ಕಸ್ತೂರಿರಂಗನ್ ವರದಿ ಅನುಷ್ಠಾನವು ಮನುಷ್ಯರನ್ನು ಒಕ್ಕಲೆಬ್ಬಿಸುವ ಹುನ್ನಾರ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ ವಿರೋಧಿಸಿ ಸೆ.7ರಂದು ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ:ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಕಾಡು ಪ್ರಾಣಿಗಳು ಬದುಕಬೇಕು, ಮನುಷ್ಯರು ಸಾಯಬೇಕು ಎನ್ನುವ ಯೋಜನೆ ಸರಿಯಲ್ಲ. ಮನುಷ್ಯನನ್ನು ಸಾಯಿಸಿ ಹೆಬ್ಬಾವು ಬದುಕಿಸುವ ಯೋಚನೆ ಬೇಡ. ಮೊದಲು ಮನುಷ್ಯನಿಗೆ ಬದುಕಲು ಅವಕಾಶ ನೀಡಿ, ಬಳಿಕ ಪರಿಸರದ ಬಗ್ಗೆ ಯೋಚಿಸಬೇಕು ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್‌ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಇದ್ದ ಜನ ಸಂಖ್ಯೆಯೂ ಈಗಿನ ಜನ ಸಂಖ್ಯೆಗೂ ಅಗಾದ ಪ್ರಮಾಣದಲ್ಲಿ ವ್ಯತ್ಯಾಸ ಆಗಿದೆ. ಜನಸಂಖ್ಯೆ ಅನುಗುಣವಾಗಿ ಕೆಲವರು ಅರಣ್ಯ ಪ್ರದೇಶದಲ್ಲಿ ವಾಸಕ್ಕೆ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ. ಆಗ ಇದು ಅರಣ್ಯ ಜಾಗ ಇಲ್ಲಿಂದ ಹೊರಹೋಗಿ ಎಂದರೆ ಈ ಜಾಗದಲ್ಲಿ ಇಷ್ಟು ವರ್ಷ ವಾಸವಿದ್ದರು ಈಗ ಎಲ್ಲಿಗೆ ಹೋಗಬೇಕು. ಮನುಷ್ಯರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುವ ಯೋಚನೆ ಇದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಇಲ್ಲಿ ಕಸ್ತೂರಿ ರಂಗನ್ ಅವರು ಪರಿಸರ ತಜ್ಞರಲ್ಲ, ಅವರು ಶಿಕ್ಷಣ ತಜ್ಞರಾಗಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸರದ ಜೊತೆಗೆ ಮನುಷ್ಯನ ಅಸ್ತಿತ್ವವೂ ಉಳಿಯಬೇಕು. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದರು.

ಕಸ್ತೂರಿರಂಗನ್ ವರದಿಯನ್ನು ರದ್ದುಪಡಿಸಬೇಕು, ಈ ಬಗ್ಗೆ ಚರ್ಚಿಸಲು ಅಧಿವೇಶನವನ್ನು ಕರೆಯಲಾಗಿದ್ದು, ಮೂರು ದಿನದ ಅಧಿವೇಶನದಲ್ಲಿ ಒಂದು ದಿನ ಈ ಯೋಜನೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಸೆ.7ರಂದು ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಗೆ ಪಾದಯಾತ್ರೆ: 

ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಹಾಗೂ ಈಗ ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೆ.7ರಂದು ಕಸ್ತೂರಿರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಗಡೆ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ತೀರ್ಥಹಳ್ಳಿಯ ಪಪಂ ಬಳಿ ಸಾರ್ವಜನಿಕ ಸಭೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರದ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಪಾದಯಾತ್ರೆಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಬೇಕಿರುವುದರಿಂದ, ಇತರ ಪಕ್ಷಗಳಲ್ಲಿದ್ದು ವರದಿಯನ್ನು ವಿರೋಧಿಸುವವರೂ ಭಾಗವಹಿಸಬಹುದು ಎಂಬ ಉದ್ದೇಶದಿಂದ ಕರಪತ್ರದಲ್ಲಿ ಈ ಕುರಿತು ಸ್ಪಷ್ಟವಾಗಿ ನಮೂದಿಸಲಾಗಿದೆ. ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ನಡೆಸುವ ಬದಲು ಕೇಂದ್ರಕ್ಕೆ ತೆರಳಿ ವರದಿ ಹಿಂಪಡೆಯುವಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಪಾದಯಾತ್ರೆಯ ಹಿಂದೆ ಮತ್ತೊಂದು ಕಾರಣವೂ ಇದೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು 25 ವರ್ಷಗಳಿಂದ ಶಾಸಕರಾಗಿದ್ದು, 40 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಬಿಜೆಪಿಯವರನ್ನು ಹೊರತುಪಡಿಸಿ ಬೇರೆ ಯಾರೂ ಮನುಷ್ಯರಲ್ಲ ಎಂಬ ಭಾವನೆ ಅವರಲ್ಲಿದೆ. ಇದನ್ನು ಅವರಿಗೆ ಮನವರಿಕೆ ಮಾಡುವ ಉದ್ದೇಶದಿಂದಲೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಬಿ.ಎ.ರಮೇಶ್ ಹೆಗ್ಡೆ, ಎಸ್.ಟಿ.ಹಾಲಪ್ಪ, ಯು.ಶಿವಾನಂದ್, ಅಮರ್‌ನಾಥ್ ಶೆಟ್ಟಿ, ಗಣೇಶ್ ಗಾಜನೂರು ಇದ್ದರು.

-----ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳುತ್ತಿದ್ದಾರೆ. ಅವರು ನನಗಿಂತ 15 ವರ್ಷ ಮುಂಚಿತವಾಗಿಯೇ ಶಾಸಕರಾಗಿ ಅಧಿಕಾರ ಅನುಭವಿಸಿದವರು. ನಾನು ಬರುವ ಮೊದಲು 15 ವರ್ಷದಲ್ಲಿ ಮತ್ತು ನನ್ನ 10 ವರ್ಷದ ಅವಧಿಯಲ್ಲಿ ಮಾಡಿದ ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ದ. ಆರಗ ಜ್ಞಾನೇಂದ್ರ ಎಲ್ಲಿಗಾದರೂ ಕರೆಯಲಿ ನಾನು ಬಂದು ಚರ್ಚೆ ಮಾಡುತ್ತೇನೆ.

-ಕಿಮ್ಮನೆ ರತ್ಮಾಕರ್, ಮಾಜಿ ಸಚಿವ.