Success Story: ಟಿವಿ ಸೀರಿಯಲ್‌ನಿಂದ ಪ್ರೇರಿತರಾದ ಇಬ್ಬರು ಗೆಳೆಯರು ಕೇವಲ ₹1 ಲಕ್ಷ ಬಂಡವಾಳದೊಂದಿಗೆ 'ಬ್ಲೂ ಟೀ' ಬ್ರಾಂಡ್ ಆರಂಭಿಸಿದರು. 11 ದೇಶಗಳಲ್ಲಿ ಸದ್ದು ಮಾಡುತ್ತಿರುವ ಈ ಸ್ಟಾರ್ಟ್‌ಅಪ್ ಸಾವಿರಾರು ರೈತರ ಆದಾಯವನ್ನೂ ಮೂರು ಪಟ್ಟು ಹೆಚ್ಚಿಸಿದೆ.
ನೂರಾರು ಕೋಟಿ ರೂಪಾಯಿ ಉದ್ಯಮ ಕಟ್ಟಲು ಕೋಟ್ಯಂತರ ರೂಪಾಯಿ ಬಂಡವಾಳವೇ ಬೇಕಿಲ್ಲ, ಒಂದು ಸಣ್ಣ ವಿಭಿನ್ನ ಆಲೋಚನೆ ಮತ್ತು ಕಠಿಣ ಪರಿಶ್ರಮವಿದ್ದರೆ ಸಾಕು ಎಂಬುದಕ್ಕೆ ಸುನೀಲ್ ಚಂದ್ರ ಸಾಹಾ ಮತ್ತು ನಿತೇಶ್ ಸಿಂಗ್ ಅವರ ಯಶಸ್ಸಿನ ಕಥೆಯೇ ಸಾಕ್ಷಿ.
ಆರಂಭದ ದಿನಗಳು ಮತ್ತು ಟಿವಿ ಸೀರಿಯಲ್
ಸುನೀಲ್ ಪಶ್ಚಿಮ ಬಂಗಾಳದವರಾದರೆ, ನಿತೇಶ್ ಉತ್ತರ ಪ್ರದೇಶದವರು. 2011ರಲ್ಲಿ ಚೆನ್ನೈನಲ್ಲಿ ಮೊದಲ ಕೆಲಸಕ್ಕೆ ಸೇರಿದಾಗ ಇವರಿಬ್ಬರ ಪರಿಚಯವಾಯಿತು. ಇಬ್ಬರಿಗೂ ಸ್ವಂತ ಉದ್ಯಮ ಮಾಡಬೇಕೆಂಬ ಹಂಬಲವಿತ್ತು. ವಿಶೇಷವೆಂದರೆ, 'ಪಿಚರ್ಸ್' (Pitchers) ಎಂಬ ಟಿವಿ ಸೀರಿಯಲ್ ಇವರಿಗೆ ಸ್ಟಾರ್ಟ್ಅಪ್ ಆರಂಭಿಸಲು ದೊಡ್ಡ ಪ್ರೇರಣೆ ನೀಡಿತು. ಸುನೀಲ್ ಒಮ್ಮೆ ನೇರಳೆ ಬಣ್ಣದ ವಿಶಿಷ್ಟ ಪಾನೀಯದ ಬಗ್ಗೆ ಲೇಖನವೊಂದನ್ನು ಓದಿದರು. ಅದರ ಬಗ್ಗೆ ಸಂಶೋಧನೆ ನಡೆಸಿದಾಗ, ಆಗ್ನೇಯ ಏಷ್ಯಾದಲ್ಲಿ 'ಬಟರ್‌ಫ್ಲೈ ಪೀ' (ಅಪರಾಜಿತ ಅಥವಾ ಶಂಖ ಪುಷ್ಪ ) ಹೂವಿನಿಂದ ತಯಾರಿಸುವ ಕೆಫೀನ್ ಮುಕ್ತ ಚಹಾಕ್ಕೆ ಭಾರಿ ಬೇಡಿಕೆಯಿರುವುದು ತಿಳಿಯಿತು.
1 ಲಕ್ಷ ರೂಪಾಯಿ ಬಂಡವಾಳ
ಭಾರತದಲ್ಲಿ ಇಂತಹ ಹರ್ಬಲ್ ಟೀ ವಿಭಾಗದಲ್ಲಿ ಯಾವುದೇ ದೊಡ್ಡ ಬ್ರಾಂಡ್ ಇರಲಿಲ್ಲ. ಇದನ್ನು ಮನಗಂಡ ಗೆಳೆಯರಿಬ್ಬರು 2018ರಲ್ಲಿ ತಲಾ 50,000 ರೂಪಾಯಿಗಳಂತೆ ಒಟ್ಟು 1 ಲಕ್ಷ ರೂಪಾಯಿ ಬಂಡವಾಳ ಹೂಡಿ 'ಬ್ಲೂ ಟೀ' (Blue Tea) ಎಂಬ ಬ್ರಾಂಡ್ ಆರಂಭಿಸಿದರು.
