16 ಪ್ರಕರಣಗಳಲ್ಲಿ ಬೇಕಾಗಿದ್ದ ಭದ್ರಾವತಿಯ ರೌಡಿಶೀಟರ್ ದಿಲೀಪ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದ. ಮಹಾಭಾರತದ ದುರ್ಯೋಧನನಂತೆ ಕೆರೆಯಲ್ಲಿ ಅಡಗಿಕೊಳ್ಳಲು ಯತ್ನಿಸಿದ ಆತನನ್ನು, ಪೊಲೀಸರು ಸಾಹಸಿಕವಾಗಿ ಕೆರೆಗೆ ಜಿಗಿದು ಬಂಧಿಸಿದ್ದಾರೆ.

ಬೆಂಗಳೂರು (ಸೆ.5): ಮಹಾಭಾರತ ಯುದ್ಧದ ಕೊನೆಯ ಹಾಗೂ 18ನೇ ದಿನದಂದು ತನ್ನ ಸೈನ್ಯವೆಲ್ಲಾ ನಾಶವಾದ ಬಳಿಕ ಭೀಮನಿಂದ ತಪ್ಪಿಸಿಕೊಳ್ಳಲು ದುರ್ಯೋಧನ ದ್ವೈಪಾಯನ ಅಥವಾ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳುವ ಪೌರಾಣಿಕ ವಿಚಾರ ನೆನಪಿರಬೇಕಲ್ಲ. ಈಗ ರಾಜ್ಯದಲ್ಲಿ ಪೊಲೀಸರಿಂದ ತಪ್ಪಿಕೊಳ್ಳುವ ಸಲುವಾಗಿ 16 ಕೇಸ್‌ಗಳಲ್ಲಿ ಬೇಕಾಗಿದ್ದ ಕ್ರಿಮಿನಲ್‌ವೊಬ್ಬ ಕೆರೆಯಲ್ಲಿ ಅಡಗಿ ಕುಳಿತುಕೊಳ್ಳಲು ಯತ್ನಿಸಿದ್ದ. ಈಗ ಆತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ದೀರ್ಘಕಾಲದಿಂದ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ ಒಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿಕೊಳ್ಳಲು ಯತ್ನಿಸಿದ್ದ. ಕೊನೆಗೆ ಆತನನ್ನು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಹಾಕಲು ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಭದ್ರಾವತಿಯ ನಿವಾಸಿ ದಿಲೀಪ್ ಅಲಿಯಾಸ್ ಕರಿಯಾ (19) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕೋರ್ಟ್ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುತ್ತಿದ್ದರೂ, ಈತ ದೀರ್ಘಕಾಲದಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ಪರಾರಿಯಾಗುತ್ತಿದ್ದ.

ಆರೋಪಿ ದಿಲೀಪ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ (NBW) ಹೊರಡಿಸಿತ್ತು. ಪ್ರತಿ ಬಾರಿಯೂ ಕೋರ್ಟ್‌ಗೆ ಗೈರುಹಾಜರಾಗುತ್ತಿದ್ದ ಈತ ಪೊಲೀಸರಿಗೆ ಸಿಗದಂತೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಪ್ರಸ್ತುತ ಈತನ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು 16 ಅಪರಾಧ ಪ್ರಕರಣಗಳು ದಾಖಲಾಗಿವೆ.

ಕೆರೆಗೆ ಜಿಗಿದ ಪೊಲೀಸರು

ಆರೋಪಿ ದಿಲೀಪ್ ಇರುವ ಜಾಗದ ಕುರಿತು ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಭದ್ರಾವತಿ ನ್ಯೂ ಟೌನ್ ಪೊಲೀಸರು ಆತನನ್ನು ಬಂಧಿಸಲು ಬಲೆ ಬೀಸಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ತನ್ನನ್ನು ಸುತ್ತವರಿಯುತ್ತಿದ್ದಂತೆ ಆತ ಬಂಧನದಿಂದ ತಪ್ಪಿಸಿಕೊಳ್ಳಲು ಸಮೀಪದ ಕೆರೆಯೊಳಗೆ ಜಿಗಿದು ಅಡಗಿಕೊಳ್ಳಲು ಯತ್ನಿಸಿದ. ಆದರೆ, ಆರೋಪಿಯ ತಂತ್ರಕ್ಕೆ ಬಗ್ಗದ ಪಿಎಸ್‌ಐ ರಮೇಶ್ ಹಾಗೂ ಪೊಲೀಸ್ ಸಿಬ್ಬಂದಿ ಪ್ರಸನ್ನ ಅವರು ತಕ್ಷಣವೇ ಕೆರೆಯ ನೀರಿಗೆ ಜಿಗಿದು ಸಾಹಸಿಕವಾಗಿ ಆತನನ್ನು ಹಿಡಿದು ಬಂದಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.