ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಪರಿಶಿಷ್ಟ ಪಂಗಡದ ನಾಯಕರ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಯು, ನಾಗೇಂದ್ರ ಅವರ ಕ್ಷೇತ್ರವಾದ ಬಳ್ಳಾರಿಯಲ್ಲಿ ಅಂತ್ಯಗೊಳ್ಳುವಂತೆ ಪ್ಲಾನ್!
ಬೆಂಗಳೂರು (ಆ.22): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ಬರುವ ಸೋಮವಾರ ಅಥವಾ ಮಂಗಳವಾರದ ಹೊತ್ತಿಗೆ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ.
ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಪಕ್ಷದ ನಾಯಕರು ಪಾದಯಾತ್ರೆ ನಡೆಸಲು ಉತ್ಸುಕರಾಗಿದ್ದು, ಅದರ ರೂಪುರೇಷೆಗಳ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ದಿನಾಂಕ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ವಿಧಾನಮಂಡಲ ಅಧಿವೇಶನದ ಒಳಗೆ ಮತ್ತು ಹೊರಗೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಸತತವಾಗಿ ಧರಣಿ, ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ, ತಕ್ಷಣಕ್ಕೆ ಪಾದಯಾತ್ರೆ ಘೋಷಣೆ ಮಾಡುವ ಬದಲು ಅಧಿವೇಶನ ಮುಕ್ತಾಯಗೊಳ್ಳುವ ಹಂತದಲ್ಲಿ ಘೋಷಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ರಾಜ್ಯ ನಾಯಕರು ಹೊಂದಿದ್ದಾರೆ. ಅಧಿವೇಶನ ಈ ತಿಂಗಳ 27ರಂದು ಮುಕ್ತಾಯಗೊಳ್ಳಲಿದ್ದು, 24 ಅಥವಾ 25ರಂದು (ಸೋಮವಾರ ಅಥವಾ ಮಂಗಳವಾರ) ಅಧಿಕೃತವಾಗಿ ಘೋಷಣೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ ಪಾದಯಾತ್ರೆ ಎಲ್ಲಿಂದ ಎಲ್ಲಿಯವರೆಗೆ?
ರಾಜ್ಯದಲ್ಲಿ ಒಟ್ಟು 15 ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಹುತೇಕ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಯಾದಗಿರಿ ಜಿಲ್ಲೆಗಳಲ್ಲೇ ಇವೆ. ಹೀಗಾಗಿ, ಪಾದಯಾತ್ರೆ ಈ ಜಿಲ್ಲೆಗಳನ್ನು ಹಾದು ಹೋಗುವಂತೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಪಾದಯಾತ್ರೆ ಯಾವುದೇ ಜಿಲ್ಲೆಯಿಂದ ಆರಂಭಗೊಂಡರೂ ಅಂತಿಮವಾಗಿ ನಾಗೇಂದ್ರ ಅವರು ಪ್ರತಿನಿಧಿಸುವ ಬಳ್ಳಾರಿಯಲ್ಲಿ ಅಂತ್ಯಗೊಳ್ಳುವಂತೆ ಮಾರ್ಗ ನಿಗದಿಪಡಿಸಲಾಗುತ್ತಿದೆ.
ಪಾದಯಾತ್ರೆ ರದ್ದಾಗಿಲ್ಲ-ರಾಮುಲು:
ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಾದಯಾತ್ರೆ ರದ್ದಾಗಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ನಮ್ಮ ಪಕ್ಷದ ನಾಯಕರು ಸದನದಲ್ಲಿ ಹೋರಾಟ ಮಾಡುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಗೊಂದಲ ಆಗಬಾರದು ಎಂಬ ಕಾರಣಕ್ಕಾಗಿ ಹಂತ ಹಂತದ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ಪಾದಯಾತ್ರೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಚರ್ಚೆ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರೇ ಅದರ ಬಗ್ಗೆ ಮುಂದೆ ತಿಳಿಸುತ್ತಾರೆ. ಪಾದಯಾತ್ರೆ ರದ್ದಾಗಿಲ್ಲ. ಅದರ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಪಕ್ಷದ ನಾಯಕರ ಜತೆ ಚರ್ಚಿಸಿ ರಾಜ್ಯಾಧ್ಯಕ್ಷರು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.


