ಗಣೇಶ ವಿಸರ್ಜನಾ ಮೆರವಣಿಗೆಯು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಮೆರವಣಿಗೆಯಲ್ಲಿ ಸಾಗುತ್ತಿದ್ದ ಭಕ್ತರಿಗೆ ಮುಸ್ಲಿಂ ಯುವಕರು ಕುಡಿಯುವ ನೀರು ಮತ್ತು ಜ್ಯೂಸ್ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ. ಈ ಮಾನವೀಯ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಚಾಮರಾಜನಗರ: ಪ್ರತಿ ವರ್ಷ ಗಣೇಶ ಹಬ್ಬ ಬಂತು ಅಂದರೆ ಸಾಕು.. ಒಂದು ರೀತಿಯ ಕಲುಷಿತ ವಾತಾವರಣ ನಿರ್ಮಾಣ ಆಗಿಬಿಡುತ್ತೆ. ಎಲ್ಲಿ, ಏನಾಗುತ್ತೋ ಅನ್ನೋ ಭಯದ ವಾತಾವರಣ ಸೃಷ್ಟಿಯಾಗಿಬಿಡುತ್ತೆ. ಅದರಲ್ಲೂ ಕೆಲವು ಸೂಕ್ಷ್ಮ ನಗರಗಳಲ್ಲಿ ದೊಡ್ಡ ಆತಂಕವೇ ನಿರ್ಮಾವಾಗಿರುತ್ತದೆ. ಹೀಗಿರುವಾಗ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮವು ಇಡೀ ನಾಡಿಗೆ ಸಾಮರಸ್ಯದ ಸುಂದರ ಸಂದೇಶ ಸಾರಿದೆ.

ಏನು ನಡೆಯಿತು?

ಇವತ್ತು ಇಲ್ಲಿ ನಡೆದ ಗಣೇಶ ವಿಸರ್ಜನಾ ಮಹೋತ್ಸವವು ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಆಯಿತು. ಕೌದಳ್ಳಿ ಗ್ರಾಮದ ಹಿಂದೂ ಸಮುದಾಯದವರು ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಇವತ್ತು ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಿತು.

ಈ ಮೆರವಣಿಗೆಯು ಊರಿನ ಪ್ರಮುಖ ಬೀದಿಗಳಲ್ಲಿ ಅತ್ಯಂತ ಸಂಭ್ರಮದಿಂದ ಅದ್ದೂರಿಯಾಗಿ ಸಾಗಿತು. ಸುಡು ಬಿಸಿಲಿನ ನಡುವೆಯೂ ನೂರಾರು ಯುವಕರು ಹಾಗೂ ಭಕ್ತರು ಉತ್ಸಾಹದಿಂದ ಕುಣಿದು ಕುಪ್ಪಳಿಸುತ್ತ ಸಾಗಿದರು. ಈ ವೇಳೆ ಬಿಸಿಲಿನ ತಾಪಕ್ಕೆ ದಣಿದಿದ್ದ ನೂರಾರು ಭಕ್ತರ ದಾಹ ತಣಿಸಲು ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಯುವಕರು ಮುಂದೆ ಬಂದಿದ್ದರು. ಅವರೆಲ್ಲ ಸ್ವಯಂಪ್ರೇರಿತರಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ನೂರಾರು ಜನರಿಗೆ ಕುಡಿಯುವ ನೀರಿನ ಬಾಟಲಿ ಹಾಗೂ ತಂಪು ಪಾನೀಯ (ಜ್ಯೂಸ್) ವಿತರಿಸಿ ಸೋದರತೆ ಮೆರೆದು ಭಾವೈಕ್ಯತೆ ಮೆರೆದಿದ್ದಾರೆ.

ನಾವೆಲ್ಲರೂ ಒಂದೇ ಎಂಬ ಸಂದೇಶ..

ಅಂದ್ಹಾಗೆ ಕೌದಳ್ಳಿ ಗ್ರಾಮವು ಸೌಹಾರ್ದತೆ ವಿಚಾರದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಲ್ಲಿ ಯಾವುದೇ ಧರ್ಮದ ಬೇಲಿ ಇಲ್ಲ. ಪ್ರತಿಯೊಬ್ಬರೂ ಪರಸ್ಪರರ ಹಬ್ಬಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಹಿಂದೂಗಳ ಹಬ್ಬದಲ್ಲಿ ಮುಸ್ಲಿಮರು, ಈದ್ ಹಬ್ಬದಲ್ಲಿ ಹಿಂದೂಗಳು ಹಾಗೂ ಕ್ರಿಸ್‌ಮಸ್ ಆಚರಣೆಯಲ್ಲಿ ಎರಡೂ ಸಮುದಾಯದವರು ಭಾಗವಹಿಸಿ ಸುಖ, ದುಃಖಗಳನ್ನು ಹಂಚಿಕೊಳ್ಳುತ್ತಾರೆ.

ಇನ್ನು, ಮುಸ್ಲಿಂ ಬಾಂಧವರ ಈ ಮಾನವೀಯ ಸೇವೆಗೆ ಗ್ರಾಮಸ್ಥರು ಹಾಗೂ ಹಿಂದೂ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದ್ವೇಷಕ್ಕಿಂತ ಪ್ರೀತಿ ಮತ್ತು ಸೌಹಾರ್ದತೆಯೇ ದೊಡ್ಡದು. ಕೌದಳ್ಳಿಯ ಈ ಐಕ್ಯತೆಯೇ ನಮ್ಮ ನಾಡಿನ ನಿಜವಾದ ಸಂಸ್ಕೃತಿ ಎಂದು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರೀ ವೈರಲ್ ಆಗ್ತಿದೆ..

ವಿಡಿಯೋದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಿಂದೂಗಳು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ. ನೂರಾರು ಯುವಕರು ಕುಣಿದು, ಕುಪ್ಪಳಿಸುತ್ತ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಇದನ್ನು ಮುಸ್ಲಿಂ ಬಾಂಧವರು ನೋಡುತ್ತ ನಿಂತಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಬೃಹತ್ ಮೆರವಣಿಗೆ ನೋಡಿ ಸಂತಸಪಟ್ಟಿದ್ದಾರೆ.

ಜೊತೆಗೆ ವಾಟರ್ ಬಾಟಲಿಗಳನ್ನ ಮೆರವಣಿಗೆ ಸಾಗುವ ದಾರಿ ಬಳಿ ಹಿಡಿದು ನಿಂತಿದ್ದಾರೆ. ಯಾರೆಲ್ಲ ಮೆರವಣಿಗೆಯಲ್ಲಿ ಸುಸ್ತಾಗಿ ನಿಂತಿದ್ದಾರೆ, ಯಾರೆಲ್ಲ ಕುಡಿಯಲು ನೀರು ಕೇಳುತ್ತಿದ್ದಾರೆ. ಅಂತವರಿಗೆಲ್ಲ ನೀರನ ಬಾಟಲಿ ನೀಡಿ ಮಾನವೀಯತೆ ಮರೆದಿದ್ದಾರೆ. ಮಾನವೀಯತೆಯ ಜೊತೆಗೆ ಇವತ್ತಿನ ದಿನಕ್ಕೆ ಭಾವೈಕ್ಯದ ಪಾಠವನ್ನ ಕಲಿಸಿದ್ದಾರೆ.