ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬಿಳಿ, ಹಳದಿ, ಹಸಿರು, ಕೆಂಪು ಮತ್ತು ನೀಲಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುತ್ತವೆ. ಪ್ರತಿಯೊಂದು ಬಣ್ಣವು ವಾಹನದ ಬಳಕೆ, ವರ್ಗ ಮತ್ತು ಅದು ವೈಯಕ್ತಿಕವೋ ಅಥವಾ ವಾಣಿಜ್ಯವೋ ಎಂಬುದನ್ನು ಸೂಚಿಸುತ್ತದೆ.

ನೀವು ರಸ್ತೆಯಲ್ಲಿ ಹೋಗುವಾಗ, ಬಸ್ಸಿನಲ್ಲಿ ಪ್ರಯಾಣಿಸುವಾಗ, ಟ್ರಾಫಿಕ್ ನಲ್ಲಿ ಸಿಲುಕಿಕೊಂಡಾಗ ಅಕ್ಕ ಪಕ್ಕ ನಿಂತಿರುವ ವಾಹನಗಳ ನಂಬರ್ ಪ್ಲೇಟ್‌ಗಳ ಒಂದೇ ರೀತಿ ಇರುವುದಿಲ್ಲ. ಕೆಲವು ಬಿಳಿಬಣ್ಣದಲ್ಲಿದ್ದರೆ, ಇನ್ನು ಕೆಲವು ಹಳದಿ, ಹಸಿರು, ಕಪ್ಪು ಬಣ್ಣದಲ್ಲೂ ಕಾಣುತ್ತವೆ. ಇದ್ಯಾಕೆ ಹಿಂಗೆ? ಎಲ್ಲ ವಾಹನಗಳಿಗೆ ಒಂದೇ ಬಣ್ಣದ ನಂಬರ್ ಪ್ಲೇಟ್ ಯಾಕೆ ಇಲ್ಲ ಎಂದು ನೀವು ಆ ಕ್ಷಣ ಯೋಚಿಸಿಯೇ ಇರುತ್ತೀರಿ.

ಬೆಂಗಳೂರಿನ ರಸ್ತೆಗಳಲ್ಲಿ ಹೋಗುವಾಗೆಲ್ಲ ಮೇಲಿನ ಎಲ್ಲ ಬಣ್ಣದ ನಂಬರ್ ಪ್ಲೇಟ್‌ಗಳು ಕಣ್ಣಿಗೆ ಬಿದ್ದೇ ಬಿಳುತ್ತವೆ. ಹೆಚ್ಚಾಗಿ ವಾಹನದ ನಂಬರ್ ಪ್ಲೇಟ್‌ಗಳು ಬಿಳಿ ಬಣ್ಣದಲ್ಲಿರುತ್ತವೆ. ಪ್ರತಿ ಬಣ್ಣವು ಒಂದು ವಾಹನ ವೈಯಕ್ತಿವೋ, ಕಮರ್ಷಿಯಲ್ ಬಳಕೆಯದ್ದೋ, ಅಥವಾ ಒಂದು ನಿರ್ಧಿಷ್ಟ ವರ್ಗಕ್ಕೆ ಸೇರಿದೆಯೋ ಎಂಬುದನ್ನು ಈ ಬಣ್ಣಗಳನ್ನು ನೋಡಿ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ವಾಹನ ನಂಬರ್ ಪ್ಲೇಟ್ ಬಣ್ಣಗಳು ಅವುಗಳ ಬಳಕೆ ಮತ್ತು ವರ್ಗವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆದ್ದರಿಂದ ಈ ಬಣ್ಣಗಳ ಅರ್ಥ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಬಿಳಿ ಬಣ್ಣದ ನಂಬರ್ ಪ್ಲೇಟ್:

ರಸ್ತೆಯಲ್ಲಿ ಹೆಚ್ಚಾಗಿ ಕಂಡುಬರುವ ನಂಬರ್ ಪ್ಲೇಟ್‌ಗಳೆಂದರೆ ಬಿಳಿ ಬಣ್ಣದವು. ಅವುಗಳು ಸಾಮಾನ್ಯವಾಗಿ ವೈಯಕ್ತಿಕ ವಾಹನಗಳಾಗಿರುತ್ತವೆ ಎಂದರ್ಥ. ಕಾರು, ಬೈಕ್‌, ಸ್ಕೂಟರ್‌ಗಳು ವೈಯಕ್ತಿಕ ಬಳಕೆಗೆ ಉಪಯೋಗಿಸುವ ವಾಹನಗಳ ನಂಬರ್‌ ಪ್ಲೇಟ್ ಬಿಳಿ ಬಣ್ಣದಲ್ಲಿರುತ್ತದೆ. ಅಂತಹ ವಾಹನಗಳನ್ನು ಸಾಮಾನ್ಯವಾಗಿ ಪ್ರಯಾಣಿಕರ ಸಾಗಣೆ ಅಥವಾ ಇತರ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ. ಅಂದರೆ ನಿಮ್ಮ ಕಾರಿನ ನಂಬರ್ ಪ್ಲೇಟ್ ಬಿಳಿ ಬಣ್ಣದಲ್ಲಿದ್ದು, ಟ್ಯಾಕ್ಸಿ ರೀತಿ ಬಳಸಿದ್ರೆ ತಪ್ಪಾಗುತ್ತೆ. ಇದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿದರೆ ನಿಮ್ಮ ಮೇಲೆ ಕ್ರಮ ಜರುಗಿಸಬಹುದು.

ಹಳದಿ ಬಣ್ಣ(Yellow board) ಪ್ಲೇಟ್‌ಗಳು:

ಹಳದಿ ನಂಬರ್ ಪ್ಲೇಟ್‌ಗಳನ್ನು ಮುಖ್ಯವಾಗಿ ವಾಣಿಜ್ಯ ವಾಹನಗಳಿಗೆ ಬಳಸಲಾಗುತ್ತದೆ. ಇದರಲ್ಲಿ ಟ್ಯಾಕ್ಸಿ, ಕ್ಯಾಬ್‌, ಆಟೋ, ಬಸ್‌ಗಳು ಸೇರಿದಂತೆ ಇತರೆ ಅನೇಕ ಸರಕು ವಾಹನಗಳು ಸೇರಿವೆ. ಈ ವಾಹನಗಳು ಹಳದಿ ಪ್ಲೇಟ್‌ಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಕಪ್ಪು ಬಣ್ಣದ ನೋಂದಣಿ ಸಂಖ್ಯೆಯನ್ನು ಒಳಗೊಂಡಿರುತ್ತವೆ. ಇಂಥ ವಾಹನಗಳು ಕೇವಲ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅದಕ್ಕೆ ಸಂಬಂಧಿತ ನಿಯಮಗಳ ಅಡಿಯಲ್ಲಿ ನೋಂದಾಯಿಸಲಾಗಿದೆ ಎಂದು ಸೂಚಿಸುತ್ತದೆ.

ಹಸಿರು ನಂಬರ್ ಪ್ಲೇಟ್‌ ಏನು ಸೂಚಿಸುತ್ತೆ?

ಇತ್ತೀಚಿನ ದಿನಗಳಲ್ಲಿ ಹಸಿರು ನಂಬರ್ ಪ್ಲೇಟ್ ಹೊಂದಿರುವ ಕಾರು, ಬೈಕ್‌ ಸಂಖ್ಯೆ ಹೆಚ್ಚುತ್ತಿದೆ. ಬಹಳಷ್ಟು ಜನರಿಗೆ ಈ ಹಸಿರು ನಂಬರ್ ಪ್ಲೇಟ್ ಏಕೆ ಅಳವಡಿಸಿದ್ದಾರೆ ಎಂಬುದೇ ತಿಳಿದಿಲ್ಲ. ಹಸಿರು ನಂಬರ್ ಪ್ಲೇಟ್‌ ಹೊಂದಿರುವ ವಾಹನ ಕಂಡರೆ ಅದು ವಿದ್ಯುತ್ ಚಾಲಿತ ವಾಹನಗಳೆಂದು ಅರ್ಥ. ಖಾಸಗಿ ಎಲೆಕ್ಟ್ರಿಕ್ ಕಾರುಗಳು, ಬೈಕ್‌ಗಳು ಬಿಳಿ ಅಕ್ಷರಗಳೊಂದಿಗೆ ಹಸಿರು ಬಣ್ಣದ ಬ್ಯಾಕ್‌ಗ್ರೌಂಡ್ ಇರುವ ಪ್ಲೇಟ್ ಇರುತ್ತೆ. ಎಲೆಕ್ಟ್ರಿಕ್ ವಾಹನಗಳು ಕೇವಲ ವೈಯಕ್ತಿಕ ಬಳಕೆಗೆ ಮಾತ್ರವಲ್ಲದೆ ಕಮರ್ಷಿಯಲ್ ಉದ್ದೇಶಗಳಿಗೂ ಬಳಕೆಯಾಗುತ್ತದೆ. ಹಸಿರು ಬಣ್ಣದ ಪ್ಲೇಟ್ ಕಂಡರೆ ರಸ್ತೆಯಲ್ಲಿ ಸುಲಭವಾಗಿ ಎಲೆಕ್ಟ್ರಿಕ್ ವಾಹನಗಳನ್ನ ಗುರುತಿಸಲು ಸುಲಭ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಅವುಗಳನ್ನು ಪ್ರತ್ಯೇಕಿಸಲು, ಸರ್ಕಾರವು ಈ ವಾಹನಗಳಿಗೆ ಹಸಿರು ಬಣ್ಣ ನೀಡಿದೆ.

