ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಅಧಿಕಾರಿಗಳಿಗೆ ಗೌರವಯುತವಾಗಿ ಏನಾದರೂ ನೀಡುವುದು ಧರ್ಮ ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಲಂಚವನ್ನು ಸಮರ್ಥಿಸುತ್ತಿದ್ದೀರಾ ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಾಗ, ಸಚಿವರು ತಮ್ಮ ಮಾತನ್ನು ಬದಲಿಸಿ ಸ್ಪಷ್ಟನೆ ನೀಡಿದರು.

ಹಾಸನ (ಸೆ.20): ಕೆಲಸ ಮಾಡಿಕೊಟ್ಟ ಸರ್ಕಾರಿ ಅಧಿಕಾರಿಗಳಿಗೆ ಗೌರವಯುತವಾಗಿ ಏನಾದರೂ ನೀಡುವುದು ಧರ್ಮ ಎಂಬ ಅರ್ಥದಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿರುವ ಹೇಳಿಕೆಯೊಂದು ಪ್ರಸ್ತುತ ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ 'ಪ್ರಜಾಸೇವಾ ಆಂದೋಲನ' ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುತ್ತಿದ್ದರು. ಈ ವೇಳೆ ಮಾತನಾಡಿದ ಅವರು, "ಸರ್ಕಾರಿ ಅಧಿಕಾರಿಗಳು ಜನರ ಕೆಲಸ ಮಾಡಿಕೊಟ್ಟರೆ ಅವರಿಗೆ ಗೌರವಯುತವಾಗಿ ಧರ್ಮವಾಗಿ ಕೊಡೋದು ಧರ್ಮ. ಆದರೆ, ಅಧಿಕಾರಿಗಳು ಸಾರ್ವಜನಿಕರ ಬಳಿ ಬಲವಂತವಾಗಿ ಕಿತ್ತುಕೊಳ್ಳಬಾರದು" ಎಂದು ಹೇಳಿಕೆ ನೀಡಿದರು.

ಸಾರ್ವಜನಿಕರ ತೀವ್ರ ಆಕ್ಷೇಪ:

ಸಚಿವರ ಈ ಹೇಳಿಕೆಯನ್ನು ಸಭೆಯಲ್ಲಿದ್ದ ಸಾರ್ವಜನಿಕರೊಬ್ಬರು ತಕ್ಷಣವೇ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. "ಕೆಲಸ ಮಾಡಿಕೊಟ್ಟವರಿಗೆ ಕೊಡೋದು ಧರ್ಮ ಅಂದರೆ, ಲಂಚ ಕೊಡೋದನ್ನು ಸಮರ್ಥಿಸುತ್ತಿದ್ದೀರಾ?" ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಸಚಿವರ ಅಧಿಕೃತ ವೇದಿಕೆಯಲ್ಲಿ ಲಂಚದ ಪರವಾದ ಮಾತುಗಳು ಬಂದಿದ್ದಕ್ಕೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ನಂತರ ಮಾತು ಬದಲಿಸಿದ ಸಚಿವರು:

ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಚಿವ ಶಿವಲಿಂಗೇಗೌಡ ಅವರು ತಕ್ಷಣವೇ ತಮ್ಮ ಮಾತನ್ನು ಬದಲಿಸಿ ಸಮಜಾಯಿಷಿ ನೀಡಿದರು. 'ನಾನು ಲಂಚದ ಬಗ್ಗೆ ಮಾತನಾಡಿಲ್ಲ. ಸಾರ್ವಜನಿಕರ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ಕೊಡಿ ಎಂದು ಹೇಳಿದ್ದೇನೆ ಅಷ್ಟೇ' ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದರು. ಸರ್ಕಾರದ ಜವಾಬ್ದಾರಿಯುತ ಸಚಿವರೊಬ್ಬರು ಲಂಚದ ಸ್ವರೂಪದಂತಹ ಮಾತುಗಳನ್ನಾಡಿರುವುದು ಈಗ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.