ಬೆಳಗಾವಿಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ಅಮಗಾಂವ ಗ್ರಾಮದಲ್ಲಿ ಶಿಕ್ಷಕ ನಿಂಗಪ್ಪ ಬಾಳೇಕುಂದ್ರಿಗಿ ಅವರು ಕಳೆದ 29 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸಿ, ಗ್ರಾಮಸ್ಥರ ಪ್ರೀತಿ ಗಳಿಸಿ, ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವರ್ಗಾವಣೆ ಬಯಸದೆ ಅದೇ ಶಾಲೆಯಲ್ಲಿ ನಿವೃತ್ತರಾಗುವ ಇಂಗಿತ ಹೊಂದಿದ್ದಾರೆ.
ಶ್ರೀಶೈಲ ಮಠದ
ಬೆಳಗಾವಿ: ನಗರ ಪ್ರದೇಶದ ಶಾಲೆಗಳಿಗೆ ನೇಮಕವಾಗಲು ಬಯಸುವ ಶಿಕ್ಷಕರ ನಡುವೆ, ಕಳೆದ 29 ವರ್ಷಗಳಿಂದ ದಟ್ಟ ಕಾನನದ ಮಕ್ಕಳಿಗೆ ಅಕ್ಷರ ಸಂತರಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ನಿಂಗಪ್ಪ ಬಾಳೇಕುಂದ್ರಿಗಿ ಅವರು. ಶಿಕ್ಷಕ ವೃತ್ತಿಯನ್ನು ಹೀಗೂ ಮಾಡಬಹುದು ಎಂಬ ಹೆಗ್ಗುರತನ್ನು ಮಾಡಿಕೊಟ್ಟಿದ್ದಾರೆ ಇವರು.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯ ಪ್ರದೇಶದ ಅಮಗಾಂವ ಗ್ರಾಮದ ಸರ್ಕಾರಿ ಮರಾಠಿ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಅವರು, 1997ರ ಜನವರಿ 6ರಂದು ಇದೇ ಶಾಲೆಯಲ್ಲಿ ಸೇವೆ ಆರಂಭಿಸಿದ್ದರು.
ನೆಟ್‌ವರ್ಕ್, ಬಸ್ ಸಂಪರ್ಕವಿಲ್ಲದ ಹಾಗೂ ಅತಿಹೆಚ್ಚು ಮಳೆ ಬೀಳುವ ಅಮಗಾಂವದಲ್ಲೇ ತಮ್ಮ ಸೇವೆಯ 29 ವರ್ಷಗಳನ್ನು ಕಳೆದಿದ್ದಾರೆ. ಮುಂದಿನ ಐದು ವರ್ಷಗಳ ಬಳಿಕ ಇದೇ ಶಾಲೆಯಲ್ಲಿ ನಿವೃತ್ತರಾಗುವ ಉದ್ದೇಶ ಮತ್ತು ಇಂಗಿತ ಹೊಂದಿದ್ದಾರೆ.
1997ರಿಂದ ಅಮಗಾಂವದಲ್ಲೇ ಸೇವೆ
1997ರಲ್ಲಿ ಶಿಕ್ಷಕರಾಗಿ ನೇಮಕವಾದಾಗ ಅಮಗಾಂವ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಚಿಕಲೆಯಿಂದ ಸುಮಾರು 12 ಕಿಮೀ ನಡೆದುಕೊಂಡು ಸಂಜೆ ಗ್ರಾಮ ತಲುಪಿದ್ದೆ. ಆಗ ಶಾಲೆಯಲ್ಲಿ ಇಬ್ಬರು ಮರಾಠಿ ಶಿಕ್ಷಕರಿದ್ದರು. ನನಗೆ ಮರಾಠಿ ಬರುತ್ತಿರಲಿಲ್ಲ. ಕನ್ನಡದಲ್ಲೇ ಗ್ರಾಮಸ್ಥರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ಮಕ್ಕಳಿಗೆ ಚಾಕೋಲೇಟ್ ಕೊಟ್ಟು ಆತ್ಮೀಯನಾದೆ. ಅಂದಿನಿಂದ ಆರಂಭವಾದ ಸೇವೆ ಇಂದಿಗೂ ಮುಂದುವರಿದಿದೆ ಎಂದು ನಿಂಗಪ್ಪ ಮೇಷ್ಟ್ರು ನೆನಪಿಸಿಕೊಳ್ಳುತ್ತಾರೆ.
ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳುವುದರ ಜತೆಗೆ ಗ್ರಾಮಸ್ಥರ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಇವರು, ಸರ್ಕಾರ ಮತ್ತು ಗ್ರಾಮಸ್ಥರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಕ್ಕಾಗಿ ಅಧಿಕಾರಿಗಳ ಗಮನ ಸೆಳೆಯುವುದಲ್ಲದೆ, ಗ್ರಾಮದಲ್ಲಿನ ತಂಟೆ-ತಕರಾರುಗಳನ್ನೂ ಬಗೆಹರಿಸಿದ್ದಾರೆ.
ವಾರಕ್ಕೊಮ್ಮೆ ಮಾತ್ರ ಊರಿಗೆ ತೆರಳುವ ಶಿಕ್ಷಕ ನಿಂಗಪ್ಪ
ಕಾಡಿನ ನಡುವೆ ಸೇವೆ ಸಲ್ಲಿಸುವುದು ನಿಂಗಪ್ಪ ಅವರಿಗೆ ಹಲವು ಸವಾಲುಗಳನ್ನು ತಂದಿದೆ. ಹುಲಿ, ಚಿರತೆ, ಕರಡಿ, ಕಾಡುಹಂದಿ ಸೇರಿದಂತೆ ಹಲವು ವನ್ಯಪ್ರಾಣಿಗಳನ್ನು ಕಂಡಿರುವ ಅವರು, ಒಮ್ಮೆ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿಸಿಕೊಂಡು ಗ್ರಾಮಸ್ಥರ ನೆರವಿನಿಂದ ಬದುಕುಳಿದಿದ್ದಾರೆ.
ಬೈಕ್‌ನಲ್ಲಿ ಸಂಚರಿಸುವಾಗ ಹಲವು ಬಾರಿ ಬಿದ್ದು ಗಾಯಗೊಂಡರೂ ಊರು ಬಿಟ್ಟಿಲ್ಲ. ಗ್ರಾಮಸ್ಥರು ತಮ್ಮ ಪ್ರೀತಿ ಮತ್ತು ಗೌರವದಿಂದ ಅವರಿಗಾಗಿ ಉಚಿತವಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. 29 ವರ್ಷಗಳ ಸೇವೆಯಲ್ಲಿ ಒಮ್ಮೆಯೂ ವರ್ಗಾವಣೆಗೆ ಅರ್ಜಿ ಸಲ್ಲಿಸಿಲ್ಲ. ಪ್ರತಿ ಶನಿವಾರ ಹಾಗೂ ರಜಾ ದಿನಗಳಲ್ಲಿ ಮಾತ್ರ ಬೆಳಗಾವಿಯಲ್ಲಿರುವ ಕುಟುಂಬದ ಬಳಿಗೆ ತೆರಳುವ ಇವರು, ಉಳಿದ ದಿನಗಳನ್ನು ಅಮಗಾಂವದಲ್ಲೇ ಕಳೆಯುತ್ತಾರೆ.
ಬೆಳಗಾವಿಯ ವಡಗಾವಿಯಲ್ಲಿ ಪತ್ನಿ ರತ್ನಾ ಹಾಗೂ ಮಕ್ಕಳೊಂದಿಗೆ ಕುಟುಂಬ ಹೊಂದಿರುವ ನಿಂಗಪ್ಪ ಅವರಿಗೆ ಕುಟುಂಬದ ಸಂಪೂರ್ಣ ಬೆಂಬಲವಿದ್ದು, ಅಮಗಾಂವದ ಜನರ ಪ್ರೀತಿ, ಗೌರವವೇ ನನ್ನನ್ನು ಇಲ್ಲಿಯೇ ಉಳಿಸಿದೆ ಎನ್ನುತ್ತಾರೆ ಅವರು.


