ಇನ್ಸಾಟ್ 3ಡಿಎಸ್ ಉಪಗ್ರಹ ಚಿತ್ರದ ಪ್ರಕಾರ, ನೈರುತ್ಯ ಮಾನ್ಸೂನ್ ಮಾರುತಗಳು ದಕ್ಷಿಣ ಭಾರತದತ್ತ ಚಲಿಸುವ ಮುನ್ಸೂಚನೆ ನೀಡಿದೆ. ಸದ್ಯ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಸಕ್ರಿಯವಾಗಿರುವ ಮಳೆ, ಸೆಪ್ಟೆಂಬರ್ ಮಧ್ಯದ ನಂತರ ದಕ್ಷಿಣದ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದ ಹಲವು ಭಾಗಗಳಲ್ಲಿ, ಭಾರೀ ಮಳೆಯನ್ನು ತರುವ ನಿರೀಕ್ಷೆಯಿದೆ, ಇದು ರೈತರಿಗೆ ಸಿಹಿ ಸುದ್ದಿಯಾಗಿದೆ.

ಇನ್ಸಾಟ್ 3ಡಿಎಸ್ ಉಪಗ್ರಹವೂ ತೆಗೆದ ಚಿತ್ರವ ದಕ್ಷಿಣ ಭಾರತದ ರೈತರಿಗೆ ಗುಡ್‌ನ್ಯೂಸ್ ನೀಡಿದೆ. ಸದ್ಯ ನೈರುತ್ಯ ಮಾನ್ಸೂನ್ ಮಾರುತಗಳು, ಮಧ್ಯ ಮತ್ತು ಪೂರ್ವ ಭಾತದ ವಿಶಾಲ ಬಯಲು ಪ್ರದೇಶಗಳ ಮೇಲೆ ಹೆಚ್ಚು ಪ್ರಭಾವವನ್ನು ಹೊಂದಿದೆ. ಆದರೆ ಮೋಡಗಳು ದಕ್ಷಿಣ ಭಾರತ ಕಡೆಗೆ ಚಲಿಸುತ್ತಿರುವ ಮುನ್ಸೂಚನೆಯನ್ನು ನೀಡಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತ ಹಲವು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

ಉಪಗ್ರಹ ಚಿತ್ರದ ರಹಸ್ಯ

ಭಾರತದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ವ್ಯಾಪಕ ಮೋಡ ರಚನೆಗಳು ಇನ್ಸಾಟ್ 3ಡಿಎಸ್ ತೆಗೆದ ಚಿತ್ರಗಳಲ್ಲಿ ಕಾಣುತ್ತಿದೆ. ಇದು ಮಾನ್ಸೂನ್ ವಾತಾವರಣದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಸೂಚಿಸುತ್ತದೆ. ಹಿಮಾಲಯ, ಇಂಡೋ-ಗಂಗಾ ಬಯಲು ಪ್ರದೇಶ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ದಟ್ಟ ಮೋಡ ಸಾಲು ಕಾಣುತ್ತಿದೆ.

ಪೂರ್ವ ಮತ್ತು ಈಶಾನ್ಯ ಭಾಗದಲ್ಲೂ ಮೋಡಗಳ ಚಟುವಟಿಕೆ ಹೆಚ್ಚಾಗಿದ್ದು, ಗುಡುಗು ಸಹಿತ ಮಳೆಯಾಗುತ್ತಿದೆ. ಈ ಚಿತ್ರಗಳು ಸೆಪ್ಟೆಂಬರ್‌ನಲ್ಲಿ ಸಹ ಮಾನ್ಸೂನ್ ಮುಂದುವರಿದಿರುವುದನ್ನು ಖಚಿತಪಡಿಸುತ್ತದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಮಳೆ ಚಟುವಟಿಕೆಗಳು ಕ್ರಮೇಣವಾಇ ಕಡಿಮೆಯಾಗುತ್ತದೆ.

