ಪ್ರತಿಭಟನಾಕಾರರ ಮೇಲೆ ಪೆಲ್ಲೆT ಗನ್ ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ರಾಹುಲ್ ಗಾಂಧಿ ಧರಣಿ ನಡೆಸಬೇಕಾದ ಸ್ಥಿತಿ ಖಂಡಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಂದೇ ಮಾತರಂ ವಿವಾದವನ್ನು ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಬಣ್ಣಿಸಿದರು.

ಬೆಂಗಳೂರು (ಆ.22) ಪ್ರತಿಭಟನಾಕಾರರ ಮೇಲೆ ಪೆಲ್ಲೆಟ್ ಗನ್ ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಆಗ್ರಹಿಸಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ದೆಹಲಿ ಪೊಲೀಸ್‌ ಠಾಣೆ ಮುಂದೆ ಎಂಟು ಗಂಟೆಗಳಿಂದ ಧರಣಿ ನಡೆಸಿದ ಘಟನೆ ಸಂಬಂಧ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಫ್ಐಆರ್ ದಾಖಲಿಸಲು ಧರಣಿ ಕೂಡಬೇಕಾಯ್ತು, ದುರಂತ:

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಪೊಲೀಸ್ ಠಾಣೆ ಮುಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಧರಣಿ ನಡೆಸಬೇಕಾಗಿ ಬಂದಿದ್ದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಪೆಲ್ಲೆಟ್ ಗನ್ ಯಾರು ಹಾರಿಸಿದ್ರು?

ಪ್ರತಿಭಟನಕಾರರ ಮೇಲೆ ಪೆಲ್ಲೆಟ್ ಗನ್ ಯಾರು ಹಾರಿಸಿದ್ರು? ಯಾರು ಆದೇಶ ಮಾಡಿದ್ರು ಅನ್ನೊದು ಎಲ್ಲರಿಗೂ ಗೊತ್ತಿದ್ದರೂ. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಪಕ್ಷ ನಾಯಕರೇ ಎಂಟು ಗಂಟೆ ಪೊಲೀಸ್ ಠಾಣೆ ಮುಂದೆ ಕಾಯಬೇಕಾಗಿ ಬಂದಿದ್ದು ನಿಜಕ್ಕೂ ದುರ್ದೈವ. ದೆಹಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗುತ್ತದೆಯೇ? ಸಾಮಾನ್ಯ ವ್ಯಕ್ತಿಗಳಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಒಂದು ದೂರು ದಾಖಲಿಸಲು ರಾಹುಲ್ ಗಾಂಧಿ ಮಧ್ಯಪ್ರವೇಶಿಸಬೇಕಾದರೆ ಪೆಲ್ಲೆಟ್‌ ಗನ್‌ಗಳ ದಾಳಿಗೆ ತುತ್ತಾದ ಸಾಮಾನ್ಯ ನಾಗರಿಕರ ಪಾಡು ಏನಾಗಿರಬೇಡ ಎಂದು ಪ್ರಶ್ನಿಸಿದರು.

ಅಮಿತ್ ಶಾ, ಮೋದಿಜೀಗೆ ಉತ್ತರಿಸುವ ಧೈರ್ಯವೇ ಇಲ್ಲ

ಬಿಜೆಪಿಯವರಿಗೆ ಸ್ವಲ್ಪವಾದರೂ ನಾಚಿಕೆ, ಮಾನ-ಮರ್ಯಾದೆ ಇದ್ದಿದ್ರೆ ಈ ಘಟನೆ ಬಗ್ಗೆ ತಕ್ಷಣವೇ ಸ್ವತಂತ್ರ ತನಿಖೆಗೆ ಆದೇಶಿಸುತ್ತಿದ್ದರು. ಆದರೆ ಅವರೇ ತಪ್ಪಿತಸ್ಥರಾಗಿರುವುದರಿಂದ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅಧ್ಯಕ್ಷ ಅಮಿತ್ ಶಾ ಮತ್ತು ಮೋದಿಜೀ ಎಷ್ಟು ಹೆದರಿಕೊಂಡಿದ್ದಾರೆಂದರೆ ಈ ವಿಚಾರವಾಗಿ ಸಂಸತ್ತಿಗೆ ಬಂದು ಉತ್ತರಿಸುವ ಧೈರ್ಯವೂ ಅವರಿಗಿಲ್ಲ. ಇನ್ನು ಎಫ್‌ಐಆರ್ ದಾಖಲಿಸುವುದು ದೂರದ ಮಾತು ಬಿಡಿ ಎಂದರು.

