ಟಿ. ನರಸೀಪುರದಲ್ಲಿ ಗಣೇಶೋತ್ಸವದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ಸಿಪಿಐ ಧನಂಜಯ ಅವರ ಕರಾಳ ಭೂತಕಾಲ ಇದೀಗ ಬಯಲಾಗಿದೆ. ಈ ವಿವಾದದ ಬೆನ್ನಲ್ಲೇ, 12 ವರ್ಷಗಳ ಹಿಂದಿನ ಅತ್ಯಾ*Chaರ, ವಂಚನೆ ಪ್ರಕರಣ ಮತ್ತು ದಲಿತ ಯುವಕರ ಮೇಲೆ ನಡೆಸಿದ ಅಮಾನವೀಯ ಲಾಕಪ್ ಹಿಂಸೆಯಂತಹ ಆಘಾತಕಾರಿ ಕೃತ್ಯಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಮೈಸೂರು : ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಸಿಪಿಐ (ವೃತ್ತ ನಿರೀಕ್ಷಕ) ಧನಂಜಯ ನೀಡಿರುವ ವಿವಾದಾತ್ಮಕ ಹೇಳಿಕೆ ಈಗ ದೊಡ್ಡ ಮಟ್ಟದ ರಾಜಕೀಯ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. "ಮಸೀದಿಯ ಮುಂದೆ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸುತ್ತೇನೆ" ಎಂದು ಸಾರ್ವಜನಿಕವಾಗಿ ಹೆದರಿಸಿದ್ದ ಧನಂಜಯ ಅವರ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದಿದೆ.

ಆದರೆ, ಈ ವಿವಾದದ ನಡುವೆಯೇ ಇನ್ಸ್‌ಪೆಕ್ಟರ್ ಧನಂಜಯ ಅವರ ಭೂತಕಾಲದ ಒಂದೊಂದೇ ಆಘಾತಕಾರಿ ವಿಚಾರಗಳು ಮತ್ತು ಕರಾಳ ಕೃತ್ಯಗಳು ಈಗ ಒಂದೊಂದೇ ಹೊರಬರಲಾರಂಭಿಸಿವೆ.

12 ವರ್ಷಗಳ ಹಿಂದೆ ದಾಖಲಾಗಿದ್ದ ಅತ್ಯಾ*Chaರ ಮತ್ತು ವಂಚನೆ ಪ್ರಕರಣ

ಧನಂಜಯ ಅವರ ಇತಿಹಾಸವನ್ನು ಬಗೆದಷ್ಟು ಅಕ್ರಮಗಳ ಸರಣಿಯೇ ತೆರೆದುಕೊಳ್ಳುತ್ತಿದೆ. 2012ರಲ್ಲಿ ಅವರು ಬೆಂಗಳೂರಿನಲ್ಲಿ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದಾಗ ಎಂ.ಜಿ. ರಸ್ತೆಯ ಪಬ್‌ ಒಂದರಲ್ಲಿ ಬಾರ್ಟೆಂಡರ್ ಹಾಗೂ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ದೆಹಲಿ ಮೂಲದ ಯುವತಿಯ ಪರಿಚಯವಾಗಿತ್ತು. ತಮಗೆ ಈಗಾಗಲೇ ಮದುವೆಯಾಗಿದ್ದರೂ, ಆ ವಿಷಯವನ್ನು ಮುಚ್ಚಿಟ್ಟು ಧನಂಜಯ ಆಕೆಯೊಂದಿಗೆ ಪ್ರೇಮ ಸಂಬಂಧ ಬೆಳೆಸಿದ್ದರು. ಇಬ್ಬರೂ ಇಂದಿರಾನಗರದ ಬಾಡಿಗೆ ಮನೆಯೊಂದರಲ್ಲಿ ಹಲವಾರು ತಿಂಗಳುಗಳ ಕಾಲ ಒಟ್ಟಿಗೆ ವಾಸವಿದ್ದರು.

ನಂತರ ಧನಂಜಯ ಅವರಿಗೆ ಈಗಾಗಲೇ ಮದುವೆಯಾಗಿದೆ ಎಂಬ ಸತ್ಯ ತಿಳಿದಾಗ ಆ ಯುವತಿ ಸಂಬಂಧವನ್ನು ಮುರಿದುಕೊಂಡಿದ್ದರು. ತನ್ನ ವೈವಾಹಿಕ ಸ್ಥಿತಿಯನ್ನು ಮರೆಮಾಚಿ ಪ್ರೀತಿಯ ಹೆಸರಿನಲ್ಲಿ ವಂಚಿಸಲಾಗಿದೆ ಎಂದು ಆರೋಪಿಸಿ ಆಕೆ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ನಿರ್ದೇಶನದಂತೆ ದೆಹಲಿಯ ಮಾಲವೀಯ ನಗರ ಪೊಲೀಸ್ ಠಾಣೆಯಲ್ಲಿ ಧನಂಜಯ ವಿರುದ್ಧ ಅತ್ಯಾ*ರ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು.

