ಪಾವಗಡ ತಾಲ್ಲೂಕಿನ ಕನಿಕಲಬಂಡೆ ಬೆಟ್ಟಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. 120ಕ್ಕೂ ಹೆಚ್ಚು ಸಿಬ್ಬಂದಿಯ ವಿಶೇಷ ತಂಡಗಳು ಡ್ರೋಣ್ ಕ್ಯಾಮೆರಾ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶೋಧ ನಡೆಸುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ತುಮಕೂರು: ಪಾವಗಡ, ತಾಲ್ಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪಾವಗಡದಲ್ಲಿ ನಕ್ಸಲ್ ಶಂಕೆ: ಬೆಟ್ಟಗಳಲ್ಲಿ ಪೊಲೀಸರ ಮಹಾ ಶೋಧ
ತುಮಕೂರು ಹೆಚ್ಚುವರಿ ಎಸ್‌ಪಿ ಗೋಪಾಲ್ ಮತ್ತು ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ನೇತೃತ್ವದಲ್ಲಿ 120ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ 5 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. 10 ಪೊಲೀಸ್ ಜೀಪ್, ವ್ಯಾನ್ ಹಾಗೂ ಒಂದು ಖಾಸಗಿ ಬಸ್‌ನಲ್ಲಿ ತೆರಳಿದ ಪೊಲೀಸರು, ಎಕೆ-47 ಸೇರಿದಂತೆ ಇತರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಕಾರ್ಯಾಚರಣೆ ನಡೆಸಿದ್ದಾರೆ.
ತಾಲೂಕಿನ ಪಳವಳ್ಳಿ ಕಡಪಲಕೆರೆ, ವೀರಮ್ಮನಹಳ್ಳಿ, ಗಂಗಾಸಾಗರ, ಅಚ್ಚಮ್ಮನಹಳ್ಳಿ, ಈರಮ್ಮನಹಳ್ಳಿ ಹಾಗೂ ಕನಿಕಲಬಂಡೆ ಸುತ್ತಮುತ್ತಲಿನ ಸುಮಾರು 12 ಕಿ.ಮೀ ವ್ಯಾಪ್ತಿಯ ಬೆಟ್ಟಗುಡ್ಡಗಳಲ್ಲಿ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಸತತ 5 ಗಂಟೆಗಳ ಕಾಲ ಕೂಂಬಿಂಗ್ ನಡೆಸಿ ಶೋಧ ನಡೆಸಲಾಯಿತು.
ಬಳಿಕ ವಿಶೇಷ ಪಡೆಯ 120 ಮಂದಿ ತಂಡದೊಂದಿಗೆ ಡ್ರೋಣ್ ಕ್ಯಾಮೆರಾ ಮೂಲಕವೂ ಸರ್ಚ್ ಕಾರ್ಯಾಚರಣೆ ಮುಂದುವರಿಸಲಾಗಿದೆ. 5-6 ಭಾರಿ ವಾಹನಗಳಲ್ಲಿ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೂ ಶಂಕಿತ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ನಿರಂತರ ಕಾರ್ಯಾಚರಣೆಗಾಗಿ ವಿಶೇಷ ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


