ದರ್ಶನ್ ಅವರ ಖುದ್ದೂ ಹಾಜರಾತಿ ಅರ್ಜಿಯನ್ನು ಸತ್ರ ನ್ಯಾಯಾಲಯ ವಜಾ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವುದಾಗಿ ವಕೀಲ ನಾಸಿರ್ ಅಲಿ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾಂತ್ರಿಕ ದೋಷಗಳಿವೆ ಎಂದು ವಾದಿಸಿರುವ ಅವರು, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಿದ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಮಾಜಿ ಆಪ್ತ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ನಟ ದರ್ಶನ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೀಗ ತಮ್ಮ ಪರ ವಕೀಲರ ಮೂಲಕ ದರ್ಶನ್ ಹೈಕೋರ್ಟ್‌ನಲ್ಲಿ ಬೃಹತ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಪ್ರದೋಷ್ ಸಾಕ್ಷ್ಯ ನೀಡುವಾಗ ದರ್ಶನ್ ಹಾಜರಿರಬೇಕು

ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ಈಗ ಮಾಫಿ ಸಾಕ್ಷಿ (Approver) ಆಗಿ ಬದಲಾಗಿದ್ದಾನೆ. ಇದು ದರ್ಶನ್ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಪ್ರದೋಷ್ ಕೋರ್ಟ್‌ನಲ್ಲಿ ಸಾಕ್ಷ್ಯ ನೀಡುವಾಗ ತಾವು ಭೌತಿಕವಾಗಿ (ಖುದ್ದಾಗಿ) ಹಾಜರಿರಬೇಕು ಎಂಬುದು ದರ್ಶನ್ ಪಟ್ಟು. ಈ ಹಿಂದೆ ಸತ್ರ ನ್ಯಾಯಾಲಯಕ್ಕೆ (Sessions Court) ಸಲ್ಲಿಸಿದ್ದ ಅರ್ಜಿ ವಜಾ ಆಗಿದ್ದರಿಂದ ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ (VC) ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಆದರೆ ಇದು ತಮಗೆ ತೃಪ್ತಿ ತರುತ್ತಿಲ್ಲ ಎನ್ನುವುದು ದರ್ಶನ್ ವಾದ. ಜೈಲು ಮತ್ತು ಕೋರ್ಟ್‌ನಲ್ಲಿರುವ ವಿಡಿಯೋ ಕಾನ್ಫರೆನ್ಸ್ ಉಪಕರಣಗಳು ಹಳೆಯದಾಗಿದ್ದು, ಸಂವಹನ ಸರಿಯಾಗಿ ನಡೆಯುತ್ತಿಲ್ಲ. ಸಾಕ್ಷಿಗಳು ಹೇಳಿಕೆ ನೀಡುವಾಗ ಆರೋಪಿ ಅವರ ಎದುರೇ ಇರಬೇಕು ಎಂಬುದು ಕಾನೂನಿನ ಆಶಯ. ಸಾಕ್ಷ್ಯ ವಿಚಾರಣೆ ವೇಳೆ ತಕ್ಷಣವೇ ವಕೀಲರಿಗೆ ಅಗತ್ಯ ಸೂಚನೆ ನೀಡಲು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಾಧ್ಯವಾಗುತ್ತಿಲ್ಲ.

ವಕೀಲ ನಾಸಿರ್ ಅಲಿ ಹೇಳಿದ್ದೇನು?

ದರ್ಶನ್ ಪರ ವಕೀಲ ನಾಸಿರ್ ಅಲಿ ಈ ಬಗ್ಗೆ ಮಾತನಾಡುತ್ತಾ, ಸೇಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ಪ್ರೋಬೆಷನ್ ವರದಿಯನ್ನು (Probation Report) ಈ ಹಂತದಲ್ಲೇ ಸ್ವೀಕರಿಸುವುದು ಸರಿಯಲ್ಲ ಎಂಬ ನಮ್ಮ ವಾದವನ್ನು ಹೈಕೋರ್ಟ್ ಕೂಡ ಆಲಿಸಿದೆ. ಹೊಸದಾಗಿ ಆದೇಶ ಮಾಡುವಂತೆ ಟ್ರಯಲ್ ಕೋರ್ಟ್‌ಗೆ ಸೂಚನೆ ನೀಡಲಾಗಿದೆ. ಮಾಫಿ ಸಾಕ್ಷಿ ಪ್ರಕ್ರಿಯೆಯಲ್ಲೂ ಲೋಪವಿದೆ. ದರ್ಶನ್ ಅವರ ಖುದ್ದೂ ಹಾಜರಾತಿ ಬಗ್ಗೆ ನಾಳೆ ಅಥವಾ ನಾಡಿದ್ದು ವಿಚಾರಣೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ಪ್ರದೋಷ್ ನೀಡುವ ಸಾಕ್ಷ್ಯದ ಮೇಲೆ ದರ್ಶನ್ ಕಣ್ಣು

ಬಿಗಿ ಪೊಲೀಸ್ ಭದ್ರತೆಯಲ್ಲಿ ಈಗಾಗಲೇ ಎವಿಡೆನ್ಸ್ ಬುಕ್ ಹಿಡಿದು ಕೋರ್ಟ್‌ಗೆ ಹಾಜರಾಗಿರುವ ಪ್ರದೋಷ್, ಕೊಲೆ ಪ್ರಕರಣದ ಬಗ್ಗೆ ಏನು ಸತ್ಯ ಹೇಳಲಿದ್ದಾರೆ ಎಂಬುದು ದರ್ಶನ್ ತಂಡಕ್ಕೆ ಆತಂಕ ತಂದಿದೆ. ಆತ ಸಾಕ್ಷ್ಯ ನುಡಿಯುವಾಗ ತಾವು ಎದುರಿಗೇ ಇದ್ದರೆ ಆತನ ಮೇಲೆ ಮಾನಸಿಕ ಒತ್ತಡ ಹೇರಬಹುದು ಅಥವಾ ಸಾಕ್ಷ್ಯದ ಸೂಕ್ಷ್ಮಗಳನ್ನು ಹತ್ತಿರದಿಂದ ಗಮನಿಸಬಹುದು ಎಂಬುದು ದರ್ಶನ್ ಲೆಕ್ಕಾಚಾರ ಎನ್ನಲಾಗುತ್ತಿದೆ. ಹೈಕೋರ್ಟ್ ದರ್ಶನ್ ಅವರ ಈ ಭೌತಿಕ ಹಾಜರಾತಿ ಅರ್ಜಿಯನ್ನು ಪುರಸ್ಕರಿಸುತ್ತದೆಯೇ? ಪ್ರದೋಷ್ ಅವರ 'ಮಾಫಿ ಸಾಕ್ಷಿ' ಪ್ರಕ್ರಿಯೆಗೆ ತಡೆ ಬೀಳುತ್ತದೆಯೇ? ಕಾದು ನೋಡಬೇಕಿದೆ.