ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನೀರು ತುಂಬಿ ಹೋಗಿದೆ. ವಿಮಾನ ಹಾರಾಟ ವ್ಯತ್ಯಯವಾಗಿದ್ದರೆ, ಇತ್ತ ಹವಾಮಾನ ಇಲಾಖೆ ಹಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ದೆಹಲಿ (ಸೆ.04) ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದೆ. ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದೆ. ಪರಿಣಾಮ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇತ್ತ ಮಳೆ ತೀವ್ರಗೊಳ್ಳುತ್ತಿದ್ದಂತೆ ದೆಹಲಿ ಸೇರಿದಂತೆ ಹಲವು ಭಾಗಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಗುಡುಗು ಸಹಿತ ಮಳೆ, ಆತಂಕ ಹೆಚ್ಚಿದ ನೀರು

ಈ ವರ್ಷ ಮಳೆ ಕೊರತೆಯಾಗಿದೆ. ಹವಾಮಾನ ವೈಪರಿತ್ಯದಿಂದ ಹಲವೆಡೆ ವಿಪರೀತ ಮಳೆಯಿಂದ ಪ್ರವಾಹ ಪರಿಸ್ಥಿತಿಗಳು ಸೃಷ್ಟಿಯಾಗಿದೆ. ನೇಪಾಳ ದುರಂತದ ಬಳಿಕ ಪ್ರವಾಹ ಅತಂಕ ಹೆಚ್ಚಿಸುತ್ತಿದೆ. ಇದೀಗ ದೆಹಲಿ ಸೇರಿದಂತೆ ಕೆಲ ಭಾಗದಲ್ಲಿ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಗುಡುಗು, ಮಿಂಚು ಸಹಿತ ಮಳೆಯಾಗಿದೆ.

ಹಲವು ವಿಮಾನಗಳು ಡೈವರ್ಟ್

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಭಾಗದಲ್ಲಿ ನೀರು ತುಂಬಿಕೊಂಡಿದೆ. ಪ್ರಯಾಣಿಕರು ಪರದಾಡುತ್ತಿದ್ದಾರೆ. ರನ್‌ವೇ ಸೇರಿದಂತೆ ಹಲವೆಡೆ ನೀರು ತುಂಬಿಕೊಂಡ ಪರಿಣಾಮ ವಿಮಾನಗಳು ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಸಮಸ್ಯೆಗೆ ಸಿಲುಕಿಕೊಂಡಿದೆ. ಕೆಲ ವಿಮಾನ ಹಾರಾಟ ವಿಳಂಬವಾಗಿದೆ. ಇದೇ ವೇಳೆ ಹಲವು ವಿಮಾನ ಹಾರಾಟ ಡೈವರ್ಟ್ ಮಾಡಲಾಗಿದೆ.

ಬೆಂಗಳೂರಿನಿಂದ ಹೊರಟ ದೆಹಲಿ ವಿಮಾನವನ್ನು ಮಳೆಯಿಂದಾಗಿ ಲಖನೌಗೆ ಡೈವರ್ಟ್ ಮಾಡಲಾಗಿದೆ. ಇನ್ನು ಲುಧಿಯಾನ ದೆಹಲಿ, ಇಂದೋರ್-ದೆಹಲಿ, ಹೈದರಾಬಾದ್-ದೆಹಲಿ ವಿಮಾನಗಳನ್ನು ಲಖನೌ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ.

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೇ ವೇಳೆ ಮುಂದಿನ ಮೂರು ದಿನಗಳ ಕಾಲ ಮಳೆ ಇರಲಿದೆ ಎಂದು ಎಚ್ಚರಿಸಿದೆ. ಈ ಪೈಕಿ ಕೆಲ ಪ್ರದೇಶದಲ್ಲಿ 500 ಎಂಎಂನಿಂದ 100 ಎಂಎಂ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಇದೇ ವೇಳೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದಿದೆ.