಆರಂಭಿಸಿತು. ಇದರ ನಡುವೆಯೇ ನಾಗೇಂದ್ರ ಅವರನ್ನು ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಜೊತೆಗೆ, ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನೂ ವಹಿಸಿದ್ದರು.
ಇದೀಗ ಸಿಬಿಐ ಪ್ರಕರಣದ ತನಿಖೆಗೆ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲರ ಅನುಮತಿ ಕೋರಿದೆ. ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅತ್ತ ಪ್ರತಿಪಕ್ಷದವರು ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಮಂಡಲ ಅಧಿವೇಶನದಲ್ಲಿ ಯಾವುದೇ ಕಾರ್ಯಕಲಾಪದ ಚರ್ಚೆಯಲ್ಲಿ ಭಾಗವಹಿಸಿದೆ ಪ್ರತಿಭಟನೆ ನಡೆಸಿದರು. ಈ ಎಲ್ಲಾ ಕಾರಣಗಳಿಂದ ನಾಗೇಂದ್ರ ಅವರು ಮತ್ತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ದೋಸ್ತಿಗಳ ಸಂಘಟಿತ ಹೋರಾಟದ ಗೆಲುವು; ಸದನದ ಒಳಹೊರಗೂ ಫೈಟ್
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಮಳೆಗಾಲದ ಅಧಿವೇಶನದ ವೇಳೆ ಉಭಯ ಸದನಗಳ ಹೊರಗೆ ಮತ್ತು ಒಳಗೆ ಸಂಘಟಿತ ಹೋರಾಟ ಮಾಡಿದ್ದ ಎನ್‌ಡಿಎ ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಕೊನೆಗೂ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಇದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸಂಘಟಿತ ಪ್ರಬಲ ಹೋರಾಟಕ್ಕೆ ಸಿಕ್ಕ ಗೆಲುವು ಹಾಗೂ ಪ್ರಮುಖ ಪ್ರತಿಪಕ್ಷ ಬಿಜೆಪಿ ನಾಯಕರಲ್ಲಿನ ಒಗ್ಗಟ್ಟಿಗೆ ಲಭಿಸಿದ ಗೆಲುವು ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್ ಬಲವಾದ ಸಂದೇಶ ನೀಡಿವೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳನ್ನು ಲಘುವಾಗಿ ಪರಿಗಣಿಸಬಾರದು ಎಂಬ ಎಚ್ಚರಿಕೆ ರವಾನಿಸಿದಂತಾಗಿದೆ.
ಸದನದ ಒಳ-ಹೊರಗೆ ಹೋರಾಟ
ಅಧಿವೇಶನ ಆರಂಭಕ್ಕೂ ಮುನ್ನವೇ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರು ಸಮನ್ವಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕುರಿತು ಉಭಯ ಸದನಗಳಲ್ಲಿ ಪ್ರಸ್ತಾಪಿಸಬೇಕು. ಹಗರಣದ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ವಿರುದ್ಧ ಸಂಘಟಿತ ಹೋರಾಟ ಮಾಡಿ ರಾಜೀನಾಮೆ ಕೊಡಿಸಲು ತೀರ್ಮಾನಿಸಿದ್ದರು. ಅದರಂತೆ ಅಧಿವೇಶನ ಆರಂಭದ ದಿನದಿಂದಲೇ ಈ ವಿಚಾರ ಕೈಗೆತ್ತಿಕೊಂಡು ಸದನದ ಒಳಗೆ ಮತ್ತು ಹೊರಗೆ ಪ್ರಬಲ ಹೋರಾಟ ನಡೆಸಿದ್ದರು.