ರೈತರ ಬದುಕಲ್ಲಿ ಬೆಳಕು
ಆರಂಭದಲ್ಲಿ ಇವರು ಥೈಲ್ಯಾಂಡ್‌ನಿಂದ ಬಟರ್‌ಫ್ಲೈ ಪೀ ಅಂದರೆ ಶಂಖ ಪುಷ್ಪ ಹೂವುಗಳನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ಆಮದು ಪ್ರಕ್ರಿಯೆಯಲ್ಲಿ ತೊಂದರೆಗಳು ಎದುರಾದವು. ನಂತರ ಭಾರತದಲ್ಲೇ ಈ ಹೂವುಗಳು ಹೇರಳವಾಗಿ ಸಿಗುತ್ತವೆ ಎಂಬುದು ಸಂಸ್ಥಾಪಕರಿಗೆ ತಿಳಿಯಿತು. ನಂತರ ಭಾರತದಲ್ಲೇ ನೀಲಿ ಹೂವುಗಳು ಹೇರಳವಾಗಿ ಬೆಳೆಯುವುದನ್ನು ಪತ್ತೆಹಚ್ಚಿದರು. ಅಲ್ಲಿಯವರೆಗೆ ಕೇವಲ ಧಾರ್ಮಿಕ ಪೂಜೆಗಳಿಗೆ ಬಳಕೆಯಾಗುತ್ತಿದ್ದ ಈ ಹೂವುಗಳನ್ನು ರೈತರಿಂದ ಕೆಜಿಗೆ 700 ರೂಪಾಯಿಯಂತೆ ಖರೀದಿಸಲು ಶುರು ಮಾಡಿದರು. ರೈತರಿಗೆ ಹೂವುಗಳನ್ನು ಸಂಸ್ಕರಿಸುವ ಮತ್ತು ಒಣಗಿಸುವ ತರಬೇತಿ ನೀಡಿದರು. ಇದರಿಂದ ರೈತರ ಮಾಸಿಕ ಆದಾಯ 5,000 ರೂಪಾಯಿಯಿಂದ 17,000 ರೂಪಾಯಿಗೆ ಏರಿಕೆಯಾಯಿತು. ಪ್ರಸ್ತುತ ಉತ್ತರ ಪ್ರದೇಶ, ಬಂಗಾಳ ಮತ್ತು ಮಹಾರಾಷ್ಟ್ರದ ನೂರಾರು ರೈತರು ಇವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
100 ಕೋಟಿ ರೂಪಾಯಿ ಉದ್ಯಮ
ಕೇವಲ 3 ಮಿಶ್ರಣಗಳೊಂದಿಗೆ ಆರಂಭವಾದ ಇವರ ಪಯಣ ಇಂದು 60ಕ್ಕೂ ಹೆಚ್ಚು ಗಿಡಮೂಲಿಕೆಗಳು ಮತ್ತು 200ಕ್ಕೂ ಹೆಚ್ಚು ಉತ್ಪನ್ನಗಳವರೆಗೆ (SKUs) ಬೆಳೆದಿದೆ. ಇಂದು 'ಬ್ಲೂ ಟೀ' ಅಮೆರಿಕ ಸೇರಿದಂತೆ 11 ದೇಶಗಳಲ್ಲಿ ಮಾರಾಟವಾಗುತ್ತಿದೆ. ಅಮೆರಿಕದ ಟಾಪ್ 10 ಟೀ ಬ್ರಾಂಡ್‌ಗಳಲ್ಲಿ ಇದು ಸ್ಥಾನ ಪಡೆದಿದೆ. 2024-25ರ ಆರ್ಥಿಕ ವರ್ಷದಲ್ಲಿ ಕಂಪನಿಯ ವಾರ್ಷಿಕ ವಹಿವಾಟು (ARR) 100 ಕೋಟಿ ರೂಪಾಯಿಗಳ ಗಡಿ ದಾಟಿತ್ತು. ಇಂಡಿಗೋ ಫ್ಲೈಟ್ಸ್ ಮತ್ತು ಬ್ಲೂಸ್ಟೋನ್ ಜ್ಯುವೆಲ್ಲರಿ ಸ್ಟೋರ್‌ಗಳೊಂದಿಗೆ ಮಾಡಿಕೊಂಡ ಪಾಲುದಾರಿಕೆ ಇವರ ಬ್ರಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಮುಂದಿನ ದಿನಗಳಲ್ಲಿ ಐಸ್-ಟೀ ಮತ್ತು ಸ್ವಂತ ಕೆಫೆಗಳನ್ನು ತೆರೆಯುವ ಗುರಿ ಹೊಂದಿರುವ ಈ ಗೆಳೆಯರ ಸಾಧನೆ ಇಂದು ಸಾವಿರಾರು ಯುವ ಉದ್ಯಮಿಗಳಿಗೆ ಮಾದರಿಯಾಗಿದೆ.