ಉದ್ಯಮಿಯೊಬ್ಬರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಳಗ್ಗೆ 10:15ಕ್ಕೆ ಕಚೇರಿಗಳು ಖಾಲಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಈ ಸಾರಿಗೆ ಕಿರಿಕಿರಿಯು ಉದ್ಯೋಗಿಗಳ ಶಕ್ತಿ ಮತ್ತು ಉತ್ಪಾದಕತೆಯನ್ನು ಕುಗ್ಗಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು (ಆ.19): ಸಾಮಾನ್ಯವಾಗಿ ಬೆಳಗ್ಗೆ 10:15 ಆಗುತ್ತಿದ್ದಂತೆ ಐಟಿ ಸಿಟಿ ಬೆಂಗಳೂರಿನ ಕಚೇರಿಗಳಲ್ಲಿ ಉದ್ಯೋಗಿಗಳ ಗದ್ದಲ, ಕಾಯಕದ ಧಾವಂತ ಮುಗಿಲುಮುಟ್ಟಿರುತ್ತದೆ. ಆದರೆ, ನಗರದ ಸಾರಿಗೆ ವ್ಯವಸ್ಥೆ ಹಾಗೂ ಟ್ರಾಫಿಕ್‌ ಸವಾಲುಗಳಿಂದಾಗಿ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಲು ಪಡುತ್ತಿರುವ ಭಾರಿ ಹೆಣಗಾಟವನ್ನು ಉದ್ಯಮಿಯೊಬ್ಬರು ಬಹಿರಂಗಪಡಿಸಿದ್ದಾರೆ. 'ಅಪ್ಲೈಡ್ ಎಐ ಸ್ಟುಡಿಯೋ' (Applied AI Studio) ಮತ್ತು 'ಅಪ್ಲೈಡ್ ಎಐ ಕ್ಲಬ್'ನ ಸಂಸ್ಥಾಪಕ ಬಾಲ ಪನ್ನೀರ್‌ಸೆಲ್ವಂ (Bala Panneerselvam) ಅವರು ತಮ್ಮ ಲಿಂಕ್ಡ್‌ಇನ್ (LinkedIn) ಅಕೌಂಟ್‌ನಲ್ಲಿ ಕಚೇರಿಯ ಖಾಲಿ ಡೆಸ್ಕ್‌ಗಳ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ನಗರದ ಕುಖ್ಯಾತ ಟ್ರಾಫಿಕ್‌ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.

"ಸಮಸ್ಯೆ ಜನರದ್ದಲ್ಲ, ಬದಲಾಗಿ ಕಚೇರಿಗೆ ಬಂದು ತಲುಪಲು ಅವರು ಪಡುತ್ತಿರುವ ಶ್ರಮದ್ದು" ಎಂದು ಬರೆದುಕೊಂಡಿರುವ ಅವರು, ಬೆಂಗಳೂರಿನಲ್ಲಿ ಉತ್ತಮವಾಗಿ ಕೆಲಸ ಮಾಡುವ ಉದ್ಯೋಗಿಗಳ ಸಾಮರ್ಥ್ಯ ಸಂಪೂರ್ಣವಾಗಿ 'ನಾಶವಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್ ಕಿರಿಕಿರಿ ಮತ್ತು ಶಕ್ತಿ ಕುಂದಿಸುವ ಪ್ರಯಾಣ

ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಂಡಿರುವ ಅವರು, ಎಚ್‌ಎಸ್‌ಆರ್ ಲೇಔಟ್ (HSR Layout) ಸುತ್ತಮುತ್ತಲಿನ 4 ಕಿಲೋಮೀಟರ್ ದೂರವನ್ನು ಕ್ರಮಿಸಲು ದ್ವಿಚಕ್ರ ವಾಹನದಲ್ಲಿ 20 ನಿಮಿಷ ಹಾಗೂ ಕಾರಿನಲ್ಲಿ 30 ನಿಮಿಷ ಬೇಕಾಗುತ್ತದೆ. ಪೀಕ್ ಅವರ್‌ಗಳಲ್ಲಿ (ರಶ್ ಸಮಯ) ಇದಕ್ಕೆ ಇನ್ನು 10 ನಿಮಿಷ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತದೆ. ರಸ್ತೆಯಲ್ಲಿ ಸಂಚಾರ ನಿಯಮ ಮೀರುವ ದ್ವಿಚಕ್ರ ವಾಹನಗಳನ್ನು ತಪ್ಪಿಸಿಕೊಂಡು ಬಂದು ಕಚೇರಿ ತಲುಪುವಷ್ಟರಲ್ಲಿ ಉದ್ಯೋಗಿಯ ಶಕ್ತಿ ಹಾಗೂ ಉತ್ಸಾಹ ಸಂಪೂರ್ಣವಾಗಿ ಕುಂದಿರುತ್ತದೆ ಎಂದಿದ್ದಾರೆ.

