ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಜಾರಿ ನಿರ್ದೇಶನಾಲಯದ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಅವರು ಏನು ಹೇಳಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ. ಓದಿ..

ಬಾಗಲಕೋಟೆ: ಸಚಿವ ಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಹಿಂದೆ ಕಾಂಗ್ರೆಸನವರ ಕೈವಾಡ ಇದೆ ಎಂಬ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿ.. ಜಾರಕಿಹೊಳಿ ಮೇಲಿನ ಇಡಿ ದಾಳಿಗೆ ಸಿದ್ದರಾಮಯ್ಯನವರ ಶಾಪವೇ ಕಾರಣ. ಸಿದ್ದರಾಮಯ್ಯ ಕೆಳಗಿಳಿಸಿದರೆ ಏನು ಅಭ್ಯಂತರ ಇಲ್ಲವೆಂದು 36 ಶಾಸಕರ ಸಹಿ ಮಾಡಿ ಕೊಟ್ಟವರೇ ಸತೀಶ ಜಾರಕಿಹೊಳಿ ಎಂದು ಲೇವಡಿ ಮಾಡಿದ್ದಾರೆ.

ಕೆಎನ್ ರಾಜಣ್ಣ ಕತೆ ಏನಾಯ್ತು?

ಎಂ.ಬಿ.ಪಾಟೀಲ್ , ಜಮೀರ್ ಅಹ್ಮದ್ ಖಾನ್, ಜಾರಕಿಹೊಳಿ ಇವರೆಲ್ಲಾ ಹೇಳಿದ್ರು. ಇದನ್ನೆಲ್ಲಾ ಕಾಂಗ್ರೆಸ್‌ನವರೇ ಮಾಡಿಸಿದ್ದು ಅಂತಾ. ಬಿಜೆಪಿಯಲ್ಲಿ ಇಂತಹದನ್ನ ಮಾಡುವವರು ಯಾರೂ ಇಲ್ಲ, ಯಾರಿದ್ದಾರೆ ಹೇಳಿ ನೋಡೋಣ? ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ನಲ್ಲೇ ದ್ವೇಷ ಇದೆ. ವಾಲ್ಮೀಕಿ ಜನಾಂಗದಲ್ಲಿ ಒಬ್ಬ ಒಳ್ಳೆಯ ಲೀಡರ್ ರೆಡಿ ಆಗ್ತಿದ್ದಾನೆ ಅಂತೆ ಹೀಗೆ ಮಾಡಿದ್ದಾರೆ.

ಅಂದು ಕಾಂಗ್ರೆಸ್‌ನ ಕೆಎನ್ ರಾಜಣ್ಣ ಸಹಕಾರ ಸಚಿವರಾಗಿದ್ದರು. ಅವರು ಸ್ಟೇಟ್ ಫಾರ್ವರ್ಡ್ ಆಗಿ ಮಾತನಾಡಿದರು. ಬೆನ್ನಲ್ಲೇ ಅವರ ಪರಿಸ್ಥಿತಿ ಏನಾಯಿತು? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಏನು ಮಾತನಾಡದಿದ್ದರೂ ಅವರನ್ನು ಅಪಮಾನಿಸಿದರು ಎಂದು ಹೇಳಿಕೊಟ್ಟರು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ಇದ್ದರೂ ಅಪಮಾನವನ್ನು ಅಪಮಾನ ಅಂತ ಹೇಳಲೇಬೇಕು. ನಾನು ಸಹ ತಪ್ಪನ್ನ ತಪ್ಪು ಅಂತ ಹೇಳಿದ್ದೇನೆ. ನನ್ನನ್ನು ಹೊರ ಹಾಕಿದ್ದಾರೆ. ಹಾಕಲಿ ಬಿಡಿ, ಏನಾಗುತ್ತೆ ನೋಡೋಣ ಎಂದು ವಿಜಯೇಂದ್ರಗೆ ಟಾಂಗ್ ನೀಡಿದರು.

ಈ ಹಿಂದೆ ಹೆಚ್‌ಡಿ ಕುಮಾರಸ್ವಾಮಿ ಇದ್ದಾಗ 10 ಕಾರ್ಪೊರೇಷನ್‌ಗೆ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಯಡಿಯೂರಪ್ಪ ಬಂದಮೇಲೆ ಅದೆಲ್ಲ ಹಣವನ್ನು ಮರಳಿ ಪಡೆದು ಶಿವಮೊಗ್ಗಕ್ಕೆ ಹಾಕಿದರು. ಒಬ್ಬ ಎಂಎಲ್ಎ ಆಗಿ ನಾನು ಇದನ್ನು ಪ್ರಶ್ನೆ ಮಾಡಬಾರದಾ? ನಾನು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದೆ. ನಾಳೆಯಿಂದ ನಾಳೆ ಹಣವನ್ನ ಮರಳಿ ಹಾಕಬೇಕು, ಇಲ್ಲದಿದ್ದರೆ ನಿಮ್ಮ ಸ್ಥಾನದಿಂದ ಕೆಳಗಿಳಿಸ್ತಿವಿ ಎಂದು ಹೇಳಿದ್ದೆ.

ಆಗ ಅವರು ಏನು ಮಾಡ್ಕೋತಿಯ ನೋಡೋಣ ಅಂದಿದ್ದರು. ನೋಡಿದಿರಲ್ಲ ಹೇಗೆ ಕೆಳಗಿಳಿಸಿದ್ವಿ ಎಂದು. ಕೊನೆವರೆಗೂ ನಾನು ಯಡಿಯೂರಪ್ಪ ಮನೆಗೆ ಹೋಗಲೇ ಇಲ್ಲ. ನಂತರ ಬಸವರಾಜ್ ಬೊಮ್ಮಾಯಿ ಬಂದು ಫೋನ್ ಮಾಡಿದ ಮೇಲೆ ನಾನು ಹೋಗಿದ್ದು. ಇಡೀ ಬಿಜಾಪುರವೇ ದೇಶದಲ್ಲಿ ಅತ್ಯಂತ ಸ್ವಚ್ಛವಾಗಿರುವ ನಾಲ್ಕನೇ ನಗರ. ಸಿಸಿ ರೋಡ್, ಡ್ರೈನೇಜ್ ಎಲ್ಲವನ್ನ ಮಾಡಿಸಿ 99% ಧೂಳನ್ನು ಕಡಿಮೆ ಮಾಡಿದ್ದೇವೆ. ನಾನೊಬ್ಬನೇ ಮಂತ್ರಿಯಾಗಿದ್ದರೆ ಏನಾಗುತ್ತಿತ್ತು? ಯಡಿಯೂರಪ್ಪ ಬರಿ ಅದನ್ನೇ ಮಾತ್ರ ಹೇಳ್ತಾ ಇದ್ರು. ವಿಜಯಪುರ ನಗರಕ್ಕೆ ಒಟ್ಟು 3,000 ಕೋಟಿ ಅನುದಾನ ತಂದಿದ್ದೇನೆ. ಹೀಗಾಗಿ ಅಭಿವೃದ್ಧಿಯಾಗಿದೆ ಎಂದು ಯತ್ನಾಳ ಹೇಳಿಕೊಂಡಿದ್ದಾರೆ.