ಹುಬ್ಬಳ್ಳಿ[ಜು.01]  ಹುಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರು ಆರೋಪಿಗಳಿಗೆ ನೀಡಿದ ಜಾಮೀನು ರದ್ದುಗೊಳಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು. ಆರೋಪಿಗಳು ಈವರೆಗೂ ಯಾವುದೇ ನಿಯಮ ಉಲ್ಲಂಘಿಸಿಲ್ಲ. ಅಲ್ಲದೇ, ಈಗಾಗಲೇ ಪ್ರಕರಣದ ಬಹುತೇಕ ಸಾಕ್ಷಿ ವಿಚಾರಣೆ ಮುಗಿಯುವ ಹಂತದಲ್ಲಿದ್ದು ಈಗ ಜಾಮೀನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಆರೋಪಿಗಳ ಪರ ವಕೀಲರು ವಾದ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರಿದ್ದ ಏಕದಸ್ಯ ಪೀಠವು ರಾಜ್ಯ ಸರ್ಕಾರದ ಮೇಲ್ಮನವಿಯನ್ನು ತಿರಸ್ಕರಿಸಿತು.

ಜಿಲ್ಲಾ ಪಂಚಾಯ್ತಿಸದಸ್ಯ ಬಿಜೆಪಿ ಮುಖಂಡ  ಯೋಗೀಶ್ ಗೌಡ ಅವರನ್ನು 2017 ರಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಹೆಸರು ಸಹ ಕೇಳಿ ಬಂದಿತ್ತು.