ರಾಜ್ಯದಲ್ಲಿ ಎಲ್.ಕೆ.ಜಿ ಯಿಂದ 12ನೇ ತರಗತಿಯವರೆಗೆ ಒಂದೇ ಪ್ರಾಂಗಣದಲ್ಲಿ ದ್ವಿಭಾಷಾ ಶಿಕ್ಷಣ ನೀಡುವ 1000 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಆರಂಭಿಸಲು ಸರ್ಕಾರ ಯೋಜಿಸಿದೆ. ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ಈ ಅತ್ಯಾಧುನಿಕ ಶಾಲೆಗಳನ್ನು ಹಂತಹಂತವಾಗಿ ನಿರ್ಮಿಸಲಾಗುವುದು ಮತ್ತು 15,000 ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗ: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದೇ ಪ್ರಾಂಗಣದಲ್ಲಿ ಎಲ್.ಕೆ.ಜಿ ಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡುವ, ಸ್ಮಾರ್ಟ್ ತರಗತಿ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 1000 ಸುಸಜ್ಜಿತ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ (Karnataka Public School) ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಹಂತಹಂತವಾಗಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದರು.
ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್
ಸಿ.ಎಸ್.ಆರ್. ನಿಧಿಯಡಿಯಲ್ಲಿ ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆಯ ಸೈನ್ಸ್‌ಮೈದಾನದಲ್ಲಿ ಎಜಾಕ್ಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಿಸಲು ಉದ್ದೇಶಿಸಿರುವ ನೂತನ ಶಾಲಾ ಕಟ್ಟಡದ ಶಂಕುಸ್ತಾಪನೆ ನೆರವೇರಿಸಿ ಮಾತನಾಡಿದರು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 500 ಕೆ.ಪಿ.ಎಸ್. ಶಾಲೆಗಳನ್ನು ನಿರ್ಮಿಸಿ ಲೋಕಾರ್ಪಣೆ ಗೊಳಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ 1000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಧಿಯಿಂದ ಉರ್ದು ಸೇರಿದಂತೆ ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ 750 ಕೋಟಿ ರಾಜ್ಯ ಸರ್ಕಾರದ ಪೂರಕ ನಿಧಿ ಮತ್ತು ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕಿನ ಆರ್ಥಿಕ ನೆರವು ಸೇರಿದಂತೆ 1,750 ಕೋಟಿ ವೆಚ್ಚದಲ್ಲಿ ಮುಂದಿನ 4 ವರ್ಷಗಳ ಅವಧಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿ ನೆರವು
ಸೇವೆಯೇ ಮುಖ್ಯ “ನಮ್ಮ ಶಾಲೆ, ನಮ್ಮ ಜವಾಬ್ದಾರಿ” ಎಂಬ ಯೋಜನೆಯಡಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪೂಜ್ಯ ತಂದೆಯವರಾಗಿದ್ದ ದಿ.ಎಸ್.ಬಂಗಾರಪ್ಪನವರ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿಗಳನ್ನು ಶಾಲಾಭಿವೃದ್ಧಿಗೆ ದೇಣಿಗೆಯಾಗಿ ನೀಡಿದರು.
ಒಂದು ವರ್ಷದ ಒಳಗೆ ಕಟ್ಟಡ ನಿರ್ಮಾಣ
ರಾಜ್ಯದಾದ್ಯಂತ ಲಕ್ಷಾಂತರ ಜನರು ತಮ್ಮ ಕೊಡುಗೈ ದಾನ ನೀಡಿ ಶಾಲಾಭಿವೃದ್ಧಿಗೆ ಸಹಕರಿಸಿದ್ದಾರೆ. ಪ್ರಸ್ತುತ ಸೈನ್ಸ್ ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎಜಾಕ್ಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ ನಿರ್ಮಾಣಕ್ಕೆ ಎಜಾಕ್ಸ್ ಸಂಸ್ಥೆಯ ಮುಖ್ಯಸ್ಥ ಕೆ.ವಿಜಯ್ ಮತ್ತು ಶ್ರೀಮತಿ ಕಲ್ಯಾಣಿ ವಿಜಯ್ ತಮ್ಮ ಟ್ರಸ್ಟ್ ವತಿಯಿಂದ 13.05 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಒಂದು ವರ್ಷದ ಅವಧಿಯೊಳಗಾಗಿ ನಿರ್ಮಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.
15 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ
ಕೆ.ಪಿ.ಎಸ್. ಶಾಲೆಗಳಲ್ಲಿ ಮಕ್ಕಳಿಗೆ ದ್ವಿಭಾಷಾ ಕಲಿಕೆ, ಎಲ್ಲಾ ಪಠ್ಯ ವಿಷಯಗಳ ಶಿಕ್ಷಕರು, ದೈಹಿಕ ಶಿಕ್ಷಣ, ಸಂಗೀತ, ಗಣಕಯಂತ್ರ ಸೇರಿದಂತೆ ಎಲ್ಲಾ ಶಿಕ್ಷಕರ ಸೇವೆ ದೊರೆಯಲಿದೆ. ಶಿಕ್ಷಣ ಇಲಾಖೆಯಲ್ಲಿ ಇನ್ನೂ 75,000 ಶಿಕ್ಷಕರ ಅಗತ್ಯವಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದರು ಸಚಿವ ಮಧು ಬಂಗಾರಪ್ಪ ವಿವರಿಸಿದ್ದಾರೆ.


