ಮೆಟಾ ಸಂಸ್ಥೆಯಿಂದ ವಜಾಗೊಂಡ ಮಾಜಿ ಉದ್ಯೋಗಿಯೊಬ್ಬರು, ಲೇ-ಆಫ್ ಅವಧಿಯಲ್ಲೇ ಹೊಸ ಉದ್ಯೋಗ ಪಡೆದು ಆರ್ಥಿಕವಾಗಿ ಲಾಭ ಗಳಿಸಿದ್ದಾರೆ. ಹೊಸ ಕಂಪನಿಯ ಸಂಬಳದ ಜೊತೆಗೆ ಮೆಟಾದಿಂದ ಪರಿಹಾರ, 3 ತಿಂಗಳ ವೇತನ ಮತ್ತು ಸ್ಟಾಕ್ ವೆಸ್ಟ್ ಪಡೆದು, ಸುಮಾರು ₹25 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಹಣ ಗಳಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ತಂತ್ರಜ್ಞಾನ ಕಂಪನಿಗಳ ಲೇ-ಆಫ್ ನೀತಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಸಾಮಾನ್ಯವಾಗಿ ಉದ್ಯೋಗ ನಷ್ಟ ಅಥವಾ 'ಲೇ-ಆಫ್' (Layoff) ಎನ್ನುವುದು ಯಾರಿಗೆ ಆದರೂ ದೊಡ್ಡ ಆರ್ಥಿಕ ಹಾಗೂ ಮಾನಸಿಕ ಆಘಾತ ತರುತ್ತದೆ. ಆದರೆ, ತಂತ್ರಜ್ಞಾನ ದೈತ್ಯ 'ಮೆಟಾ' (Meta) ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರಿಗೆ ವಜಾಗೊಳಿಸಿದ್ದೇ ಆರ್ಥಿಕವಾಗಿ ದೊಡ್ಡ ಲಾಭ ತಂದುಕೊಟ್ಟಿದೆ! ಸಂಸ್ಥೆಯಿಂದ ಹೊರಬಿದ್ದ ಮೇಲೂ ತಮಗೆ ಸಿಕ್ಕ ಜಾಣತನದ ಅವಕಾಶದಿಂದಾಗಿ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹೆಚ್ಚುವರಿ ಹಣ ಉಳಿತಾಯವಾಗಿದೆ ಎಂದು ಅವರು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉದ್ಯೋಗಿಗಳು ಹಾಗೂ ವೃತ್ತಿಪರರು ಅನಾಮಧೇಯವಾಗಿ ತಮ್ಮ ಕಂಪನಿಗಳ ವಿಚಾರಗಳನ್ನು ಹಂಚಿಕೊಳ್ಳುವ 'ಬ್ಲೈಂಡ್' ವೇದಿಕೆಯಲ್ಲಿ ಈ ಮಾಜಿ ಉದ್ಯೋಗಿ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.

ಎರಡು ಸಂಬಳ, ಸ್ಟಾಕ್ ವೆಸ್ಟ್: ಆರ್ಥಿಕ ಪವಾಡ ನಡೆದದ್ದು ಹೇಗೆ?

ತಮ್ಮ ಪೋಸ್ಟ್‌ನಲ್ಲಿ ಆ ವ್ಯಕ್ತಿ, ಲೇ-ಆಫ್ ಪರಿವರ್ತನೆಯ ಸಮಯದಲ್ಲಿ ತಮ್ಮ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡ ಜಾಣತನದ ಹಾದಿಯನ್ನು ವಿವರಿಸಿದ್ದಾರೆ. ಮೆಟಾದಲ್ಲಿ ನನ್ನ ಕೊನೆಯ ದಿನದ ಕೆಲಸ ಮುಗಿಯಲು ಇನ್ನೂ ಎರಡು ತಿಂಗಳು ಇರುವಾಗಲೇ ನನಗೆ ಮತ್ತೊಂದು ಹೊಸ ಉದ್ಯೋಗ ಸಿಕ್ಕಿತು. ನಾನು ತಕ್ಷಣವೇ ಹೊಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಇದರಿಂದಾಗಿ, ಒಂದೆಡೆ ಹೊಸ ಕಂಪನಿಯ ವೇತನ ಪಡೆಯುತ್ತಲೇ, ಇನ್ನೊಂದೆಡೆ ಮೆಟಾ ಸಂಸ್ಥೆಯಿಂದ ಸುಮಾರು 3 ತಿಂಗಳ ಪೂರ್ಣ ಸಂಬಳ ಮತ್ತು ಪರಿಹಾರದ ಹಣವನ್ನು ಪಡೆದುಕೊಂಡೆ. ಜೊತೆಗೆ, ಆಗಸ್ಟ್ ತಿಂಗಳ ‘ಸ್ಟಾಕ್ ವೆಸ್ಟ್’ (Stock Vest) ಸಹ ನನ್ನ ಕೈಸೇರಿತು. ಈ ಅವಧಿಯಲ್ಲಿ ಬಂದ ಸುಮಾರು ಸುಮಾರು ₹25 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಹಣವನ್ನು ನಾನು ಹೂಡಿಕೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಬಿಗ್ ಟೆಕ್ ಲೇ-ಆಫ್‌ಗಳ ಕುರಿತು ಪ್ರಶ್ನೆ