ಘಟನೆ ಹಿನ್ನೆಲೆ

ಲೋಚಬ್ ಎಂಬ ಸಂತ್ರಸ್ತ ನೀಡಿದ ದೂರಿನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಹುಲ್ ಗಾಂಧಿ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ ನಂತರ, ದೆಹಲಿ ಪೊಲೀಸರು ಶುಕ್ರವಾರ ಸಂಜೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 118 ಮತ್ತು 125 ರ ಅಡಿಯಲ್ಲಿ ಅಂತಿಮವಾಗಿ ಎಫ್‌ಐಆರ್ ದಾಖಲಿಸಿಕೊಂಡರು. ಜುಲೈ 20 ರಂದು ಕನ್ನಾಟ್ ಪ್ಲೇಸ್‌ನಲ್ಲಿ ನಡೆದ ಪೆಲ್ಲೆಟ್ ಗನ್ ಫೈರಿಂಗ್‌ನಲ್ಲಿ ತನಗೆ ಗಾಯಗಳಾಗಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದರು. ಏಮ್ಸ್‌ನಲ್ಲಿ (AIIMS) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ತಮ್ಮ ದೃಷ್ಟಿ ಇನ್ನೂ ಸರಿಯಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

'ವಂದೇ ಮಾತರಂ'ದಾರಿ ತಪ್ಪಿಸುವ ತಂತ್ರ

ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಖರ್ಗೆ, ವಂದೇ ಮಾತರಂ ಕುರಿತ ವಿವಾದವು ದೇಶದ ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದಂತಹ ಗಂಭೀರ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರೂಪಿಸಿರುವ ಒಂದು ತಂತ್ರ ಎಂದು ಬಣ್ಣಿಸಿದರು.

ಜಂತರ್ ಮಂತರ್ ಪ್ರತಿಭಟನೆ, ಆರ್‌ಎಸ್‌ಎಸ್‌ನ ತಪ್ಪುಗಳು, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ವಂದೇ ಮಾತರಂ ಅನ್ನು ಬಳಸಲಾಗುತ್ತಿದೆ. ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ಎಷ್ಟಿದೆ? 98 ರೂಪಾಯಿ. ಅಮೆರಿಕದಿಂದ ನಾವು 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಬೇಕಾದ ವ್ಯಾಪಾರ ಒಪ್ಪಂದದಿಂದಲೂ ಗಮನ ಬೇರೆಡೆ ಸೆಳೆಯಲು ಈ ತಂತ್ರ ಹೂಡಿದ್ದಾರೆ.

ವಂದೇ ಮಾತರಂನಿಂದ ಗಮನ ಬೇರೆಡೆ ಸೆಳೆಯಲು ಒಂದು ಎಫ್‌ಐಆರ್ ಸಾಕೇ? ವಂದೇ ಮಾತರಂ ಬಗ್ಗೆ ನಮಗೆ ಹೇಳಲು ಇವರು ಯಾರು? ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಲ್ಲಿದ್ದವು? 1937ರಲ್ಲಿ ಪಂಡಿತ್ ನೆಹರೂ, ನೇತಾಜಿ ಬೋಸ್, ರವೀಂದ್ರನಾಥ ಟ್ಯಾಗೋರ್, ಸರ್ದಾರ್ ಪಟೇಲ್ ಅವರು ಈ ಬಗ್ಗೆ ಚರ್ಚಿಸಿದ್ದರು. ಸಂವಿಧಾನ ರಚನಾ ಸಭೆಯಲ್ಲೂ ಚರ್ಚೆಯಾಗಿತ್ತು. ಹಾಗಾದರೆ ಅವರೆಲ್ಲರೂ ದೇಶದ್ರೋಹಿಗಳೇ? ಎಂದು ಖರ್ಗೆ ಪ್ರಶ್ನಿಸಿದರು.

