ಹೆಚ್ಚುತ್ತಿರುವ ಆಹಾರ ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಅವಧಿ ಮೀರಿದ ಪದಾರ್ಥಗಳು, ಕೃತಕ ಬಣ್ಣಗಳ ಬಳಕೆ ಮತ್ತು ಕಳಪೆ ನೈರ್ಮಲ್ಯ ಕಂಡುಬಂದಿದ್ದರಿಂದ ಖ್ಯಾತ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.

ಗಡಿನಾಡು ಚಾಮರಾಜನಗರದಲ್ಲಿ ದಿನದಿಂದ ದಿನಕ್ಕೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಉದ್ಯಮ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಲಾಭದಾಸೆಗೆ ಬಿದ್ದ ಕೆಲ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ನೈರ್ಮಲ್ಯವನ್ನು ಗಾಳಿಗೆ ತೂರಿ, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಕುರಿತು ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಅವರು ಫುಲ್ ಅಲರ್ಟ್ ಆಗಿದ್ದು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಸಚಿವರ ಸೂಚನೆಯ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ರಂಗಕ್ಕಿಳಿದಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮರೋಪಾದಿ ದಾಳಿಗಳು ಆರಂಭವಾಗಿವೆ.

ಅವಧಿ ಮೀರಿದ ವಸ್ತುಗಳು ಹಾಗೂ ನೈರ್ಮಲ್ಯದ ಅಭಾವ!

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಬಾಹ್ಯ ಸೌಂದರ್ಯಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಆಹಾರದ ಗುಣಮಟ್ಟ ಮತ್ತು ಅಡುಗೆಮನೆಯ ಸ್ವಚ್ಛತೆಗೆ ನೀಡುತ್ತಿಲ್ಲ ಎಂಬುದು ಬಯಲಾಗಿದೆ. ಚಾಮರಾಜನಗರದ ಪ್ರಮುಖ ಭಾಗಗಳಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅವರ ಸಮ್ಮುಖದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದಾಗ ಕಂಗೆಡಿಸುವ ಸತ್ಯಗಳು ಬೆಳಕಿಗೆ ಬಂದಿವೆ. ಆಹಾರ ತಯಾರಿಕೆಯಲ್ಲಿ ನಿಷೇಧಿತ ಹಾಗೂ ಹಾನಿಕಾರಕ ಕೃತಕ ಬಣ್ಣಗಳ ಬಳಕೆ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಇಟ್ಟುಕೊಂಡು ಗ್ರಾಹಕರಿಗೆ ನೀಡುತ್ತಿದ್ದುದು ಪತ್ತೆಯಾಗಿದೆ.

ಈ ಹೋಟೆಲ್‌ಗಳಿಗೆ ತಾತ್ಕಾಲಿಕ ಸೀಲ್‌ಡೌನ್!

ಅಧಿಕಾರಿಗಳ ದಿಢೀರ್ ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಎದ್ದು ಕಾಣುತ್ತಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಎರಡು ಪ್ರಮುಖ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಸ್ಥಳದಲ್ಲೇ ಆದೇಶ ಹೊರಡಿಸಿದ್ದಾರೆ.

ಉಡುಪಿ ಗ್ರಾಂಡ್ ರೆಸ್ಟೋರೆಂಟ್; ಈ ಹೋಟೆಲ್‌ನಲ್ಲಿ ಅಡುಗೆಮನೆಯ ನೈರ್ಮಲ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಜೊತೆಗೆ ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಅತಿಯಾದ ಬಳಕೆ ಹಾಗೂ ಗಡುವು ಮುಗಿದ (Expired) ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿರುವುದು ಕಂಡುಬಂದಿದೆ.

ಹೋಟೆಲ್ ಮಕಾವ್; ಈ ಪ್ರಸಿದ್ಧ ಹೋಟೆಲ್‌ನಲ್ಲಿ ಗ್ರಾಹಕರಿಗೆ ತಾಜಾ ಇಲ್ಲದ, ಕೊಳೆತ ಮಾಂಸ ಮತ್ತು ಗುಣಮಟ್ಟವಿಲ್ಲದ ಕೆಟ್ಟ ಮಶ್ರೂಮ್ (ಣಬೆ) ಬಳಸಿ ಅಡುಗೆ ಮಾಡುತ್ತಿದ್ದುದು ತಪಾಸಣೆ ವೇಳೆ ಧೃಡಪಟ್ಟಿದೆ. ಸಾರ್ವಜನಿಕರ ಆರೋಗ್ಯಕ್ಕೆ ನೇರ ಅಪಾಯವನ್ನುಂಟು ಮಾಡುತ್ತಿದ್ದ ಈ ಎರಡೂ ಹೋಟೆಲ್‌ಗಳ ಪರವಾನಗಿಯನ್ನು ಪ್ರಶ್ನಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಬಂದ್ ಮಾಡಲು ಆದೇಶಿಸಲಾಗಿದೆ.

ಬೇಕರಿ, ಕೈಗಾರಿಕಾ ಪ್ರದೇಶಗಳ ಮೇಲೆಯೂ ಕಣ್ಣು!

ಜಿಲ್ಲಾಧಿಕಾರಿ ಶ್ರೀರೂಪಾ ಅವರ ಕಾರ್ಯಾಚರಣೆ ಕೇವಲ ಹೋಟೆಲ್‌ಗಳಿಗೆ ಮಾತ್ರ ಸೀಮಿತವಾಗಲಿಲ್ಲ. ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ (Kanes) ಹಾಗೂ ಕಲರ್ ಟೋನ್ (Color Tone) ಉದ್ಯಮ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಕ್ಯಾಂಟೀನ್ ಮತ್ತು ಆಹಾರದ ಗುಣಮಟ್ಟವನ್ನು ಪರಿಶೀಲಿಸಲಾಯಿತು. ಇದರ ಜೊತೆಗೆ ರಸ್ತೆಬದಿಯ ಬೇಕರಿಗಳು ಹಾಗೂ ಸಣ್ಣಪುಟ್ಟ ಉಪಹಾರ ಗೃಹಗಳಿಗೂ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಕಡೆಯೂ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿದರು.

ಜಿಲ್ಲಾಡಳಿತದ ಖಡಕ್ ಎಚ್ಚರಿಕೆ!

ಆಹಾರದಲ್ಲಿ ಕಲಬೆರಕೆ ಮಾಡುವುದು, ಕೃತಕ ಬಣ್ಣಗಳನ್ನು ಬಳಸುವುದು ಹಾಗೂ ಹಳೆಯ ಮಾಂಸವನ್ನು ಬಳಸುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಯಾವುದೇ ಹೋಟೆಲ್, ರೆಸ್ಟೋರೆಂಟ್ ಅಥವಾ ಬೇಕರಿ ಮಾಲೀಕರನ್ನು ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿಯೂ ಈ ತಪಾಸಣೆ ಮುಂದುವರಿಯಲಿದ್ದು, ನಿಯಮ ಮೀರಿದರೆ ಶಾಶ್ವತವಾಗಿ ಲೈಸೆನ್ಸ್ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಜಿಲ್ಲಾಧಿಕಾರಿಗಳ ಈ ದಿಢೀರ್ ಆ್ಯಕ್ಷನ್‌ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.