- Home
- Karnataka Districts
- ಕಾಂಗ್ರೆಸ್ ಮುಖಂಡ ಸೋಮಯ್ಯ ಗಣಾಚಾರಿಯನ್ನು ಎಂಎಲ್‌ಸಿ ಮಾಡಿ: ಸಿಎಂ 33 ಸ್ವಾಮೀಜಿಗಳಿಂದ ಮನವಿ!
ಕಾಂಗ್ರೆಸ್ ಮುಖಂಡ ಸೋಮಯ್ಯ ಗಣಾಚಾರಿಯನ್ನು ಎಂಎಲ್‌ಸಿ ಮಾಡಿ: ಸಿಎಂ 33 ಸ್ವಾಮೀಜಿಗಳಿಂದ ಮನವಿ!
ಚಿಕ್ಕಮಗಳೂರಿನ ಬಾಳೆಹೊನ್ನೂರು ಮಠದಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಸಭೆಯ ವೇಳೆ 33 ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಮಹತ್ವದ ಮನವಿ ಸಲ್ಲಿಸಿದ್ದಾರೆ. ವಿಜಯಪುರದ ಪ್ರಭಾವಿ ಕಾಂಗ್ರೆಸ್ ಮುಖಂಡ ಸೋಮಯ್ಯ ಗಣಾಚಾರಿ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು: ವಿಜಯಪುರ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಸೋಮಯ್ಯ ಗಣಾಚಾರಿ ಅವರನ್ನು ವಿಧಾನ ಪರಿಷತ್ (MLC) ಸದಸ್ಯರನ್ನಾಗಿ ನೇಮಿಸುವಂತೆ ಒತ್ತಾಯಿಸಿ, ಬೃಹತ್ ಸಂಖ್ಯೆಯ ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮಠದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ರೈತರ ಅಹವಾಲು ಸ್ವೀಕರಿಸಲು ಆಗಮಿಸಿದ್ದ ವೇಳೆ ಈ ಮಹತ್ವದ ಬೆಳವಣಿಗೆ ನಡೆದಿದೆ.
33 ಸ್ವಾಮೀಜಿಗಳ ಉಪಸ್ಥಿತಿ:
ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಜರುಗಿದ ಈ ಸಭೆಯಲ್ಲಿ, ಸಂಸ್ಥಾನ್ ಹಿರೇಮಠ್ ಬಿಜಾಪುರದ ಡಾ. ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಒಟ್ಟು 33 ಜನ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಎಲ್ಲಾ ಸ್ವಾಮೀಜಿಗಳು ಒಮ್ಮತದಿಂದ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಮೂಲತಃ ವಿಜಯಪುರ ಜಿಲ್ಲೆಯವರಾದ ಸೋಮಯ್ಯಾ ಗಣಾಚಾರಿ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವ ಮೂಲಕ ರಾಜಕೀಯವಾಗಿ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ಮುಖಂಡರಿಗೆ ಹಿರಿಯ ಸ್ವಾಮೀಜಿಗಳ ನೇತೃತ್ವದಲ್ಲೇ ರಾಜಕೀಯ ಸ್ಥಾನಮಾನಕ್ಕಾಗಿ ಬೇಡಿಕೆ ಬಂದಿರುವುದು ಪ್ರಸ್ತುತ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

