ಅಂದು ಮನೆಗಾಗಿ 1 ಹಸು ಖರೀದಿ, ಇಂದು 100 ಎಮ್ಮೆಗಳ ಒಡತಿ ಕಲಬುರಗಿ ಮಹಿಳೆ; Dairy Farming
ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ, ಇದೀಗ 100 ಹರಿಯಾಣ ತಳಿಯ ಎಮ್ಮೆಗಳ ಒಡತಿಯಾಗಿದ್ದಾರೆ. ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಇವರ ಡೈರಿ ಫಾರ್ಮ್, 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮವಾಗಿ ಬೆಳೆದಿದೆ.

ಹೈನುಗಾರಿಕೆಯಲ್ಲಿ ಕಲಬುರಗಿ ಮಹಿಳೆ ಸಕ್ಸಸ್
9 To 5 ಜಾಬ್ ಮಾಡಲು ಬೇಸರಗೊಳ್ಳುತ್ತಿರುವ ಯುವ ಸಮುದಾಯ ಸ್ವಂತ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ. ಇಂದು ನಾವು ನಿಮಗೆ ಒಂದು ಹಸುವಿನಿಂದ ಆರಂಭಿಸಿ 100 ಎಮ್ಮೆಗಳ ಒಡತಿಯಾಗಿರುವ ಕಲಬುರಗಿ ಮಹಿಳೆ ಬಗ್ಗೆ ಹೇಳುತ್ತಿದ್ದೇವೆ. ಹೈನುಗಾರಿಕೆಯಲ್ಲಿ ಯಶಸ್ವಿಯಾಗಿರುವ ಇವರು ಇಂದು 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಹಾಗೆಯೇ ಇವರ ಡೈರಿಯಿಂದ ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ.
ಹರಿಯಾಣ ತಳಿಯ 100 ಎಮ್ಮೆಗಳ ಸಾಕಾಣಿಕೆ
ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ತಾಲೂಕಿನ ಸೈಯ್ಯದ್ ಚಿಂಕೊಳ್ಳಿ ಗ್ರಾಮದ ವ್ಯಾಪ್ತಿಯ 20 ಎಕರೆ ಜಮೀನಿನಲ್ಲಿ ಕೃಷಿ ಜೊತೆ ಹೈನುಗಾರಿಕೆಯನ್ನು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಮನೆ ಬಳಕೆಗೆ ಹಾಲು ಬೇಕೆಂದು ಒಂದು ಹಸು ಖರೀದಿಸಿದ್ದರು. ನಂತರ ಒಂದಾದ ನಂತರ ಒಂದರಂತೆ ಎಮ್ಮೆಗಳನ್ನು ಸಾಕಾಣಿಕೆ ಮಾಡಲು ಆರಂಭಿಸಿದ್ದರು. ಇದೀಗ ಇವರ ಡೈರಿಯಲ್ಲಿ ಹರಿಯಾಣ ತಳಿಯ 100 ಎಮ್ಮೆಗಳಿವೆ. ಈ ಎಮ್ಮೆಗಳ ಆರೈಕೆಗಾಗಿ ಬಿಹಾರ ಮತ್ತು ಹರಿಯಾಣ ಭಾಗದ 15ಕ್ಕೂ ಹೆಚ್ಚು ಕಾರ್ಮಿಕರನ್ನು ಸಹ ನೇಮಿಸಿಕೊಂಡಿದ್ದಾರೆ.
ಜಾನುವಾರಗಳ ಆರೈಕೆ ಹೇಗೆ?