ಅಧಿವೇಶನದಲ್ಲಿ ಚರ್ಚಿಸಲು ಹಲವು ವಿಚಾರಗಳು ಇದ್ದವು. ರಾಜ್ಯದಲ್ಲಿ ಬರಗಾಲ, ಕೆಪಿಎಸ್ಸಿ, ಹಗರಣ, ಬಿಡದಿ ಟೌನ್‌ಶಿಪ್ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ಬಿಜೆಪಿ-ಜೆಡಿಎಸ್ ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರವನ್ನಷ್ಟೇ ಪ್ರಸ್ತಾಪಿಸಿ ಉಭಯ ಸದನಗಳಲ್ಲಿ ಹೋರಾಟ ಮಾಡಿದವು. ಉಭಯ ಪಕ್ಷಗಳ ಸದಸ್ಯರು ಕಪ್ಪು ಪಟ್ಟಿ ಧರಿಸಿ ಹೋರಾಟ, ಕಪ್ಪು ಟೀ ಶರ್ಟ್ ಧರಿಸಿ ಹೋರಾಟ, ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ, ಶಾಸಕರ ಭವನದ ಆವರಣದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಪ್ರತಿಭಟನೆ ಹಾಗೂ ವಿಧಾನಸೌಧದ ವರೆಗೆ ಪಾದಯಾತ್ರೆ ಸೇರಿದಂತೆ ಪ್ರತಿ ದಿನವೂ ಸದನ ಹೊರಗೆ ಮತ್ತು ಒಳಗೆ ಹೋರಾಟ ಮಾಡಿದ್ದರು.
8 ದಿನಗಳ ಕಲಾಪದಲ್ಲಿ ಗದ್ದಲ
ಎಂಟು ದಿನಗಳ ಕಾಲ ಉಭಯ ಸದನಗಳಲ್ಲಿ ಈ ರಾಜೀನಾಮೆ ವಿಚಾರವೇ ಮಾರ್ದನಿಸಿ ಗದ್ದಲ ಉಂಟಾಯಿತು. ಆದರೂ ಸಚಿವ ನಾಗೇಂದ್ರ ರಾಜೀನಾಮೆ ಕೊಡಿಸಲು ಸರ್ಕಾರ ಒಪ್ಪಲಿಲ್ಲ. ಬಿಜೆಪಿ-ಜೆಡಿಎಸ್‌ನ ಈ ಸಂಘಟಿತ ಹೋರಾಟ ತೀವ್ರಗೊಂಡು ಸದನದಲ್ಲಿ ಅಹೋರಾತ್ರಿ ಧರಣಿ ಆರಂಭಿಸುವ ಘೋಷಣೆ ಹಿನ್ನೆಲೆಯಲ್ಲಿ ಕಂಗೆಟ್ಟ ಆಡಳಿತರೂಢ ಕಾಂಗ್ರೆಸ್ ಸರ್ಕಾರವು ಅನ್ಯ ಮಾರ್ಗ ಇಲ್ಲದೆ ಮೂರು ದಿನ ಮುಂಚಿತವಾಗಿ ಅಧಿವೇಶನ ಮುಗಿಸಿತು.
ಅಷ್ಟಕ್ಕೆ ಸುಮ್ಮನಾಗದ ಬಿಜೆಪಿ-ಜೆಡಿಎಸ್ ಪಕ್ಷಗಳು ಅಧಿವೇಶನ ಮುಗಿದರೂ ಬಿ.ನಾಗೇಂದ್ರ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರೆಸಲಾಗುವುದು. ಜನತಾ ನ್ಯಾಯಾಲಯದ ಎದುರು ಈ ವಿಚಾರ ತೆಗೆದುಕೊಂಡು ಹೋಗುವುದಾಗಿ ಘೋಷಿಸಿದವು. ಬಳಿಕ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಘೋಷಿಸಿತು. ಸೆ.1ರಿಂದ ರಾಯಚೂರಿನ ಗುರಗುಂಟಾದಿಂದ ಬಳ್ಳಾರಿ ವರೆಗೆ 10 ದಿನಗಳ ಕಾಲ 170 ಕಿ.ಮೀ. ಪಾದಯಾತ್ರೆ ಮಾಡುವುದಾಗಿ ರಾಜ್ಯ ಬಿಜೆಪಿ ನಾಯಕರು ಘೋಷಿಸಿದರು. ಈ ಪಾದಯಾತ್ರೆ ಘೋಷಣೆ ಬೆನ್ನಲ್ಲೇ ಸಚಿವ ನಾಗೇಂದ್ರ ಅವರ ತಲೆದಂಡವಾಗಿದೆ. ಸದನ ಒಳಗೆ ಸತತ ಧರಣಿ, ಪ್ರತಿಭಟನೆ ನಡೆಸಿದರೂ ರಾಜೀನಾಮೆ ಪಡೆಯಲಾಗದ ಬಿಜೆಪಿ-ಜೆಡಿಎಸ್ ಪಕ್ಷಗಳು ಈಗ ಸದನ ಮುಗಿದ ಬಳಿಕ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿವೆ.