ಸಂಜೆ 6 ಗಂಟೆಯ ನಂತರ ಕಚೇರಿಯಿಂದ ಹೊರಟರೆ ಮನೆ ತಲುಪಲು ದುಪ್ಪಟ್ಟು ಸಮಯ ಬೇಕಾಗುತ್ತದೆ. ಸಂಜೆ 5 ಗಂಟೆಗೆ ಹೊರಟರೂ ಸಹ ಮನೆ ತಲುಪುವಾಗ ತೀವ್ರ ಸುಸ್ತಾಗುವುದರಿಂದ ವೈಯಕ್ತಿಕ ಜೀವನಕ್ಕಾಗಿ ಸಮಯ ವಿನಿಯೋಗಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಉದ್ಯೋಗಿಗಳು ಮರುದಿನ ಕಚೇರಿಗೆ ತಡವಾಗಿ ಬರುವುದು ಅನಿವಾರ್ಯವಾಗುತ್ತದೆ ಎಂದು ವಿವರಿಸಿದ್ದಾರೆ.

ತಮ್ಮ ಮತ್ತೊಂದು ಅನುಭವ ಹಂಚಿಕೊಂಡಿರುವ ಬಾಲ, "ಮಳೆ ಅಥವಾ ಯಾವುದೇ ಇತರ ಅಡೆತಡೆಗಳಿಲ್ಲದ ಸಾಧಾರಣ ದಿನದಂದು, ಮಧ್ಯಾಹ್ನ 4 ಗಂಟೆಗೆ ವೈಟ್‌ಫೀಲ್ಡ್‌ನಿಂದ ಎಚ್‌ಎಸ್‌ಆರ್ ಲೇಔಟ್‌ಗೆ ಇರುವ ಕೇವಲ 17 ಕಿಲೋಮೀಟರ್ ದೂರ ಕ್ರಮಿಸಲು ನನಗೆ ಬರೋಬ್ಬರಿ 2 ಗಂಟೆ ಬೇಕಾಯಿತು" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಉತ್ಪಾದಕತೆಯ ಮೇಲೆ ಭಾರಿ ಹೊಡೆತ

ಕಠಿಣ ಶ್ರಮದ ಸಂಸ್ಕೃತಿಗೆ (Hustle Culture) ಹೆಸರಾಗಿರುವ ಬೆಂಗಳೂರಿನಲ್ಲಿ, ಸಾರಿಗೆ ಕಿರಿಕಿರಿಯು ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ತಗ್ಗಿಸುತ್ತಿದೆ. "ಸುತ್ತಲೂ ನಿರಂತರ ಗದ್ದಲ ಮತ್ತು ಒತ್ತಡವಿರುವಾಗ, ಒಬ್ಬ ವ್ಯಕ್ತಿ ಪ್ರಶಾಂತವಾಗಿ ಚಿಂತಿಸಿ ಸೃಜನಶೀಲವಾಗಿ ಕೆಲಸ ಮಾಡಲು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಬೆಂಬಲ

ಈ ಲಿಂಕ್ಡ್‌ಇನ್ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಹಲವು ನೆಟ್ಟಿಗರು ಹಾಗೂ ಉದ್ಯೋಗಿಗಳು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಗರದಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲದೆ ಉತ್ಪಾದಕತೆ ಕ್ಷೀಣಿಸುತ್ತಿದೆ ಎಂದು ಧ್ವನಿ ಎತ್ತಿದ್ದಾರೆ. "ಜನರ ಶ್ರಮಶೀಲತೆ ಮತ್ತು ಭಾರತದ ಮೇಲಿರುವ ಜಾಗತಿಕ ನಂಬಿಕೆಯಿಂದಾಗಿ ನಾವು ಶೇ. 6-7ರ ದರದಲ್ಲಿ ಆರ್ಥಿಕ ಬೆಳವಣಿಗೆ ಕಾಣುತ್ತಿದ್ದೇವೆ. ಆದರೆ ಕಳಪೆ ಮೂಲಸೌಕರ್ಯಗಳಿಂದಾಗಿ ಭಾರಿ ಉತ್ಪಾದಕತೆ ನಷ್ಟವಾಗುತ್ತಿದೆ. ಈ ದುರ್ಬಲ ತಡಿಪಾಯವು ಶೀಘ್ರದಲ್ಲೇ ಸಹನೆ ಮೀರುವ ಹಂತ ತಲುಪಲಿದೆ" ಎಂದು ಯೂಸರ್‌ ಒಬ್ಬರು ಕಾಮೆಂಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.