Storage Tips: ನುಗ್ಗೆಕಾಯಿಗಳನ್ನು ನೇರವಾಗಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಅವು ಬೇಗನೆ ಒಣಗಬಹುದು. ಹಾಗಿದ್ರೆ ಮನೆಗೆ ತಂದಂತಹ ನುಗ್ಗೆಕಾಯಿಗಳನ್ನು ಒಣಗದಂತೆ ತುಂಬಾ ದಿನಗಳವರೆಗೆ ಸಂಗ್ರಹಿಸೋದು ಹೇಗೆ? ಇಲ್ಲಿದೆ ಸಂಗ್ರಹಿಸುವ ಸಿಂಪಲ್ ಟ್ರಿಕ್ಸ್. ನೀವು ಟ್ರೈ ಮಾಡಿ.
ನುಗ್ಗೆಕಾಯಿ ಫ್ರಿಜ್‌ನಲ್ಲಿ ಹಾಳಾಗದಂತೆ ಇಡಬೇಕಾ?
ನುಗ್ಗೆಕಾಯಿಯಿಂದ ತಯಾರಿಸುವ ಪಲ್ಯ, ಸಾಂಬಾರ್ ಸೇರಿದಂತೆ ಹಲವು ಖಾದ್ಯಗಳು ರುಚಿಯ ಜೊತೆಗೆ ಪೌಷ್ಟಿಕಾಂಶಕ್ಕೂ ಜನಪ್ರಿಯವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಆಹಾರ ಪದ್ಧತಿಯಲ್ಲಿ ನುಗ್ಗೆ ಸೊಪ್ಪಿನ ಪರೋಠಾ ಬಳಸುತ್ತಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹಲವರು ನುಗ್ಗೆಕಾಯಿಯನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಲು ಬಯಸುತ್ತಿದ್ದಾರೆ. ಆದರೆ ತಾಜಾ ನುಗ್ಗೆಕಾಯಿಯನ್ನು ಮನೆಗೆ ತಂದು, ಹಾಗೆಯೇ ಫ್ರಿಜ್ ನಲ್ಲಿಡುತ್ತೇವೆ. ಇದರಿಂದ ನುಗ್ಗೆ ಒಣಗಿ ಹೋಗುತ್ತದೆ. ಎರಡು ದಿನದ ಬಳಿಕ ನುಗ್ಗೆ ಹಾಳಾಗಿದೆ ಎಂದು ಎಸೆಯುತ್ತೇವೆ. ಸಮಸ್ಯೆ ನುಗ್ಗೆಯದಲ್ಲ, ಅದನ್ನು ಸಂಗ್ರಹಿಸುವ ವಿಧಾನದಲ್ಲಿರಬಹುದು. ನುಗ್ಗೆಕಾಯಿಯನ್ನು ಸ್ವಲ್ಪ ಜಾಗೃತೆಯಿಂದ ಫ್ರಿಜ್‌ನಲ್ಲಿ ಇಟ್ಟರೆ ಅದರ ತಾಜಾತನ ಹೆಚ್ಚು ಸಮಯ ಕಾಪಾಡಿಕೊಳ್ಳಲು ಸಹಾಯವಾಗಬಹುದು.
ನೇರವಾಗಿ ಫ್ರಿಜ್‌ನಲ್ಲಿ ಇಡುವುದು ಸರಿಯಾದ ವಿಧಾನವೇ?