ದಕ್ಷಿಣದತ್ತ ಮುಖ ಮಾಡಿದ ಮಾನ್ಸೂನ್

ಹವಾಮಾನ ವರದಿಯ ಅನ್ವಯ, ಮಧ್ಯ ಮತ್ತು ಉತ್ತರ ಮತ್ತು ಪೂರ್ವ ಭಾರತದ ವಿಶಾಲ ಭಾಗಗಳಲ್ಲಿ ಮಳೆಯೂ ಇನ್ನು ಒಂದು ವಾರಗಳ ಕಾಲ ಮುಂದುವರಿಯಲಿದೆ. ಸೆಪ್ಟೆಂಬರ್ ಮಧ್ಯ ಭಾಗದವರೆಗೂ ಈ ಪ್ರದೇಶಗಳಲ್ಲಿ ಮಾನ್ಸೂನ್ ಮಳೆ ಅಬ್ಬರ ಮುಂದುವರಿಯಲಿದೆ. ನಿರಂತರವಾಗಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದ್ದು, ಈ ಹಿಂದಿನ ತೇವಾಂಶ ಮತ್ತು ಅನುಕೂಲಕರ ವಾತಾವರಣ ಪರಿಸ್ಥಿತಿಗಳು ಹೆಚ್ಚಾಗಿದೆ.

ಇನ್ನು, ಉಪಗ್ರಹದ ಫೋಟೋದಲ್ಲಿ ಬಂಗಾಳ ಕೊಲ್ಲಿ ಮತ್ತು ಪೂರ್ವ ಭಾರತದ ಮೇಲೆ ವ್ಯಾಪಕ ಮೋಡಗಳ ರಚನೆ ಆಗಿರುವುದನ್ನು ನೋಡಬಹುದು. ಇದು ಈ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಮೂಡಿಸುತ್ತಿದೆ. ಇದರಂತೆ ಸೆಪ್ಟೆಂಬರ್ ಮಧ್ಯಭಾಗದ ನಂತರ ಮಳೆಯ ಚಟುವಟಿಕೆಗಳು ಹೆಚ್ಚು ಹೆಚ್ಚು ದಕ್ಷಿಣ ಭಾರತದ ಕಡೆಗೆ ಹೆಚ್ಚಾಗಲಿದೆ. ಸೆಪ್ಟೆಂಬರ್ 20ರ ಸುಮಾರಿಗೆ ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ಮಳೆ ಚಟುವಟಿಕೆಗಳು ಕಡಿಮೆಯಾಗಲಿದ್ದು, ಈ ವರ್ಷದ ಮಳೆಯ ಅವಧಿಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಲಿದೆ.

ಸದ್ಯ ಸೆರೆಯಾಗಿರುವ ಉಪಗ್ರಹ ಚಿತ್ರಗಳು ಮಾನ್ಸೂನ್ ಮಳೆಯ ಪ್ರಭಾವ ಇನ್ನು ಮುಕ್ತಾಯವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿವೆ. ಅದರಲ್ಲೂ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಭಾರತದ ಕಡೆಗೆ ಮಾರುತಗಳು ಚಲಿಸುವ ಮೂಲಕ ಪರ್ಯಾಯ ದ್ವೀಪ ಭಾಗಗಳಲ್ಲಿ ಹೆಚ್ಚಿನ ಮಳೆಯನ್ನು ತರುವ ನಿರೀಕ್ಷೆ ಇದೆ. ಒಟ್ಟಾರೆ ನೋಡುವುದಾದರೆ, ಸೆಪ್ಟೆಂಬರ್‌ನಲ್ಲಿಯೂ ಮಾನ್ಸೂನ್ ಮಳೆ ಮಾರುತಗಳ ಪ್ರಭಾವ ಬಲವಾಗಿದ್ದು, ಉತ್ತಮ ಮಳೆಯ ನಿರೀಕ್ಷೆಯನ್ನು ಮಾಡಬಹುದಾಗಿದೆ.

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 9ರವರೆಗೂ ಒಂದೆರಡು ಸ್ಥಳಗಳಲ್ಲಿ ಗುಡುಗು-ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 30-40ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಒಳನಾಡಿನಲ್ಲಿ ಬಿಸಿಲು ಮತ್ತು ಮೋಡಗಳ ಮಿಶ್ರಣ ನಿರೀಕ್ಷೆ ಇದ್ದು, ಸೆಪ್ಟೆಂಬರ್ 14ರ ವರೆಗೂ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಹಲವು ಭಾಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಉಳಿದರೆ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬೀದರ್, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ.