ಮುಖ್ಯಮಂತ್ರಿ ಸಿದ್ದರಾಮಯ್ಯ 'ಸಾಲರಾಮಯ್ಯ' ಅಲ್ಲ, 'ಅಭಿವೃದ್ಧಿ ರಾಮಯ್ಯ' ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರೇ ರಾಜ್ಯದ ಸಾಲವನ್ನು 5 ಲಕ್ಷ ಕೋಟಿಗೆ ಹೆಚ್ಚಿಸಿದ್ದು, ಸಿದ್ದರಾಮಯ್ಯ ವಿತ್ತೀಯ ಹೊಣೆಗಾರಿಕೆ ಮೀರಿಲ್ಲ ಎಂದು ತಿರುಗೇಟು.

ವಿಧಾನಸಭೆ (ಮಾ.12): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು ಹೇಳುವಂತೆ ‘ಸಾಲರಾಮಯ್ಯ’ ಅಲ್ಲ ‘ಅಭಿವೃದ್ಧಿ ರಾಮಯ್ಯ’. ರಾಜ್ಯದ ಜನರಿಗೆ ಯಾವುದೇ ಯೋಜನೆ ನೀಡದೆ ರಾಜ್ಯದ ಸಾಲ 5 ಲಕ್ಷ ಕೋಟಿ ರು.ಸಾಲ ದಾಟಿಸಿದ್ದು ಬಸವರಾಜ ಬೊಮ್ಮಾಯಿ ಅವರೇ ಹೊರತು ಸಿದ್ದರಾಮಯ್ಯ ಅಲ್ಲ’ ಎಂದು ಕಾಂಗ್ರೆಸ್‌ ಸದಸ್ಯ ಕೆ.ಎಂ.ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಜೆಟ್‌ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾಮಗಾರಿ, ಬೃಹತ್‌ ಯೋಜನೆಗಳ ಹೊರತಾಗಿಯೂ ಎಂದೂ ವಿತ್ತೀಯ ಹೊಣೆಗಾರಿಕೆ ಕಾಯಿದೆ ಮೀರಿ ಸಾಲ ಮಾಡಿಲ್ಲ.

ಆದರೆ, ಇದ್ಯಾವುದನ್ನೂ ಮಾಡದೆಯೇ ಬಿಜೆಪಿ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಸುಮಾರು 3 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ಹೀಗಾಗಿ ರಾಜ್ಯದ ಸಾಲ ಹೆಚ್ಚಾಗಲು ಬಸವರಾಜ ಬೊಮ್ಮಾಯಿ ಕಾರಣವೇ ಹೊರತು ಸಿದ್ದರಾಮಯ್ಯ ಅಲ್ಲ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2013-18ರ ಅವಧಿ ಮುಗಿಯುವ ವೇಳೆಗೆ ರಾಜ್ಯದ ಒಟ್ಟು ಸಾಲ ಕೇವಲ 2.18 ಲಕ್ಷ ಕೋಟಿ ರು. ಮಾತ್ರ ಇತ್ತು. ಆದರೆ, 2023-24ರ ಬೊಮ್ಮಾಯಿ ಅವಧಿ ಮುಗಿಯುವ ವೇಳೆಗೆ ಬರೋಬ್ಬರಿ 5.22 ಲಕ್ಷ ಕೋಟಿ ರು. ಆಯಿತು. ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಮೀರಿ ಅವರು ಸಾಲ ಮಾಡಿದ್ದಾರೆ ಎಂದು ಕಿಡಿಕಾರಿದರು.

- ಸಿದ್ದು ವಿತ್ತೀಯ ಹೊಣೆಗಾರಿಕೆ ಮೀರಿ ಸಾಲ ಮಾಡಿಲ್ಲ ಆ ರೀತಿ ಮಾಡಿದ್ದು ಬೊಮ್ಮಾಯಿ ಅಷ್ಟೆ: ಶಾಸಕ ಕಿಡಿ

ಚೀನಾ ಕೂಡ ಸಾಲ ನೀಡಿದೆ:

ಸಿದ್ದರಾಮಯ್ಯಅವರು ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ. ಟ್ರಂಪ್‌, ಚೀನಾ ಕೂಡ ಸಾಲ ಮಾಡಿವೆ. ಕೇಂದ್ರದಲ್ಲಿ ಮೋದಿ ಅವರು ಬರೊಬ್ಬರಿ 168 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ಕೇಂದ್ರದ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿ ಶೇ.4.3ರಷ್ಟಿದೆ. ರಾಜ್ಯದ್ದು ಕೇವಲ ಶೇ.2.49 ರಷ್ಟಿದೆ. ಇನ್ನು ಕೇಂದ್ರಕ್ಕಿಂತ ರಾಜ್ಯದ ಅಭಿವೃದ್ಧಿ ವೇಗವಾಗಿದೆ. ಜಿಡಿಪಿ ಬೆಳವಣಿಗೆ ದರ ಕೇಂದ್ರದ್ದು ಶೇ.7.4 ರಷ್ಟು ಇದ್ದರೆ ರಾಜ್ಯದ ಜಿಡಿಪಿ ಬೆಳವಣಿಗೆ ದರ ಶೇ.8.1 ರಷ್ಟಿದೆ ಎಂದು ಶಿವಲಿಂಗೇಗೌಡ ಹೇಳಿದರು.

ಕೇಂದ್ರದಿಂದ ಅನ್ಯಾಯ:ಕೇಂದ್ರ ಹಣಕಾಸು ಆಯೋಗ ವರದಿಯಲ್ಲಿನ ಅನ್ಯಾಯದಿಂದ ರಾಜ್ಯಕ್ಕೆ ಕನಿಷ್ಠ 20,000 ಕೋಟಿ ರು. ಅನ್ಯಾಯ ಆಗಿದೆ. ಸೆಸ್‌, ಸರ್‌ಚಾರ್ಜ್‌ ಹೆಸರಿನಲ್ಲಿ ಲಕ್ಷಾಂತರ ಕೋಟಿ ರು. ಸಂಗ್ರಹಿಸುತ್ತಿದ್ದರೂ ರಾಜ್ಯಕ್ಕೆ ಬಿಡಿಗಾಸು ನೀಡುತ್ತಿಲ್ಲ. ಅವರಿಗೆ ಬೇಕಾದ ರಾಜ್ಯಗಳಿಗೆ ಭರಪೂರ ಅನುದಾನ ನೀಡಿ ನಮ್ಮ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಟೀಕಿಸಿದರು.