ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಬದಲು, ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ನೀರು ನೇರವಾಗಿ ತಮಿಳುನಾಡಿಗೆ ಸೇರುತ್ತಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಜಲಾಶಯದಿಂದ 4 ಟಿಎಂಸಿ ನೀರು ಖಾಲಿ!
ಮೈಸೂರು (ಆ.22): ಎಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸುವ ಬದಲು ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.
ನದಿಗೆ ಬಿಡುವ ನೀರು ನೇರವಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರುತ್ತಿದೆ. ಕೇರಳದ ವೈನಾಡಲ್ಲಿ ಸುರಿದ ಮಳೆಯಿಂದಾಗಿ ಜಲಾಶಯ (ಗರಿಷ್ಠ ಮಟ್ಟ 2284 ಅಡಿ) ಭರ್ತಿಯಾಗಿತ್ತು. ಈಗ ಜಲಾಶಯದ ನೀರಿನ ಮಟ್ಟ 2275.56 ಅಡಿಗೆ ಕುಸಿದಿದೆ. ಕಳೆದ ಒಂಬತ್ತು ದಿನಗಳಲ್ಲಿ ಜಲಾಶಯದಿಂದ 4 ಟಿಎಂಸಿ ನೀರು ಖಾಲಿ ಮಾಡಲಾಗಿದೆ. ಆ.13ರಂದು 2,282 ಅಡಿ ಇದ್ದ ನೀರಿನ ಮಟ್ಟ, ಶುಕ್ರವಾರ 2,275 ಅಡಿ ಇದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಕೇವಲ 14.57 ಟಿಎಂಸಿ ನೀರುವ ಮಾತ್ರ ಲಭ್ಯವಿದೆ.
ಜಲಾಶಯಗಳ ಇಂದಿನ ನೀರಿನ ಮಟ್ಟ (21-8-2026)
- ಕಬಿನಿ 78% 2284 2276.25
- ಹೇಮಾವತಿ 86% 2922 2916.45
- ತುಂಗಭದ್ರಾ 89% 1633 1630.50
- ಸೂಪಾ(ಮೀ.) 59% 564 548.00
- ಕೆಆರ್‌ಎಸ್ 62% 124.80 109.05
- ಘಟಪ್ರಭಾ 100% 2175 2174.50
- ಲಿಂಗನಮಕ್ಕಿ 56% 1819.12 1795.25
- ಭದ್ರಾ 82% 2158 2147.10
- ಹಾರಂಗಿ 98% 2859 2858.25
- ಆಲಮಟ್ಟಿ(ಮೀ.) 99% 519.60 519.50
- ನಾರಾಯಣಪುರ(ಮೀ.) 98% 492.12 492.10
- ಮಲಪ್ರಭಾ 58% 2079.50 2066.10

