Dwiti Chandra Sahu Success Story: ತಾಯಿ ಬೇರೆಯವರ ಮನೆಗಳಲ್ಲಿ ಪಾತ್ರೆ ತೊಳೆದು ಮಗನನ್ನು ಓದಿಸಿದರೆ, ಮಗ ಹಠ ಬಿಡದೆ ಮನೆ ಮನೆಗೆ ಪತ್ರಿಕೆ ಮಾರಿ ವಿದ್ಯಾಭ್ಯಾಸ ಪೂರೈಸಿದನು. ಇಂದು ಅದೇ ವ್ಯಕ್ತಿ ದೇಶದ ಅತ್ಯುತ್ತಮ ಶಿಕ್ಷಕರಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ! ಒಡಿಶಾದ ಬೆಟ್ಟಗುಡ್ಡಗಳ ನಡುವೆ ಶಿಕ್ಷಣದ ಜ್ಯೋತಿ ಬೆಳಗಿದ ದ್ವಿತಿ ಚಂದ್ರ ಸಾಹು ಅವರ ಸಾಧನೆಯ ಕಥೆ ಇಲ್ಲಿದೆ.
ಒಡಿಶಾದ ರಾಯಗಡ ಜಿಲ್ಲೆಯ ಅತ್ಯಂತ ಹಿಂದುಳಿದ ಗುಡ್ಡಗಾಡು ಪ್ರದೇಶದಿಂದ ಬಂದ ಶಿಕ್ಷಕ ದ್ವಿತಿ ಚಂದ್ರ ಸಾಹು ಅವರ ಕಥೆ ಅಪ್ಪಟ ಸಂಘರ್ಷ, ತ್ಯಾಗ ಮತ್ತು ಅಚಲ ನಿರ್ಧಾರದ ಸಂಕೇತವಾಗಿದೆ. ತಾಯಿ ಬೇರೆಯವರ ಮನೆಗಳಲ್ಲಿ ಪಾತ್ರೆ ತೊಳೆದು ಮಗನನ್ನು ಓದಿಸಿದರೆ, ಆ ಮಗ ಇಂದು ದೇಶದ ಭವಿಷ್ಯ ರೂಪಿಸುವ ಅತ್ಯುತ್ತಮ ಶಿಕ್ಷಕನಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬಡತನದ ನಡುವೆ ಅರಳಿದ ಪ್ರತಿಭೆ
ದ್ವಿತಿ ಸಾಹು ಅವರ ಬಾಲ್ಯ ಅತ್ಯಂತ ಕಷ್ಟಕರವಾಗಿತ್ತು. ತಂದೆಯನ್ನು ಬಾಲ್ಯದಲ್ಲೇ ಕಳೆದುಕೊಂಡ ದ್ವಿತಿ ಅವರಿಗೆ ಬಡತನ ಹೆಜ್ಜೆ ಹೆಜ್ಜೆಯಲ್ಲೂ ಅಡ್ಡಿಯಾಗಿತ್ತು. ಆದರೆ ಅವರ ತಾಯಿ ಅವರಿಗೆ ದೊಡ್ಡ ಶಕ್ತಿಯಾಗಿದ್ದರು. ಮಗ ಓದಬೇಕೆಂಬ ಹಂಬಲದಿಂದ ತಾಯಿ ಬೇರೆಯವರ ಮನೆಗಳಲ್ಲಿ ಕೂಲಿ ಕೆಲಸ ಮಾಡಿ, ಪಾತ್ರೆ ತೊಳೆದು ಹಣ ಹೊಂದಿಸುತ್ತಿದ್ದರು. ದ್ವಿತಿ ಕೂಡ ತಾಯಿಗೆ ಹೊರೆಯಾಗಬಾರದೆಂದು ಹೈಸ್ಕೂಲ್ ಮುಗಿಸಿದ ನಂತರ ಪ್ರತಿದಿನ ಮೈಲುಗಟ್ಟಲೆ ನಡೆದು ಮನೆ ಮನೆಗೆ ಪತ್ರಿಕೆಗಳನ್ನು ಮಾರಿ ತಮ್ಮ ಮುಂದಿನ ಓದಿನ ಖರ್ಚು ನೋಡಿಕೊಂಡರು.
ಸರ್ಕಾರಿ ಶಾಲೆಯಲ್ಲಿ ಸೇವೆ ಆರಂಭ
ಸತತ ಪರಿಶ್ರಮದಿಂದ ಬುಡಕಟ್ಟು ಅಧ್ಯಯನದಲ್ಲಿ ಪಿಎಚ್‌ಡಿ ಪೂರೈಸಿದ ದ್ವಿತಿ, ಪತ್ರಿಕೋದ್ಯಮವನ್ನೂ ಅಭ್ಯಾಸ ಮಾಡಿದರು. 2001ರಲ್ಲಿ ಶಿಕ್ಷಕ ವೃತ್ತಿಗೆ ಕಾಲಿಟ್ಟ ಅವರು, ರಾಯಗಡ ಜಿಲ್ಲೆಯ ಬಿಲ್ಲೆಸು ಎಂಬ ಸರ್ಕಾರಿ ಶಾಲೆಯಲ್ಲಿ ಸೇವೆ ಆರಂಭಿಸಿದರು. ಆ ದುರ್ಗಮ ಪ್ರದೇಶದಲ್ಲಿ ವಿದ್ಯುತ್ ಅಥವಾ ಇಂಟರ್ನೆಟ್ ಸೌಲಭ್ಯಗಳಿಲ್ಲದಿದ್ದರೂ, ದ್ವಿತಿ ಅವರು ಶಿಕ್ಷಣದ ಗುಣಮಟ್ಟವನ್ನು ಕುಗ್ಗಲು ಬಿಡಲಿಲ್ಲ.
