ಗುಜರಾತ್‌ನ ವಾಡಿಯಾ ಗ್ರಾಮದಲ್ಲಿ ತಲೆತಲಾಂತರಗಳಿಂದ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಅನಿಷ್ಟ ಪದ್ಧತಿಯಿದೆ. ಈ ನರಕದಿಂದ ಹೆಣ್ಣುಮಕ್ಕಳನ್ನು ಪಾರು ಮಾಡಲು ಪೋಷಕರು ಕೇವಲ 7ನೇ ವಯಸ್ಸಿಗೆ ಅವರಿಗೆ ನಿಶ್ಚಿತಾರ್ಥ ಮಾಡುತ್ತಿದ್ದಾರೆ. ಪ್ರಸ್ತುತ ಎನ್‌ಜಿಒ ನೆರವಿನಿಂದ ಈ ಗ್ರಾಮದ ಜನರು ಪರ್ಯಾಯ ಜೀವನೋಪಾಯ ಕಂಡುಕೊಳ್ಳುತ್ತಿದ್ದಾರೆ.
ಪಿಟಿಐ ವಾಡಿಯಾ (ಗುಜರಾತ್): ಬಾಲ್ಯವಿವಾಹ, ವೇಶ್ಯಾವಾಟಿಕೆಯಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆಗಾಗಿ ಅದೆಷ್ಟೇ ಕಾಯ್ದೆ-ಕಾನೂನುಗಳು ಜಾರಿಯಾದರೂ, ಇಂದಿಗೂ ನೂರಾರು ಬಾಲಕಿಯರು ಇಂಥ ಸಾಮಾಜಿಕ ಕುರೂಢಿಗಳಿಂದ ನರಳುತ್ತಿರುವುದಕ್ಕೆ ಗುಜರಾತ್‌ನ ಬಾನಸ್‌ಕಂಠದ ವಾಡಿಯಾ ಗ್ರಾಮ ಸಾಕ್ಷಿಯಾಗಿದೆ.
ತಾಯಿ, ಅಜ್ಜಿಯಂದಿರು ಅನುಭವಿಸಿದ ನರಕಯಾತನೆಯಿಂದ ತಮ್ಮ ಹೆಣ್ಣುಮಕ್ಕಳನ್ನು ಪಾರು ಮಾಡಲು, ಇಲ್ಲಿನ ಕುಟುಂಬಗಳು ಹೆಣ್ಣುಮಕ್ಕಳಿಗೆ ಕೇವಲ 7 ವರ್ಷ ವಯಸ್ಸಿದ್ದಾಗಲೇ ಬಾಲ್ಯ ನಿಶ್ಚಿತಾರ್ಥ ಮಾಡುವ ವಿಚಿತ್ರ ಹಾಗೂ ಅನಿವಾರ್ಯ ಹಾದಿಯನ್ನು ಕಂಡುಕೊಂಡಿವೆ.
ಅಹಮದಾಬಾದ್‌ನಿಂದ 200 ಕಿ.ಮೀ. ದೂರದಲ್ಲಿರುವ, 750 ಜನಸಂಖ್ಯೆ ಹೊಂದಿರುವ ಈ ಸಣ್ಣ ಗ್ರಾಮವು ದಶಕಗಳಿಂದ ‘ವೇಶ್ಯಾವಾಟಿಕೆಯ ಗ್ರಾಮ’ ಎಂಬ ಕಳಂಕ ಹೊತ್ತುಕೊಂಡಿದೆ. ಇಲ್ಲಿನ ಅಲೆಮಾರಿ ‘ಸರಾಣಿಯಾ’ ಸಮುದಾಯದ ಮಹಿಳೆಯರನ್ನು ತಲೆತಲಾಂತರಗಳಿಂದ ಲೈಂಗಿಕ ವೃತ್ತಿಗೆ ತಳ್ಳಲಾಗುತ್ತಿದ್ದು, ಪುರುಷರೇ ಇದಕ್ಕೆ ಪೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗ್ರಾಮದ ಅಲಿಖಿತ ನಿಯಮದಂತೆ, ಒಮ್ಮೆ ನಿಶ್ಚಿತಾರ್ಥ ಅಥವಾ ಮದುವೆಯಾದ ಹೆಣ್ಣುಮಕ್ಕಳನ್ನು ಲೈಂಗಿಕ ವೃತ್ತಿಗೆ ತಳ್ಳುವಂತಿಲ್ಲ. ಹೀಗಾಗಿ, ಹೆಣ್ಣುಮಕ್ಕಳು ಸಣ್ಣ ವಯಸ್ಸಿನಲ್ಲೇ ನೆರೆಹೊರೆಯ ಗ್ರಾಮಗಳ ಯುವಕರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ವಯಸ್ಸಿಗೆ ಬಂದ ನಂತರ ಮದುವೆಯಾಗಿ ಗ್ರಾಮದಿಂದ ಹೊರಹೋಗುತ್ತಿದ್ದಾರೆ.
ಪರ್ಯಾಯ ಜೀವನೋಪಾಯ:
ವಿಚಾರತಾ ಸಮುದಾಯ ಸಮರ್ಥನ್ ಮಂಚ್ (ವಿಎಸ್‌ಎಸ್‌ಎಂ) ಎಂಬ ಎನ್‌ಜಿಒ ಸಂಸ್ಥಾಪಕಿ ಮಿತ್ತಲ್ ಪಟೇಲ್ ನೇತೃತ್ವದಲ್ಲಿ 2012ರಲ್ಲಿ ಇಲ್ಲಿ ಮೊದಲ ಬಾರಿಗೆ ಸಾಮೂಹಿಕ ವಿವಾಹ ನೆರವೇರಿಸಲಾಗಿತ್ತು. ಅಲ್ಲಿಂದೀಚೆಗೆ ಗ್ರಾಮದ ಸುಮಾರು 160 ಕುಟುಂಬಗಳಲ್ಲಿ 90ಕ್ಕೂ ಹೆಚ್ಚು ಕುಟುಂಬಗಳು ಲೈಂಗಿಕ ವೃತ್ತಿಯನ್ನು ತೊರೆದು, ಪರ್ಯಾಯ ಜೀವನೋಪಾಯ ಕಂಡುಕೊಳ್ಳಲು ಮುಂದಾಗಿವೆ. ಕೃಷಿ ಭೂಮಿಯ ಮರುಜೀವ, ಕೊಳವೆಬಾವಿ ತೋಡುವುದು ಹಾಗೂ ಕಿರು ಸಾಲಗಳ ಮೂಲಕ ಪರ್ಯಾಯ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತಿದೆ.
ಇತಿಹಾಸ:
ಇತಿಹಾಸದ ಪ್ರಕಾರ, ಈ ಸಮುದಾಯವು ಮಹಾರಾಣಾ ಪ್ರತಾಪ್ ಅವರ ಸೈನ್ಯದೊಂದಿಗೆ ಸಂಚರಿಸುತ್ತಿದ್ದ ