ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅನುವಂಶಿಕ ಅರ್ಚಕರಿಗೆ ಬಿಳಿಮಚ್ಚೆ ಕಾರಣಕ್ಕೆ ಪೂಜೆಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹೈಕೋರ್ಟ್‌, ಅರ್ಚಕರಿಗೆ ಪೂಜೆಗೆ ಅಡ್ಡಿ ಉಂಟಾಗಿದೆಯೇ ಎಂದು ಪರಿಶೀಲಿಸಲು ಇಬ್ಬರು ವಕೀಲರನ್ನು ಕೋರ್ಟ್ ಕಮಿಷನರ್‌ಗಳಾಗಿ ನೇಮಿಸಿ ಆದೇಶಿಸಿದೆ.

ಬೆಂಗಳೂರು (ಆ.22): ದೇಹದಲ್ಲಿ ಬಿಳಿಮಚ್ಚೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅನುವಂಶಿಕ ಅರ್ಚಕರಾಗಿರುವ ಎನ್. ಅನಿಲ್ ಕುಮಾರ್ ಅವರಿಗೆ ಪೂಜೆ ನೆರವೇರಿಸಲು ದೇವಾಲಯದ ಆಡಳಿತ ಮಂಡಳಿಯಿಂದ ಅಡ್ಡಿ ಉಂಟಾಗಿದೆಯೇ? ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ವಕೀಲರಿಬ್ಬರನ್ನು ಕೋರ್ಟ್ ಕಮಿಷನರ್‌ ಆಗಿ ಹೈಕೋರ್ಟ್‌ ನೇಮಿಸಿದೆ.

ಏನಿದು ‘ಬಿಳಿಮಚ್ಚೆ’ ಪ್ರಕರಣ?

ನ್ಯಾಯಾಲಯದ ಆದೇಶದ ನಡುವೆಯೂ ಪೂಜಾ ಕೈಂಕರ್ಯಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿ ದೇವಾಲಯದ ‘’ಸನ್ನಿಧಿ ಪರಿಚಾರಕ'ರಾಗಿದ್ದ ಎನ್.ಅನಿಲ್ ಕುಮಾರ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿದೆ.

ವಕೀಲರಾದ ನಾರಾಯಣ ರಾವ್ ಮತ್ತು ಶಿವರುದ್ರ ಅವರನ್ನು ಕೋರ್ಟ್ ಕಮಿಷನರ್‌ ಆಗಿ ನೇಮಿಸಿರುವ ಪೀಠ, ಈ ವಕೀಲರಿಬ್ಬರು ದೇವಾಲಯಕ್ಕೆ ಬೇರೆ ಬೇರೆ ದಿನಗಳಲ್ಲಿ ಅರ್ಚಕರೊಂದಿಗೆ ಖುದ್ದಾಗಿ ಭೇಟಿ ನೀಡಬೇಕು. ಅರ್ಜಿದಾರ ಅರ್ಚಕರಿಗೆ ಪೂಜೆ ನೆರವೇರಿಸಲು ಯಾವುದೇ ಅಡ್ಡಿಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪರಿಶೀಲನಾ ಕಾರ್ಯಕ್ಕೆ ದೇವಾಲಯದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಬೇಕು. ಈ ಇಬ್ಬರೂ ವಕೀಲರು ವಸ್ತುಸ್ಥಿತಿ ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಅರ್ಜಿದಾರ ಅರ್ಚಕರ ಪರ ವಕೀಲರು, ಅರ್ಜಿದಾರರಿಗೆ ದೇವಾಲಯದಲ್ಲಿ ಪೂಜೆ ನೆರವೇರಿಸಲು ಇಂದಿಗೂ ಪರೋಕ್ಷವಾಗಿ ಕಿರುಕುಳ ಮತ್ತು ಅಡ್ಡಿಗಳು ನೀಡಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಸರ್ಕಾರಿ ವಕೀಲರು, ಅರ್ಜಿದಾರ ಅರ್ಚಕರಿಗೆ ಪೂಜೆ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅವರು ಮುಕ್ತವಾಗಿ ಕರ್ತವ್ಯ ನಿರ್ವಹಿಸಬಹುದು ಎಂದು ತಿಳಿಸಿದರು.