Python attack viral video: ನದಿಯ ಮೇಲೆ ಹಗ್ಗ ಹಿಡಿದು ಊಯ್ಯಾಲೆ ಆಡುತ್ತಿದ್ದ ಯುವಕನ ಮೇಲೆ ಬೃಹತ್ ಹೆಬ್ಬಾವೊಂದು ಏಕಾಏಕಿ ದಾಳಿ ಮಾಡುವ ವಿಡಿಯೋವೊಂದು ಈಗ ಸಂಚಲನ ಮೂಡಿಸಿದೆ. ಯುವಕ ನದಿಗೆ ಜಿಗಿದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರೂ, ಈ ವಿಡಿಯೋದ ಅಸಲಿಯತ್ತಿನ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಇದು ನಿಜಕ್ಕೂ ನಡೆದ ಘಟನೆಯೋ ಅಥವಾ ಎಐ (AI) ತಂತ್ರಜ್ಞಾನದಿಂದ ಸೃಷ್ಟಿಯಾದದ್ದೋ? ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಕೃತಿಯ ನಡುವೆ, ಕಾಡಿನ ನದಿ ತೀರದಲ್ಲಿ ಮೋಜು ಮಾಡಲು ಹೋದ ಪ್ರವಾಸಿಗನೊಬ್ಬನಿಗೆ ಎಂದೂ ಮರೆಯಲಾಗದ ಭಯಾನಕ ಅನುಭವವೊಂದು ಎದುರಾಗಿದೆ. ಮರವೊಂದಕ್ಕೆ ಕಟ್ಟಿದ್ದ ಹಗ್ಗವನ್ನು ಹಿಡಿದು ನದಿಯ ಕಡೆಗೆ ಊಯ್ಯಾಲೆ ಆಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಬೃಹತ್ ಹೆಬ್ಬಾವೊಂದು (Python) ಹಠಾತ್ತಾಗಿ ದಾಳಿ ಮಾಡಲು ಮುಂದಾದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಏನಿದು ಘಟನೆ?

ವೈರಲ್ ಆಗುತ್ತಿರುವ ವಿಡಿಯೋದ ಪ್ರಕಾರ, ಕಾಡಿನ ನಡುವಿನ ನದಿಯ ದಡದಲ್ಲಿ ಕೆಲ ಪ್ರವಾಸಿಗರು ಮೋಜು ಮಾಡುತ್ತಿದ್ದರು. ಅವರಲ್ಲಿ ಒಬ್ಬ ಯುವಕ ಮರವೊಂದಕ್ಕೆ ಕಟ್ಟಿದ್ದ ಉದ್ದನೆಯ ಹಗ್ಗವನ್ನು ಹಿಡಿದುಕೊಂಡು ಊಯ್ಯಾಲೆ ಆಡುತ್ತಾ ನದಿಯ ಮಧ್ಯಭಾಗಕ್ಕೆ ತೂಗಾಡುತ್ತಿದ್ದ. ಮೊದಲಿಗೆ ಎಲ್ಲವೂ ಅತ್ಯಂತ ಸಹಜ ಮತ್ತು ಮೋಜಿನಿಂದ ಕೂಡಿತ್ತು. ಆದರೆ, ಆತ ಹಗ್ಗದ ಮೇಲೆ ತೂಗಾಡುತ್ತಾ ದಡದ ಕಡೆಗೆ ವಾಪಸ್ ಬರುತ್ತಿದ್ದಂತೆಯೇ, ಹತ್ತಿರದ ಪೊದೆಯೊಳಗಿಂದ ಬೃಹತ್ ಗಾತ್ರದ ಹೆಬ್ಬಾವೊಂದು ಅತಿ ವೇಗವಾಗಿ ಆತನ ಕಡೆಗೆ ಧಾವಿಸಿ ಬಂದಿತು.