ಬಿಜೆಪಿ ಹೈಕಮಾಂಡ್‌ಗೆ ಖರ್ಗೆ ಸವಾಲು!

ಬಿಜೆಪಿಯವರು ನಿಜವಾಗಿಯೂ ದೇಶಭಕ್ತರಾಗಿದ್ದರೆ, ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನಾಗ್ಪುರಕ್ಕೆ ಹೋಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ 'ನಮಸ್ತೆ ಸದಾ ವತ್ಸಲೇ' (ಆರ್‌ಎಸ್‌ಎಸ್ ಗೀತೆ) ಹಾಡುವುದನ್ನು ಬಿಟ್ಟು, ಎಲ್ಲಾ ಆರ್‌ಎಸ್‌ಎಸ್ ಶಾಖೆಗಳಲ್ಲಿ ತ್ರಿವರ್ಣ ಧ್ವಜದ ಮುಂದೆ ಕೈಮುಗಿದು ವಂದೇ ಮಾತರಂ ಹಾಡಲಿ. ನಾನು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇಡೀ ಬಿಜೆಪಿ ಸಂಪುಟಕ್ಕೆ ಸವಾಲು ಹಾಕುತ್ತೇನೆ. ಅವರು ಟೆಲಿಪ್ರಾಂಪ್ಟರ್ ಇಲ್ಲದೆ ನಮ್ಮ ರಾಷ್ಟ್ರಗೀತೆಯ ಕೊನೆಯ ಎರಡು ಚರಣಗಳನ್ನು ಸೇರಿಸಿ ಪೂರ್ಣವಾಗಿ ಹಾಡಲಿ. ಹಾಗೇನಾದರೂ ಅವರು ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ' ಎಂದರು.

ಸಿಬಿಐ ತನಿಖೆ, ಕರ್ನಾಟಕ ಬಿಜೆಪಿ ಕುರಿತು ಖರ್ಗೆ ಹೇಳಿದ್ದೇನು?

ಕರ್ನಾಟಕದ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿಚಾರಣೆಗೆ ಅನುಮತಿ ಕೋರಿ ಸಿಬಿಐ ಪತ್ರ ಬರೆದಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಮನವಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಸಿಬಿಐ ಯಾವ ಆಧಾರದ ಮೇಲೆ ಅನುಮತಿ ಕೇಳಿದೆ ಎಂದು ನಮಗೆ ತಿಳಿದಿಲ್ಲ. ಅವರು ಮೊದಲು ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕು. ವಿಚಾರಣೆಗೆ ಅನುಮತಿ ಕೋರಿ ನಮಗೆ ಯಾವುದೇ ಪತ್ರ ಬಂದಿಲ್ಲ. ಈ ಹಿಂದೆ ಅವರು ತನಿಖೆಗಾಗಿ ಸಿಬ್ಬಂದಿಯನ್ನು ಕೋರಿ ಪತ್ರ ಬರೆದಿದ್ದರು ಅಷ್ಟೇ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಯೋಜಿಸಿರುವ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ನಾಯಕತ್ವದ ಜಗಳವನ್ನು ಮರೆಮಾಚಲು ವಿರೋಧ ಪಕ್ಷವು ಈ ಪಾದಯಾತ್ರೆಯನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ, ರಾಜ್ಯ ವಿಧಾನಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಾಣೆಯಾದ ಐಎಎಸ್ ಅಧಿಕಾರಿ

ಕಾಣೆಯಾಗಿರುವ ಐಎಎಸ್ ಅಧಿಕಾರಿಯ ಕುರಿತ ವರದಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ ಖರ್ಗೆ, 'ಅವರ ಕುಟುಂಬದಿಂದ ಯಾವುದೇ ದೂರು ಬಂದಿಲ್ಲ. ಅವರು ಕೊನೆಯ ಬಾರಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರ ಇರುವಿಕೆ ಸದ್ಯಕ್ಕೆ ತಿಳಿದುಬಂದಿಲ್ಲ, ಶೋಧ ಕಾರ್ಯ ನಡೆಯುತ್ತಿದೆ'