20ರಲ್ಲಿ 10 ಎಕರೆ ಭೂಮಿಯಲ್ಲಿ ಜಾನುವಾರಗಳಿಗೆ ಬೇಕಾದ ಮೇವು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಹುಲ್ಲು ಕಡಿಮೆಯಾಗುವ ಕಾರಣ ಜೋಳ ಮತ್ತು ತೊಗರಿ ಬೆಳೆಯ ಮೇವು ಸಂಗ್ರಹ ಮಾಡಿಕೊಳ್ಳುತ್ತಾರೆ. ಇಲ್ಲಿಯ ಕಾರ್ಮಿಕರು ಜಾನುವಾರಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ಜಾನುವಾರಗಳ ಆರೋಗ್ಯ ಕಾಪಾಡಿಕೊಳ್ಳಲಾಗುತ್ತೆ ಎಂದು ಜ್ಯೋತಿ ಅವಿನಾಶ್ ಹೇಳುತ್ತಾರೆ.
ಹೈನೋದ್ಯಮದ ಆದಾಯ ಏನು?
ಜ್ಯೋತಿ ಅವಿನಾಶ್ ಅವರ ಒಡೆತನದ ಡೈರಿಯಿಂದ ದಿನಕ್ಕೆ ಅಂದಾಜು 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಕಾರ್ಮಿಕರ ಮೂಲಕ ಈ ಹಾಲು ಸುಮಾರು 250 ರಿಂದ 300 ಮನೆಗಳಿಗೆ ತಲುಪಿಸಲಾಗುತ್ತದೆ. ಹೆಚ್ಚುವರಿ ಹಾಲನ್ನು ಹೋಟೆಲ್‌ಗಳಿಗೆ ಮಾರಾಟ ಮಾಡಲಾಗುತ್ತದೆ. ಸಗಣಿಯಿಂದಲೂ ಉತ್ತಮ ಆದಾಯ ಬರುತ್ತದೆ. ಸುತ್ತಲಿನ ಭಾಗದಲ್ಲಿ ನಮ್ಮ ಡೈರಿಯ ಗೊಬ್ಬರಕ್ಕೆ ಉತ್ತಮ ಬೇಡಿಕೆ ಇದೆ ಎಂದು ಹೇಳುತ್ತಾರೆ ಜ್ಯೋತಿ ಅವಿನಾಶ್.
ಗೋಬರ್ ಗ್ಯಾಸ್
ಈ ಡೈರಿಯಿಂದಲೇ ಗೋಬರ್ ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ. ಡೈರಿಯಲ್ಲಿ ಕೆಲಸ ಮಾಡುವ ಐದು ಕುಟುಂಬಗಳು ಮತ್ತು ಕಾರ್ಮಿಕರು ಈ ಗೋಬರ್ ಗ್ಯಾಸ್ ಬಳಸಿಯೇ ಅಡುಗೆ ತಯಾರಿಸಿಕೊಳ್ಳುತ್ತಾರೆ. ನಾವೇ ಎಲ್ಲಾ ಕೆಲಸ ಮಾಡಬೇಕು ಅಂತೇನಿಲ್ಲ. ಕಾರ್ಮಿಕರ ಸಹಾಯದಿಂದ ಈ ಕೆಲಸ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ನೀಡಬೇಕು ಅನ್ನೋದು ನಮ್ಮ ಉದ್ದೇಶ. ಗ್ರಾಹಕರಿಗೆ ವಿತರಿಸುವ ಹಾಲಿಗೆ ನೀರು ಸಹ ಸೇರಿಸಲ್ಲ. 100 ಎಮ್ಮೆಗಳನ್ನು ಸಾಕಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಈಗ ಅದು ನನಸು ಆಗಿದೆ ಎಂದು ಜ್ಯೋತಿ ಅವಿನಾಶ್ ಸಂತೋಷ ಹಂಚಿಕೊಂಡರು.
Rangu Kasturi - Farming in Kannada ಯುಟ್ಯೂಬ್ ವಾಹಿನಿಯಲ್ಲಿ ಜ್ಯೋತಿ ಅವಿನಾಶ್ ಅವರು ಡೈರಿ ಫಾರ್ಮಿಂಗ್ ವಿಡಿಯೋ ನೋಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