ಹೆಬ್ಬಾವು ವೇಗವಾಗಿ ಬರುತ್ತಿರುವುದನ್ನು ಕಂಡು ಅಲ್ಲಿದ್ದವರು ಒಂದು ಕ್ಷಣ ಬೆಚ್ಚಿಬಿದ್ದರು. ಸಾಕ್ಷಾತ್ ಯಮನಂತೆ ಬಂದ ಹಾವನ್ನು ಕಂಡ ಯುವಕ ಕಿಂಚಿತ್ತೂ ತಡಮಾಡದೆ ಹಗ್ಗವನ್ನು ಬಿಟ್ಟು ನೇರವಾಗಿ ನದಿಯ ಆಳವಾದ ನೀರಿನೊಳಗೆ ಜಿಗಿದನು. ಹಾವಿನ ದಾಳಿಯಿಂದ ತಪ್ಪಿಸಿಕೊಳ್ಳಲು ನೀರಿನ ಮೊರೆ ಹೋದದ್ದು ಆತನ ಜೀವ ಉಳಿಸಿತು. ನಂತರ ತನ್ನ ಸ್ನೇಹಿತರ ಜೊತೆ ಸೇರಿ ಈಜುತ್ತಾ ಸುರಕ್ಷಿತವಾಗಿ ದಡ ಸೇರಿದ್ದಾನೆ. ಕ್ಷಣಾರ್ಧದಲ್ಲಿ ಸಂಭವಿಸಿದ ಈ ಭಯಾನಕ ದೃಶ್ಯವನ್ನು ಅಲ್ಲಿದ್ದವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ರೋಚಕ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ (X) ನಲ್ಲಿ ಹಂಚಿಕೆಯಾದ ತಕ್ಷಣ ವೈರಲ್ ಆಗಿದೆ. ಇದನ್ನು ವೀಕ್ಷಿಸಿದ ನೆಟ್ಟಿಗರು ಯುವಕನ ಅದೃಷ್ಟ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚಿದ್ದಾರೆ. "ಕಾಡು ಮತ್ತು ನದಿ ತೀರಗಳಲ್ಲಿ ಇಂತಹ ಸಾಹಸಗಳನ್ನು ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು, ಪ್ರಕೃತಿಯಲ್ಲಿ ಯಾವಾಗ ಯಾವ ಅಪಾಯ ಎದುರಾಗುತ್ತದೆ ಎಂದು ಹೇಳಲಾಗದು" ಎಂದು ಅನೇಕರು ಎಚ್ಚರಿಕೆ ನೀಡಿದ್ದಾರೆ.

ಇದು ಎಐ (AI) ವಿಡಿಯೋನಾ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಬೆನ್ನಲ್ಲೇ ನೆಟ್ಟಿಗರು ಎರಡು ಗುಂಪುಗಳಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಂದು ಗುಂಪು ಯುವಕನ ಸಮಯಪ್ರಜ್ಞೆಯನ್ನು ಮೆಚ್ಚುತ್ತಿದ್ದರೆ, ಇನ್ನೊಂದು ದೊಡ್ಡ ಗುಂಪು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸುತ್ತಿದೆ.

ವಿಡಿಯೋದಲ್ಲಿ ಹಾವಿನ ಚಲನವಲನಗಳು ಮತ್ತು ಅದು ದಾಳಿ ಮಾಡುವ ವೇಗ ಅಸಜವಾಗಿ ಕಂಡುಬರುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ 'ಎಐ' ತಂತ್ರಜ್ಞಾನದ ಮೂಲಕ ಅತ್ಯಂತ ನೈಜವಾಗಿ ಕಾಣುವ ವಿಡಿಯೋಗಳನ್ನು ಸೃಷ್ಟಿಸುವುದು ಸುಲಭವಾಗಿರುವುದರಿಂದ, ಇದೂ ಕೂಡ ಅಂತಹದ್ದೇ ಒಂದು ಕರಾಮತ್ತು ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ಈ ವಿಡಿಯೋ ಎಲ್ಲಿ ನಡೆದಿದ್ದು ಅಥವಾ ಯಾರು ಇದನ್ನು ಮೊದಲು ಹಂಚಿಕೊಂಡಿದ್ದು ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ, ಇದು ನಿಜವಾದ ಆಕಸ್ಮಿಕ ಘಟನೆಯೋ ಅಥವಾ ತಂತ್ರಜ್ಞಾನದ ಮೂಲಕ ಬಳಸಿದ್ದೋ ಎಂಬ ಕುರಿತು ಚರ್ಚೆ ಮುಂದುವರೆದಿದೆ. ಯಾವುದಕ್ಕೂ ಕಾಡು ಮತ್ತು ನದಿ ತೀರಗಳಲ್ಲಿ ಪ್ರವಾಸಿಗರು ಇಂತಹ ಸಾಹಸಗಳನ್ನು ಮಾಡುವಾಗ ನೂರು ಬಾರಿ ಯೋಚಿಸಬೇಕು ಎಂಬುದು ತಜ್ಞರ ಎಚ್ಚರಿಕೆಯಾಗಿದೆ.

Scroll to load tweet…