ಮಾಜಿ ಸಿಎಂ ದಿ. ಗುಂಡೂರಾವ್ 1982ರಲ್ಲಿ ಉದ್ಘಾಟಿಸಿದ್ದ ಚಳ್ಳಕೆರೆಯ ಕೋನಿಗರಹಳ್ಳಿ ಸೇತುವೆ ಈಗ ಕುಸಿತ ಕಂಡಿದ್ದು 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ಚಳ್ಳಕೆರೆ: ಸುಮಾರು 44 ವರ್ಷಗಳ ಇತಿಹಾಸ ಹೊಂದಿದ್ದ ಕೋನಿಗರಹಳ್ಳಿ ಸೇತುವೆ ಸಂಪೂರ್ಣವಾಗಿ ಕುಸಿತ ಕಂಡಿದ್ದು, 15ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ಗುಂಡೂರಾವ್ ಕಾಲದ ಸ್ಮಾರಕಕ್ಕೀಗ ದುಸ್ಥಿತಿ!

1982ರಲ್ಲಿ ಅಂದಿನ ಸಿಎಂ ದಿವಂಗತ ಗುಂಡೂರಾವ್ ಅವರು ವೇದಾವತಿ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ಉದ್ಘಾಟಿಸಿದ್ದರು. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಹರಿದು ಬರುವ ವೇದಾವತಿ ನದಿ ನೀರು ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ ಮೂಲಕ ಆಂಧ್ರಪ್ರದೇಶಕ್ಕೆ ಸಾಗುತ್ತದೆ. ಅಂತಹ ಪ್ರಮುಖ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ಕಳೆದ 4 ದಶಕಗಳಿಂದ ಸಾವಿರಾರು ಜನರಿಗೆ ದಾರಿಯಾಗಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಈ ಐತಿಹಾಸಿಕ ಸೇತುವೆ ಬಿರುಕು ಬಿಟ್ಟು ಕುಸಿದು ಬಿದ್ದಿದೆ.

ಕಳೆದ ಎರಡು ಮೂರು ವರ್ಷಗಳಿಂದ ಈ ಸೇತುವೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಲೇ ಇತ್ತು. ಅದರಲ್ಲೂ ಕಳೆದ ವರ್ಷ ಸುರಿದ ಭೀಕರ ಮಳೆಗೆ ವೇದಾವತಿ ನದಿ ತುಂಬಿ ಹರಿದು ಸೇತುವೆ ಜಲಾವೃತಗೊಂಡಿತ್ತು. ನೀರಿನ ರಭಸಕ್ಕೆ ಅಡಿಪಾಯ ಅಲುಗಾಡಿದ್ದು, ಈಗ ಸೇತುವೆ ಸಂಪೂರ್ಣವಾಗಿ ಕುಸಿಯುವ ಹಂತಕ್ಕೆ ತಲುಪಿದೆ. ಈ ಮಾರ್ಗವಾಗಿ ಸಂಚರಿಸುವಾಗ ಸೇತುವೆ ನಡುಗುತ್ತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

15 ಹಳ್ಳಿಗಳ ಶಾಲಾ ಮಕ್ಕಳ ಭವಿಷ್ಯಕ್ಕೆ ಅಡ್ಡಿ

ಪರಶುರಾಂಪುರ ಸೇರಿದಂತೆ ಸುತ್ತಮುತ್ತಲಿನ ಸುಮಾರು 15 ಹಳ್ಳಿಗಳಿಗೆ ಇದೇ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಪ್ರತಿದಿನ ನೂರಾರು ವಾಹನಗಳು, ಶಾಲಾ ಬಸ್‌ಗಳು ಇದೇ ಹಳೆಯ ಸೇತುವೆ ಮೇಲೆ ಸಂಚರಿಸುತ್ತವೆ. ಬೃಹತ್ ಗಾತ್ರದ ವಾಹನಗಳು ಬಂದಾಗ ಸೇತುವೆ ಕಂಪಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ.

Scroll to load tweet…