ವಿಶಿಷ್ಟ ಬೋಧನಾ ಕ್ರಮಗಳು
ತಮ್ಮ ಪತ್ರಿಕೋದ್ಯಮದ ಅನುಭವ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಅವರು ಶಾಲೆಯಲ್ಲಿ ಅದ್ಭುತ ಬದಲಾವಣೆ ತಂದರು.
ವಿನೂತನ ಪ್ರಯೋಗಗಳು: ಶಾಲೆಯಲ್ಲಿ 'ಅಮ ಬ್ಯಾಂಕ್' (ನಮ್ಮ ಬ್ಯಾಂಕ್), 'ಬಾಲ ನ್ಯಾಯಾಲಯ', ಕಲೆ ಮತ್ತು ಬೊಂಬೆಯಾಟದ ಮೂಲಕ ಪಾಠ ಮಾಡುವುದನ್ನು ಅವರು ಪರಿಚಯಿಸಿದರು.
ಡಿಜಿಟಲ್ ಕ್ರಾಂತಿ: ಇಂಟರ್ನೆಟ್ ಇಲ್ಲದಿದ್ದರೂ ಸಹ, ಪಕ್ಕದ ಪಟ್ಟಣಗಳಿಗೆ ಹೋಗಿ ಶೈಕ್ಷಣಿಕ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಂದು ಮಕ್ಕಳಿಗೆ ತೋರಿಸುತ್ತಿದ್ದರು.
ಮರುಬಳಕೆ ವಸ್ತುಗಳ ಬಳಕೆ: ಕಡಿಮೆ ವೆಚ್ಚದ ಶೈಕ್ಷಣಿಕ ಪರಿಕರಗಳನ್ನು ತಯಾರಿಸಲು 'ಪಿಟಾರ ಶಿಕ್ಷಣ ಪೆಟಿ' ಎಂಬ ಯೋಜನೆಯಡಿ ಹಳೆಯ ವಸ್ತುಗಳನ್ನು ಮರುಬಳಕೆ ಮಾಡಿದರು.
ಬುಡಕಟ್ಟು ಭಾಷೆಗಳ ಬಳಕೆ: ಬುಡಕಟ್ಟು ಮಕ್ಕಳಿಗಾಗಿ ಒಡಿಯಾ ಮತ್ತು ಕೊವಿ ಭಾಷೆಗಳಲ್ಲಿ ದ್ವಿಭಾಷಾ ಶಬ್ದಕೋಶ ಹಾಗೂ ಕಥೆ ಪುಸ್ತಕಗಳನ್ನು ಬಳಸಿ ಶಿಕ್ಷಣ ನೀಡಿದರು. ಗಣಿತ ಕಲಿಸಲು ಗೋಲಿಗಳನ್ನು (Marbles) ಬಳಸುವ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸಿದರು.
ರಾಷ್ಟ್ರೀಯ ಗೌರವ
ದ್ವಿತಿ ಸಾಹು ಅವರ ಈ ನಿಷ್ಠೆ ಮತ್ತು ನವೀನ ಬೋಧನಾ ಕೌಶಲಗಳನ್ನು ಗುರುತಿಸಿದ ಕೇಂದ್ರ ಸರ್ಕಾರ, ಅವರಿಗೆ 2024ರ 'ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ' ನೀಡಿ ಗೌರವಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದ ದ್ವಿತಿ ಸಾಹು ಅವರ ಸಾಧನೆ ಇಂದು ಲಕ್ಷಾಂತರ ಯುವಕರಿಗೆ ಮತ್ತು ಶಿಕ್ಷಕರಿಗೆ ಪ್ರೇರಣೆಯಾಗಿದೆ. "ಕಷ್ಟಗಳು ಸಾಧನೆಗೆ ಅಡ್ಡಿಯಲ್ಲ" ಎಂಬುದನ್ನು ದ್ವಿತಿ ಚಂದ್ರ ಸಾಹು ಜಗತ್ತಿಗೆ ಸಾಬೀತುಪಡಿಸಿದ್ದಾರೆ.
"ಹೊಟ್ಟೆ ಖಾಲಿಯಿದ್ದರೂ ನನ್ನ ಛಲ ಅದಮ್ಯವಾಗಿತ್ತು. ಹಸಿವಿನ ತವಕ ಹೇಗಿರುತ್ತದೆ ಎಂಬುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅದೆಷ್ಟೋ ರಾತ್ರಿಗಳನ್ನು ನಾನು ಒಂದು ತುತ್ತು ಅನ್ನವಿಲ್ಲದೆ ಹಸಿದ ಹೊಟ್ಟೆಯಲ್ಲೇ ಕಳೆದಿದ್ದೇನೆ." ಎಂದು ಇದೇ ಸಂದರ್ಭದಲ್ಲಿ ದ್ವಿತಿ ಸಾಹು ಹೇಳಿಕೊಂಡಿದ್ದಾರೆ.
