ಒಡಿಶಾದ ಬಾಲಸೋರ್ ಜಿಲ್ಲೆಯ ಅರಣ್ಯದಲ್ಲಿ ಐದು ಒರಾಂಗುಟಾನ್ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಭಾರತದಲ್ಲಿ ಕಂಡುಬರದ ಈ ಪ್ರಾಣಿಗಳು ಇಲ್ಲಿಗೆ ಹೇಗೆ ಬಂದವು ಎಂಬುದು ನಿಗೂಢವಾಗಿದ್ದು, ಇದು ಅಕ್ರಮ ಕಳ್ಳಸಾಗಣೆ ಜಾಲದ ಕೃತ್ಯವಿರಬಹುದೆಂದು ಶಂಕಿಸಿ ತನಿಖೆ ನಡೆಸಲಾಗುತ್ತಿದೆ.
ಒಡಿಶಾ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆಪ್ಟೆಂಬರ್ 08ರಂದು ಐದು ಒರಾಂಗುಟಾನ್ ಮರಿಗಳನ್ನು ಸ್ಥಳೀಯ ಕಾಡಿನಿಂದ ರಕ್ಷಣೆ ಮಾಡಿದ್ದಾರೆ. ಒರಿಶಾದ ಬಾಲಸೋರ್ ಜಿಲ್ಲೆಯ ಉದಯಪುರ-ತಲ್ಸಾರಿ ಅರಣ್ಯ ಪ್ರದೇಶದ ಕ್ಯಾಸುರಿನಾ ತೋಟದಲ್ಲಿ ಸುಮಾರು ಎರಡು ವರ್ಷ ವಯಸ್ಸಿನ ಒರಾಂಗುಟಾನ್ ಮರಿಗಳನ್ನು ರಕ್ಷಣೆ ಮಾಡಲಾಗಿದೆ.
ಒಡಿಶಾ ಕಾಡಿನಲ್ಲಿ ಒರಾಂಗುಟಾನ್ ಮರಿಗಳ ರಹಸ್ಯ
ಭಾರತದಲ್ಲಿ ಕಂಡು ಬಾರದ ಈ ಒರಾಂಗುಟನ್‌ಗಳನ್ನು ಭಾರತ ಕಾಡಿಗೆ ತಂದು ಬಿಟ್ಟಿದ್ದು ಯಾರು ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ದಿನನಿತ್ಯದ ಗಸ್ತು ಮಾಡುವ ಸಂದರ್ಭದಲ್ಲಿ ಒಂದೇ ಕಡೆ ಐದು ಒರಾಂಗುಟನ್ ಮರಿಗಳನ್ನು ಮೊದಲು ಶಾಕ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಸಿಸಿಎಫ್ ಪ್ರಕಾಶ್ ಚಂದ್ ಅವರು, ನಾವು ಎಲ್ಲಾ ಮರಿಗಳನ್ನು ರಕ್ಷಣೆ ಮಾಡಿದ್ದೇವೆ. ಇದರಲ್ಲಿ ಮೂರು ಗಂಡು ಮತ್ತು ಎರಡಯ ಹೆಣ್ಣು ಮರಿಗಳಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಮರಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಾಣಿ ಸಂಗ್ರಹಾಲಯಕ್ಕೆ ಶಿಫ್ಟ್ ಮಾಡಿದ್ದಾರೆ. ಐದು ಮರಿಗಳಲ್ಲಿ 6 ತಿಂಗಳಿನಿಂದ ಎರಡು ವರ್ಷದ ವರೆಗೂ ವಯಸ್ಸು ಇದ್ದು, ಯಾವುದೇ ಗಾಯಗಳು ಆಗಿಲ್ಲ. ಆದರೆ ನಾವು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಅವುಗಳನ್ನು