ಮಾರುಕಟ್ಟೆಯಿಂದ ತಾಜಾ ನುಗ್ಗೆಕಾಯಿಗಳನ್ನು ತಂದ ತಕ್ಷಣ ಅವುಗಳನ್ನು ನೇರವಾಗಿ ಫ್ರಿಜ್‌ನಲ್ಲಿ ಇಡುವುದು ಸರಿಯಾದ ವಿಧಾನ ಅಲ್ಲ. ಫ್ರಿಜ್‌ನ ತಂಪಾದ ಗಾಳಿಯಿಂದ ಕಾಯಿಯಲ್ಲಿರುವ ತೇವಾಂಶ ಕಡಿಮೆಯಾಗಬಹುದು. ಹಾಗಾಗಿ ಕೆಲವು ದಿನಗಳ ನಂತರ ಕಾಯಿ ಸುಕ್ಕುಗಟ್ಟಿದಂತೆ, ಒಣಗಿದಂತೆ ಮತ್ತು ಗಟ್ಟಿಯಾಗಿ ಕಾಣಿಸಬಹುದು. ನೀವು ಒಂದು ಅಥವಾ ಎರಡು ದಿನಗಳಲ್ಲೇ ನುಗ್ಗೆಕಾಯಿಯನ್ನು ಬಳಸಲಿದ್ದರೆ, ಸ್ವಚ್ಛ ಮತ್ತು ಒಣ ಸ್ಥಳದಲ್ಲಿ ಇಡುವುದು ಉತ್ತಮ ಆಯ್ಕೆ. ಆದರೆ ಹಲವು ದಿನಗಳವರೆಗೆ ಸಂಗ್ರಹಿಸಬೇಕಾದರೆ ಸರಿಯಾದ ಸ್ಟೋರೇಜ್ ವಿಧಾನ ಅನುಸರಿಸುವುದು ಮುಖ್ಯ.
ನುಗ್ಗೆಕಾಯಿಯನ್ನು ಸಂಗ್ರಹಿಸುವ ಸರಿಯಾದ ವಿಧಾನ
- ನುಗ್ಗೆಕಾಯಿಯನ್ನು ಹೆಚ್ಚು ದಿನ ಇಡಲು ಮೊದಲಿಗೆ ಪ್ರತಿಯೊಂದು ಕಾಯಿಯನ್ನು ಪರಿಶೀಲಿಸಿ.
- ತುಂಬಾ ಮೃದುವಾಗಿರುವ, ಕಪ್ಪಾಗಿರುವ ಅಥವಾ ಈಗಾಗಲೇ ಹಾಳಾಗಿರುವ ಕಾಯಿಗಳನ್ನು ಬೇರ್ಪಡಿಸಿ. ನಂತರ ಸ್ವಚ್ಛವಾದ ಚಾಕುವಿನಿಂದ ಎರಡೂ ತುದಿಗಳನ್ನು ಕತ್ತರಿಸಿ
- ಬಳಕೆಗೆ ಅನುಕೂಲವಾಗುವಂತೆ ಕಾಯಿಯನ್ನು ಸುಮಾರು 2ರಿಂದ 3 ಇಂಚಿನ ತುಂಡುಗಳಾಗಿ ಕತ್ತರಿಸಿ. ಹೀಗೆ ಮಾಡಿದರೆ ನಂತರ ಪಲ್ಯ ಅಥವಾ ಸಾಂಬಾರ್ ಮಾಡುವಾಗ ನೇರವಾಗಿ ಬಳಸಬಹುದು
- ಆದರೆ ನೀವು ಯಾವುದೇ ನಿರ್ದಿಷ್ಟ ರೆಸಿಪಿಗಾಗಿ ಸಂಪೂರ್ಣ ಕಾಯಿಯನ್ನು ಬಳಸಲು ಬಯಸಿದರೆ ಕತ್ತರಿಸುವ ಅಗತ್ಯವಿಲ್ಲ.
- ಸಂಗ್ರಹಿಸುವ ಮೊದಲು ನುಗ್ಗೆಕಾಯಿ ತೊಳೆದು ಒದ್ದೆಯಾಗಿಯೇ ಫ್ರಿಜ್‌ನಲ್ಲಿ ಇಡಬೇಡಿ. ಹೆಚ್ಚಿನ ತೇವಾಂಶದಿಂದ ತರಕಾರಿಗಳು ಬೇಗ ಹಾಳಾಗುವ ಸಾಧ್ಯತೆ ಇದೆ.
