ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನಕಲಿ ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ ಇನ್ಸ್‌ಪೆಕ್ಟರ್‌ ಚನ್ನಕೇಶವ ಟಿಂಗರೀಕರ್‌ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ.

 ಬೆಂಗಳೂರು (ಜೂ.19) ಧಾರವಾಡದ ಬಿಜೆಪಿ‌ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಅಪರಾಧ ಸಂಬಂಧ ಏಳು ವರ್ಷ ಜೈಲು ಶಿಕ್ಷೆ ಗೆ ಒಳಗಾಗಿರುವ ಪೊಲೀಸ್ ಇನ್ಸ್‌ಪೆಕ್ಟರ್‌ ಚನ್ನಕೇಶವ ಟಿಂಗರೀಕರ್‌ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ತೀರ್ಪು ಕಾಯ್ದಿರಿಸಿದ ಕೋರ್ಟ್

ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಅಮಾನತ್ತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಕೋರಿ ಚನ್ನಕೇಶವ ಟಿಂಗರೀಕರ್ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತು.

ಅರ್ಜಿದಾರರ ಪರ ವಕೀಲರ ವಾದ ಏನು?

ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ.ಹೆಗ್ಡೆ ವಾದ ಮಂಡಿಸಿ, ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಟೆಂಗರೀಕರ್‌ ವಿರುದ್ಧವಿದೆ. ಅದಕ್ಕೆ ಐಪಿಸಿ ಸೆಕ್ಷನ್‌ 201 ಮತ್ತು 218 ಅಡಿ ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನು ಸಹಿತ ಪ್ರಕರಣಗಳಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಸಿಬಿಐ ಪರ ವಾದವೇನು?

ಸಿಬಿಐ ಪರ ಹಾಜರಿದ್ದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ಅರ್ಜಿದಾರ ಅಧಿಕಾರಿಯು ಆರೋಪಿಗಳು ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ. ಬೇರೆ ಆಯುಧಗಳನ್ನು‌ ವಶಪಡಿಸಿಕೊಂಡಿದ್ದರು.‌ ನಿಜವಾದ ಆರೋಪಿಗಳ ಬದಲಿಗೆ ತಪ್ಪು ಮಾಡದ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲು ಪ್ರಯತ್ನಿಸಿದ್ದು, ನಿಜವಾದ ಕೆಲ ಆರೋಪಿಗಳ ಹೆಸರು ಹೇಳದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ. ನೈಜ ಸಾಕ್ಷ್ಯಗಳನ್ನು ಮರೆಮಾಚಿ ಬದಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ತಪ್ಪೆಸಗಿದ್ದಾರೆ. ಘಟನೆ ಸಂಬಂಧ ಪ್ರಮುಖ ಆರೋಪಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.