ನಂದಂಕಣನ್‌ಗೆ ಶಿಫ್ಟ್ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂದಹಾಗೇ, ಭಾರತದಿಂದ ಸುಮಾರು 4500 ಕಿಲೋ ಮೀಟರ್ ದೂರದಲ್ಲಿರುವ ಇಂಡೋನೇಷ್ಯಾ ಮತ್ತು ಮಲೇಷ್ಯಾ ಕಾಡುಗಳಲ್ಲಿ ಈ ಒರಾಂಗುಟನ್‌ಗಳು ಕಂಡು ಬರುತ್ತವೆ. ಆದರೆ ಇದು ಭಾರತದಲ್ಲಿ ಕಂಡು ಬರುವುದಿಲ್ಲ. ಅದರಲ್ಲೂ ಒಟ್ಟಿಗೆ ಇಷ್ಟು ಮರಿಗಳು ಮಾತ್ರ ಕಾಣಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳ್ಳಸಾಗಣೆ ಮಾಡುವ ಸಂದರ್ಭದಲ್ಲಿ ವಿಫಲವಾಗಿ ಇಲ್ಲಿ ತಂದು ಬಿಟ್ಟಿರುವ ಸಾಧ್ಯತೆ ಇದೆ. ಆದರೆ ಒಡಿಶಾಗೆ ಯಾವ ಕರಾವಳಿಯ ತೀರದಿಂದ ಎಂಬ ಸಣ್ಣ ಸುಳಿವು ಕೂಡ ಅರಣ್ಯ ಅಧಿಕಾರಿಗಳಿಗೆ ಇಲ್ಲ. ಈ ಸಂಬಂಧ ಪ್ರಕರಣದ ದಾಖಲು ಮಾಡಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡುವುದಾಗಿ ಒಡಿಶಾ ಅರಣ್ಯ ಇಲಾಖೆ ಸಚಿವ ಗಣೇಶ್ ರಾಮ್ ಸಿಂಗ್ ತಿಳಿಸಿದ್ದಾರೆ.
ಒರಾಂಗುಟನ್‌ಗಳು ಅಳಿವಿನಿಂನಲ್ಲಿರುವ ದೊಡ್ಡ ವಾನರ ಪ್ರಭೇದ ಎಂದು ವಿಶ್ವಸಂಸ್ಥೆ ಗುರುತಿಸಿದೆ. ಆದರೆ ಅವುಗಳ ಆವಾಸಸ್ಥಾನದಿಂದ ಹೊರಗೆ ಕಂಡು ಬಂದಿರುವುದ ಕಳವಳಕಾರಿ ವಿಚಾರ ಎಂದು ಪರಿಸರ ಪ್ರೇಮಿಗಳು ಆತಂಖ ವ್ಯಕ್ತಪಡಿಸಿದ್ದಾರೆ. ಒರಾಂಗುಟಾನ್ ಮರಿಗಳು ತಾಯಿ ಆರೈಕೆ ಇಲ್ಲದೇ ಬದುಕುದು ಬಹಳ ಅಪರೂಪ, ಏಕೆಂದರೆ ಸುಮಾರು 6 ವರ್ಷಗಳ ವರೆಗೂ ಅವುಗಳನ್ನು ತಾಯಿ ಒರಾಂಗುಟನ್ ಎದೆ ಹಾಲು ನೀಡಿ ಪೋಷಣೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ತಾಯಿ ಒರಾಂಗುಟನ್‌ಗಳು ಮರಿಗಳ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತವೆ. ಮರಿಗಳನ್ನು ತಾಯಿಯಿಂದ ಬೇರ್ಪಡಿಸಲು ಅವುಗಳನ್ನು ಸಾಯಿಸಿ ಮರಿಗಳನ್ನು ಇಲ್ಲಿಗೆ ಕಳ್ಳಸಾಗಣೆ ಮಾಡುವ ನಿರೀಕ್ಷೆ ಎಂಬ ಅಭಿಪ್ರಾಯವನ್ನು ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.