2014ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಆಗಿದ್ದ ಧನಂಜಯ ನನ್ನು ಬಂಧಿಸಲು ದೆಹಲಿ ಪೊಲೀಸರು ಆಗಮಿಸಿದಾಗ, ಈ ಮಹಾನುಭಾವ ತಮ್ಮ ಸೇವಾ ರಿವಾಲ್ವರ್ ಹಾಗೂ ವಾಕಿ ಟಾಕಿಯೊಂದಿಗೆ ಸುಮಾರು 8 ದಿನಗಳ ಕಾಲ ನಾಪತ್ತೆಯಾಗಿದ್ದ.

ಕಸ್ಟಡಿ ಹಿಂಸೆ, ದಲಿತ ಯುವಕರ ಮೇಲಿನ ಅಮಾನವೀಯ ಹಲ್ಲೆ

ಇಷ್ಟೇ ಅಲ್ಲದೆ, ಧನಂಜಯ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಡೆಸುತ್ತಿದ್ದ ಲಾಕಪ್ ಹಿಂಸೆಯ ಕೃತ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿವೆ.

ದಲಿತ ಯುವಕರ ಮೇಲೆ ಹಲ್ಲೆ: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕೌಟುಂಬಿಕ ಕಲಹದ ನೆಪದಲ್ಲಿ ನಾಲ್ವರು ದಲಿತ ಯುವಕರನ್ನು ಠಾಣೆಗೆ ಕರೆಸಿದ್ದ ಧನಂಜಯ, ಅವರ ಮೇಲೆ ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳು ಹಾಗೂ ಮರದ ತುಂಡುಗಳಿಂದ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದ.

ಸಿಎಂಗೆ ದೂರು ಮತ್ತು ಪ್ರತಿಭಟನೆ: ಈ ಘಟನೆಯಿಂದ ನೊಂದ ಯುವಕರು ಅಂದಿನ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ಖುದ್ದು ದೂರು ನೀಡಿದ್ದರು. ದಲಿತ ಸಂಘರ್ಷ ಸಮಿತಿ (ದಸಂಸ) ಈ ಅಧಿಕಾರಿಯ ವಿರುದ್ಧ ಬೃಹತ್ ಹೋರಾಟವನ್ನೇ ನಡೆಸಿತ್ತು.

ಠಾಣೆಯಲ್ಲೇ ವಿಶೇಷ 'ಬ್ಯಾಟ್'ಗಳು: ವಿಚಾರಣೆಗೆ ಬರುವವರನ್ನು ಬೆದರಿಸಲು ಧನಂಜಯ ಠಾಣೆಯಲ್ಲೇ ವಿಶೇಷವಾಗಿ ಸಿದ್ಧಪಡಿಸಿದ ಅಗಲವಾದ ಬೆಲ್ಟ್ ಮಾದರಿಯ ಬ್ಯಾಟ್‌ಗಳು ಮತ್ತು ಮರದ ಕೋಲುಗಳನ್ನು ಇಟ್ಟುಕೊಂಡಿದ್ದ. ಪ್ರಸ್ತುತ, ಅಂದು ಗಾಯಗೊಂಡಿದ್ದ ಯುವಕರ ಫೋಟೋಗಳು ಮತ್ತು ಧನಂಜಯ ಬಳಸುತ್ತಿದ್ದ ಹಿಂಸಾರೂಪದ ಕೋಲು ಬ್ಯಾಟ್‌ಗಳ ಚಿತ್ರಗಳು ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

ಟಿ. ನರಸೀಪುರದ ಇತ್ತೀಚಿನ ವಿವಾದದ ಬೆನ್ನಲ್ಲೇ, ಧನಂಜಯನ ಹಳೆಯ ಪ್ರಕರಣಗಳು ಒದೊಂದಾಗಿ ಬಹಿರಂಗವಾಗಿರುವುದು ಸಾರ್ವಜನಿಕರಲ್ಲಿ ಖಾಕಿ ಪಡೆಯ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ಮೂಡಿಸಿದೆ.