- ತೊಳೆದರೆ, ಕಾಯಿಗಳನ್ನು ಚೆನ್ನಾಗಿ ಒಣಗಿಸಿದ ನಂತರವೇ ಕಂಟೇನರ್‌ನಲ್ಲಿ ಇಡಿ.
- ಈಗ ಸ್ವಚ್ಛವಾಗಿರುವ ಮತ್ತು ಸಂಪೂರ್ಣವಾಗಿ ಒಣಗಿರುವ ಗಾಜಿನ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಏರ್‌ಟೈಟ್ ಕಂಟೇನರ್ ಬಳಸಿ.
- ಕಂಟೇನರ್‌ನೊಳಗೆ ನೀರಿನ ಹನಿಗಳು ಅಥವಾ ಹೆಚ್ಚುವರಿ ತೇವಾಂಶ ಇರದಂತೆ ನೋಡಿಕೊಳ್ಳಿ.
- ಕಂಟೇನರ್‌ನ ಕೆಳಭಾಗದಲ್ಲಿ ಸ್ವಚ್ಛವಾದ ಟಿಶ್ಯೂ ಪೇಪರ್ ಅಥವಾ ಕಿಚನ್ ಟವೆಲ್ ಹಾಸಿ. ಅದರ ಮೇಲೆ ಕತ್ತರಿಸಿದ ನುಗ್ಗೆಕಾಯಿಯ ತುಂಡುಗಳನ್ನು ಇಡಿ.
- ನಂತರ ಮೇಲಿನಿಂದ ಮತ್ತೊಂದು ಟಿಶ್ಯೂ ಪೇಪರ್ ಇಡಿ. ಇದು ಕಂಟೇನರ್‌ನಲ್ಲಿ ಉಂಟಾಗುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ಬಳಿಕ ಕಂಟೇನರ್‌ನ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಫ್ರಿಜ್‌ನಲ್ಲಿ ಇಡಿ. ಫ್ರಿಜ್‌ನಲ್ಲಿ ತಾಪಮಾನ ಪದೇಪದೇ ಹೆಚ್ಚು ಬದಲಾಗದ ಜಾಗದಲ್ಲಿ ಇಡುವುದು ಉತ್ತಮ.
ಟಿಶ್ಯೂ ಪೇಪರ್ ಏಕೆ ಮುಖ್ಯ?
ತರಕಾರಿಗಳನ್ನು ಫ್ರಿಜ್‌ನಲ್ಲಿ ಇಟ್ಟಾಗ ಕೆಲವೊಮ್ಮೆ ಕಂಟೇನರ್‌ನೊಳಗೆ ಸ್ವಲ್ಪ ತೇವಾಂಶ ಸಂಗ್ರಹವಾಗುತ್ತದೆ. ಈ ತೇವಾಂಶದಿಂದ ತರಕಾರಿ ಕೊಳೆಯುವ ಸಾಧ್ಯತೆ ಹೆಚ್ಚಾಗಬಹುದು. ಟಿಶ್ಯೂ ಪೇಪರ್ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ದಿನಗಳ ನಂತರ ಟಿಶ್ಯೂ ಪೇಪರ್ ಒದ್ದೆಯಾಗಿರುವುದು ಕಂಡುಬಂದರೆ ಅದನ್ನು ಬದಲಾಯಿಸುವುದು ಉತ್ತಮ. ಅದೇ ರೀತಿ, ಯಾವುದೇ ನುಗ್ಗೆಕಾಯಿಯಲ್ಲಿ ಕೊಳೆತ ಅಥವಾ ಹಾಳಾಗುವ ಲಕ್ಷಣಗಳು ಕಂಡುಬಂದರೆ ಅದನ್ನು ತಕ್ಷಣವೇ ಉಳಿದ ಕಾಯಿಗಳಿಂದ ಬೇರ್ಪಡಿಸಿ.