ಕೆಂಪು ನಂಬರ್ ಪ್ಲೇಟ್ ಏನನ್ನು ಸೂಚಿಸುತ್ತೆ?

ಇನ್ನು ದಿನನಿತ್ಯದ ವಾಹನಗಳಲ್ಲಿ ಕೆಂಪು ಬಣ್ಣದ ಪ್ಲೇಟ್ ಹೊಂದಿರುವ ನಂಬರ್ ಎಲ್ಲೆಂದರೆ ಹೆಚ್ಚಾಗಿ ಕಂಡುಬರುವುದಿಲ್ಲ. ಏಕೆಂದರೆ ಕೆಂಪು ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ವಾಹನಗಳನ್ನು ಮುಖ್ಯವಾಗಿ ತಾತ್ಕಾಲಿಕ ನೋಂದಣಿಗಾಗಿ ಬಳಸಲಾಗುತ್ತದೆ. ಅಂದರೆ ಹೊಸ ವಾಹನವನ್ನು ಖರೀದಿಸಿದ ನಂತರ ಶಾಶ್ವತ ನೋಂದಣಿ ಸಂಖ್ಯೆಯನ್ನು ಪಡೆಯುವ ಮೊದಲು ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಸಂಖ್ಯೆಗಳನ್ನು ನೀಡಲಾಗುತ್ತದೆ. ಅಂತಹ ಪ್ಲೇಟ್‌ಗಳು ವಾಹನದ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸುತ್ತವೆ. ಇದು ಸೀಮಿತ ಮಾನ್ಯತೆಯ ಅವಧಿಯನ್ನು ಹೊಂದಿರುತ್ತವೆ.

ನೀಲಿ ನಂಬರ್ ಪ್ಲೇಟ್ ವಿಶೇಷತ ಏನು?

ನೀಲಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಲ್ಲಿ ಕಂಡಾಗ ಅಚ್ಚರಿ ಆಗುತ್ತೆ. ಇದೇನಪ್ಪ, ಯಾವುದಕ್ಕೆ ಉಪಯೋಗಿಸ್ತಾರೆ ಅಂತಾ ಯೋಚಿಸುವಂತೆ ಮಾಡುತ್ತೆ. ನೀಲಿ ಬಣ್ಣದ ಪ್ಲೇಟ್‌ ಹೊಂದಿರುವ ವಾಹನಗಳು ವಿಶೇಷ ವಾಹನಗಳಾಗಿವೆ. ಅಂದರೆ ಇದು ಸಾಮಾನ್ಯ ಬಳಕೆಗೆಲ್ಲ. ವಿದೇಶಿ ರಾಯಭಾರ ಕಚೇರಿಗಳು, ರಾಜತಾಂತ್ರಿಕ ಕಾರ್ಯಾಚರಣೆಗಳಿಗೆ ಸೇರಿದ ವಾಹನಗಳಲ್ಲಿ ನೀಲಿ ಬಣ್ಣದ ನಂಬರ್ ಪ್ಲೇಟ್ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಬಣ್ಣದ ಪ್ಲೇಟ್‌ಗಳು ಸಾಮಾನ್ಯ ವಾಹನಗಳಲ್ಲಿ ಪ್ರಮಾಣಿತ ನೋಂದಣಿ ಸಂಖ್ಯೆಯ ಬದಲಿಗೆ ವಿಶೇಷ ಗುರುತನ್ನ ಒದಗಿಸುತ್ತದೆ.