ಮುಡಾ ಬಳಿಕ 2ನೇ ಬಾರಿ ವಿಜಯೇಂದ್ರ!
ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಸಂಬಂಧ ಸಚಿವ ಬಿ.ನಾಗೇಂದ್ರ ಅವರ ತಲೆದಂಡವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ-ಜೆಡಿಎಸ್ ರೂಪಿಸಿದ ಸಂಘಟಿತ ಹೋರಾಟಕ್ಕೆ ಕೊನೆಗೂ ಗೆಲುವಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧದ ಮುಡಾ ಹಗರಣ ವಿಚಾರವಾಗಿ ವಿಜಯೇಂದ್ರ ನೇತೃತ್ವದಲ್ಲಿ ಸಂಘಟಿತ ಹೋರಾಟ ನಡೆದಿತ್ತು. ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದರು. ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಂಡು ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ ಕೋಟ್ಯಂತರ ರು. ಮೌಲ್ಯದ 14 ಬದಲಿ ನಿವೇಶನಗಳನ್ನು ಮುಡಾಕ್ಕೆ ವಾಪಸ್ ನೀಡಿದ್ದರು.
ಸಂಘಟಿತ ಹೋರಾಟ
ಈ ಪ್ರಮುಖ ಹೋರಾಟದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ವಿಚಾರ ಕೈಗೆತ್ತಿಕೊಂಡ ವಿಜಯೇಂದ್ರ ಅವರು ಮೈತ್ರಿ ಪಕ್ಷ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನದ ಒಳಗೆ ಮತ್ತು ಹೊರಗೆ ಸಂಘಟಿತ ಹೋರಾಟ ರೂಪಿಸಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಈ ಹಗರಣದಲ್ಲಿ ಅಂದು ಸಚಿವರಾಗಿದ್ದ ನಾಗೇಂದ್ರ ಆರೋಪಿಯಾಗಿದ್ದರು. ವಿರೋಧ ಪಕ್ಷಗಳ ಹೋರಾಟದ ಫಲವಾಗಿ ಅಂದು ಅವರು ರಾಜೀನಾಮೆ ನೀಡಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಮತ್ತೆ ಸಂಪುಟದಲ್ಲಿ ನಾಗೇಂದ್ರಗೆ ಸಚಿವ ಸ್ಥಾನ ನೀಡಲಾಗಿತ್ತು. ಕಳಂಕಿತ ಸಚಿವನ ರಾಜೀನಾಮೆಗೆ ಆಗ್ರಹಿಸಿ ವಿಜಯೇಂದ್ರ ಹೋರಾಟ ರೂಪಿಸಿದ್ದರು. ಮಿತ್ರ ಪಕ್ಷ ಜೆಡಿಎಸ್ ಸಾಥ್ ಪಡೆದು ಸದನ ಒಳಗೆ ಮತ್ತು ಹೊರಗೆ ಪ್ರತಿ ದಿನ ಹೋರಾಟ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಹೋರಾಟಕ್ಕೆ ಮಣಿಯದ ಸರ್ಕಾರ ಸದನವನ್ನು ಮೊಟಕುಗೊಳಿಸಿತ್ತು. ಆದರೂ ಈ ರಾಜೀನಾಮೆ ವಿಚಾರ ಕೈಬಿಡದ ವಿಜಯೇಂದ್ರ ಸದನ ಹೊರಗೆ ಹೋರಾಟ ಮುಂದುವರೆಸಲು ನಿರ್ಧರಿಸಿದರು. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ರಾಯಚೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಸಿದ್ಧತೆಯನ್ನೂ ಆರಂಭಿಸಿದ್ದರು. ಇದರ ಬೆನ್ನಲ್ಲೇ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಮುಡಾ ಹಗರಣದ ಯಶಸ್ಸಿನ ಬಳಿಕ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ರಾಜ್ಯ ಬಿಜೆಪಿ ಮತ್ತೊಮ್ಮೆ ಯಶಸ್ಸು ಸಿಕ್ಕಿದಂತಾಗಿದೆ.