ಉದ್ಯೋಗ ಕಳೆದುಕೊಂಡರೂ ಅಂತಿಮವಾಗಿ ಭಾರಿ ಲಾಭ ಗಳಿಸಿದ ಅವರು, ಪ್ರಮುಖ ತಂತ್ರಜ್ಞಾನ ಕಂಪನಿಗಳ ಲೇ-ಆಫ್ ನೀತಿಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ನಾನು ಮೆಟಾ ಕಂಪನಿಯಲ್ಲೇ ಮುಂದುವರಿದಿದ್ದರೆ ನನ್ನ ಖಾತೆಯಲ್ಲಿ ಇಷ್ಟು ಹಣ ಸೇರುತ್ತಿರಲಿಲ್ಲ. ಕೆಲಸದಿಂದ ತೆಗೆದುಹಾಕಿದ ಮೇಲೆಯೇ ನನ್ನ ಹೂಡಿಕೆ ಮತ್ತು ಖಾತೆಯ ಬ್ಯಾಲೆನ್ಸ್ ಹೆಚ್ಚಾಗಿದೆ. ಇದು ವಿಪರ್ಯಾಸವಲ್ಲವೇ? ಅಥವಾ ನಿಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆ ಬಳಸಿಕೊಂಡರೆ ಬಿಗ್ ಟೆಕ್ ಕಂಪನಿಗಳಿಂದ ವಜಾಗೊಳ್ಳುವುದೂ ಸಹ ಒಳ್ಳೆಯದೇ?" ಎಂದು ಅವರು ಆನ್‌ಲೈನ್ ನೆಟ್ಟಿಗರನ್ನು ಕೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ:

ಬದುಕುಳಿಯುವಿಕೆಯ ಪಕ್ಷಪಾತ : ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ನಿಮಗೆ ಸಿಕ್ಕ ಯಶಸ್ಸಿಗೆ ಸಂತೋಷ. ಆದರೆ ಪ್ರಸ್ತುತ ಉದ್ಯೋಗ ಮಾರುಕಟ್ಟೆ ಅತ್ಯಂತ ಕಠಿಣ ಹಾಗೂ ಸ್ಪರ್ಧಾತ್ಮಕವಾಗಿದೆ. ಟಾಪ್ 20% ಶೇಕಡಾ ಜನಷ್ಟೇ ಇಂತಹ ಲಾಭ ಪಡೆಯಬಲ್ಲರು, ಉಳಿದವರು ಉಳಿಯಲು ಹೆಣಗಾಡುತ್ತಿದ್ದಾರೆ. ಇದನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

ಮತ್ತೊಬ್ಬರು ಕಾಮೆಂಟ್ ಮಾಡಿ, "ಮೆಟಾ ಸಂಸ್ಥೆಯಷ್ಟು ಹೆಚ್ಚು ವೇತನ ನೀಡುವ ಇನ್ನೊಂದು ಸಾರ್ವಜನಿಕ ತಂತ್ರಜ್ಞಾನ ಕಂಪನಿಯನ್ನು ಕಂಡುಕೊಳ್ಳುವುದು ನಿಜಕ್ಕೂ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

30,000 ಡಾಲರ್ ಹೆಚ್ಚುವರಿ ಹಣ ಸಿಕ್ಕ ತಕ್ಷಣ ಎಲ್ಲವೂ ಮುಗಿಯುವುದಿಲ್ಲ, ಜೀವನ ನಡೆಸಲು ಕೊನೆಗೂ ಉದ್ಯೋಗವೇ ಬೇಕು ಎಂದು ಇನ್ನೊಬ್ಬರು ನೆನಪಿಸಿದ್ದಾರೆ.

ಲೇ-ಆಫ್ ಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವರಿಸಿದ ಮತ್ತೊಬ್ಬ ಬಳಕೆದಾರ, "ಜೀವನ ಎಂಬುದು ಒಂದು ಪೋಕರ್ ಆಟದಂತೆ" ಎಂದು ಬರೆದಿದ್ದಾರೆ.