ಅರಣ್ಯದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ಮತ್ತು ಹುಲಿಗಳ ಪತ್ತೆಗಾಗಿ ಅರಣ್ಯ ಇಲಾಖೆಯು ಬೆಲ್ಜಿಯಂ ತಳಿಯ 10 ಸ್ನಿಫರ್ ನಾಯಿಗಳಿಗೆ ವಿಶೇಷ ತರಬೇತಿ ನೀಡಿದೆ. ಈ ಶ್ವಾನಗಳನ್ನು ರಾಜ್ಯದ 5 ಹುಲಿ ಸಂರಕ್ಷಿತಾರಣ್ಯಗಳಿಗೆ ನಿಯೋಜಿಸಲಾಗಿದೆ. ಇವು ಅತಿ ವೇಗವಾಗಿ ಓಡುವ ಮತ್ತು ವಾಸನೆ ಗ್ರಹಿಸುವ ಅದ್ಭುತ ಸಾಮರ್ಥ್ಯ ಹೊಂದಿವೆ.

ಚಾಮರಾಜನಗರ ಸೆ.20: ಕಾಡುಗಳಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಮತ್ತು ತನಿಖೆ ನಡೆಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಬೆಲ್ಜಿಯಂ ದೇಶದ ತಳಿಯಾದ ‘ಸ್ನಿಫರ್‌ ನಾಯಿ’ಗಳಿಗೆ ತರಬೇತಿ ನೀಡಿದೆ. 10 ನಾಯಿಗಳನ್ನು ಕಾಡಿನ ಸೂಕ್ಷ್ಮತೆಗಳನ್ವಯ ತಯಾರಿ ಮಾಡಿದ್ದು, ಇವುಗಳನ್ನು ತಲಾ 2ರಂತೆ 5 ಹುಲಿ ಸಂರಕ್ಷಿತಾರಣ್ಯಗಳಿಗೆ ಹಸ್ತಾಂತರಿಸಿದೆ.

ಅರಣ್ಯದಲ್ಲಿ ಕಳ್ಳರ ಪತ್ತೆಗೆ ಸ್ನಿಫರ್‌ ಡಾಗ್‌!

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೇಲುಕಾಮನಹಳ್ಳಿಯಲ್ಲಿ ಇವುಗಳ ತರಬೇತಿ ಪೂರ್ಣಗೊಂಡಿದ್ದು, ಈಗಾಗಲೇ ಸದ್ದಿಲ್ಲದೇ ಕಾರ್ಯಾರಂಭಿಸಿದೆ. ಇವುಗಳು ಹುಲಿ ಸೆರೆಹಿಡಿಯಲೂ ಸಹ ಸಹಕಾರಿಯಾಗಲಿರುವುದು ಇಲ್ಲಿ ಗಮನಾರ್ಹ.

ಈ ಹಿಂದೆ ಅರಣ್ಯ ಇಲಾಖೆಯು ಜರ್ಮನ್‌ ಶೆಫರ್ಡ್‌ ತಳಿಯ ‘ರಾಣಾ’ ಎಂಬ ನಾಯಿಯನ್ನು ಬಳಸುತ್ತಿತ್ತು. ಇದು ಮೃತಪಟ್ಟ ಬಳಿಕ ಮುದೋಳ ತಳಿಯ ನಾಯಿಗಳನ್ನು ಬಳಸಿತ್ತು. ಈಗ ಬೆಲ್ಜಿಯಂ ದೇಶದ ನಾಯಿಗಳಿಗೆ ತರಬೇತಿ ನೀಡಿದೆ.

ಸ್ನಿಫರ್‌ ಶ್ವಾನಗಳು ಅತಿ ವೇಗವಾಗಿ ಪತ್ತೆದಾರಿಕೆ ನಡೆಸಲಿದ್ದು, ವಾಸನೆ ಗ್ರಹಿಕೆಯಲ್ಲಿ ಬಹಳಷ್ಟು ದೂರ ವಾಸನೆಯನ್ನು ಈ ಶ್ವಾನಗಳು ಹುಡುಕಿಕೊಂಡು ಹೋಗಲಿದೆ.

ತೆಳುವಾದ ಉದ್ದನೆಯ ದೇಹದಿಂದ ಬೇರೆ ತಳಿಯ ಶ್ವಾನಗಳಾಗಿಂತ ಎರಡು ಪಟ್ಟು ಹೆಚ್ಚು ವೇಗವಾಗಿ ಓಡಲಿದೆ. ದಟ್ಟಾರಣ್ಯದಲ್ಲಿ ಹುಡುಕಾಟಕ್ಕೆ ಎತ್ತರಕ್ಕೆ ಜಿಗಿಯುವ ಸಾಮರ್ಥ್ಯವನ್ನು ಈ ನಾಯಿಗಳು ಹೊಂದಿವೆ. ಹಾಗಾಗಿ, ಅರಣ್ಯ‌ ಇಲಾಖೆ ಈ ಬೆಲ್ಜಿಯಂ ಶ್ವಾನಗಳಿಗೆ ವಿಶೇಷ ತರಬೇತಿ ಕೊಟ್ಟು ಹುಲಿ ರಕ್ಷಿತಾರಣ್ಯಗಳಿಗೆ ನೀಡಿದೆ.

ಹುಲಿ ಕಾರ್ಯಚರಣೆಗೂ ಸೈ

ಇವುಗಳು ಹುಲಿಗಳ ವಾಸನೆ ಗ್ರಹಿಸಿ ಅವುಗಳ ಇರುವಿಕೆಯನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದ್ದು, ಹುಲಿ ಸೆರೆ ಹಿಡಿಯಲು ಸಹಕಾರಿಯಾಗಲಿವೆ. ಹೀಗಾಗಿ 5 ಹುಲಿ ರಕ್ಷಿತಾರಣ್ಯಗಳಿಗೆ ಹಸ್ತಾಂತರಿಸಲಾಗಿದೆ.