ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ನೈಸ್‌ ರಸ್ತೆಯಲ್ಲಿ ಅಕ್ರಮವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಅನ್ವಯ ಯಾರೂ ಟೋಲ್ ಕಟ್ಟಬಾರದು ಎಂದು ಜನರಿಗೆ ಕರೆ ನೀಡಿದ್ದು, ಈ ಅಕ್ರಮದ ವಿರುದ್ಧ ರಾಜ್ಯ ಸರ್ಕಾರ ಮೌನವಾಗಿರುವುದನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಆ.22): ‘ನೈಸ್‌ ರಸ್ತೆಯಲ್ಲಿ ಅಕ್ರಮವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ. ಯಾರೂ ಕೂಡ ಟೋಲ್‌ ಕಟ್ಟಬೇಡಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಾರಿದ್ದಾರೆ. ಆ ರಸ್ತೆಯಲ್ಲಿ ಓಡಾವವರು ಕಾನೂನು ಕೈಗೆತ್ತಿಕೊಳ್ಳಬೇಕು. ಎಫ್‌ಐಆರ್‌ ಮಾಡಿದರೂ ಹೆದರಬೇಡಿ. ಆ ನೈಸ್‌ ಕಂಪನಿ ಹಾಗೂ ಸರ್ಕಾರ ಈ ನಾಡಿನ ಜನರಿಗಿಂತ ದೊಡ್ಡದಲ್ಲ ಎಂದೂ ಅವರು ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್‌ ರಸ್ತೆಯಲ್ಲಿ ಅನಧಿಕೃತವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂದು ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠ ಮತ್ತು ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ನೈಸ್‌ ಕಂಪನಿ ಫ್ರೇಮ್‌ ವರ್ಕ್‌ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ. ಸರ್ಕಾರದ ಅನುಮತಿ ಇಲ್ಲದೆ ಏಳೆಂಟು ಬಾರಿ ಟೋಲ್‌ ದರ ಏರಿಕೆ ಮಾಡಿದೆ. ನ್ಯಾಯಾಲಯದ ತೀರ್ಪು ಬಂದು ತಿಂಗಳಾದರೂ ರಾಜ್ಯ ಸರ್ಕಾರ ಮೌನವಾಗಿರುವುದು ಏಕೆ? ಈ ನೈಸ್‌ ಕಂಪನಿ ಮತ್ತು ಸರ್ಕಾರಕ್ಕೆ ಸಂಬಧವೇನು? ನೈಸ್‌ ಕಂಪನಿ ಸರ್ಕಾರ ನಡೆಸುತ್ತಿದೆಯಾ ಅಥವಾ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರ ನಡೆಸುತ್ತಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.

ಫ್ರೇಮ್ ವರ್ಕ್‌ ಒಪ್ಪಂದ ಪ್ರಕಾರ ನೈಸ್‌ ಸಂಸ್ಥೆ 111 ಕಿ.ಮೀ. ರಸ್ತೆ ನಿರ್ಮಿಸಬೇಕು. ಐದು ಟೌನ್‌ಶಿಪ್‌ ನಿರ್ಮಾಣ ಮಾಡಬೇಕು. ಇದಾದ ಬಳಿಕವೇ ಟೋಲ್‌ ಸಂಗ್ರಹಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, ಆ ಕಂಪನಿ ಇದ್ಯಾವುದನ್ನೂ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೈಕೋರ್ಟ್‌ ಎದುರು ಹೇಳಿದ್ದಾರೆ. ಈ ಕಂಪನಿ ಒಪ್ಪಂದದ ನಿಯಮ ಉಲ್ಲಂಘಿಸಿ ಸುಮಾರು 2 ಸಾವಿರ ಕೋಟಿ ರು. ಟೋಲ್‌ ಸಂಗ್ರಹಿಸಿದೆ. ಈ ರಸ್ತೆಯಲ್ಲಿ ಓಡಾಡುವವ ಕಿಸೆಯಲ್ಲಿ ದರೋಡೆ ಮಾಡಿದೆ. ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ವರದಿ ಸಲ್ಲಿಸಿದೆ. ವರದಿ ಸಲ್ಲಿಸಿ 10 ವರ್ಷ ಆಗಿದೆ. ಆದರೂ ಆ ವರದಿ ಅನುಷ್ಠಾನಕ್ಕೆ ತಂದಿಲ್ಲ ಎಂದು ಕಿಡಿಕಾರಿದರು.

ಸರ್ಕಾರ ಜತೆ ನೈಸ್‌ ಕಂಪನಿ ಶಾಮೀಲು

ಈ ಸರ್ಕಾರ ನೈಸ್‌ ಕಂಪನಿ ಜತೆ ಶಾಮೀಲಾಗಿದೆ. ಈ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶ ತೋರಿಸಿ ರಾಜ್ಯಾದ್ಯಂತ ಬಡ ಬೀದಿಬದಿ ವ್ಯಾಪಾರಿಗಳನ್ನು ಓಡಿಸುತ್ತಿದೆ. ನೈಸ್‌ ಅಕ್ರಮದ ಬಗ್ಗೆ ಹೈಕೋರ್ಟ್‌ ಆದೇಶವಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ. ನೈಸ್‌ ರಸ್ತೆಯ ಈ ಹಗಲ ದರೋಡೆ ವಿರುದ್ಧ ಈ ನಾಡಿನ ಯುವ ಜನತೆ ದನಿ ಎತ್ತಬೇಕು ಎಂದು ಕರೆ ನೀಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಹೈಕೋರ್ಟ್‌ ತೀರ್ಪು, ಅಭಿಪ್ರಾಯ ಉಲ್ಲೇಖಿಸಿ ನೈಸ್‌ ರಸ್ತೆಯಲ್ಲಿ ಟೋಲ್‌ ಸಂಗ್ರಹ ತಕ್ಷಣ ನಿಲ್ಲಿಸಬೇಕು. ಇಡೀ ಯೋಜನೆ ಸರ್ಕಾರದ ಸ್ವಾಧೀನಕ್ಕೆ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದೇನೆ. ಆ ಪತ್ರಕ್ಕೆ ಈ ಕ್ಷಣದವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.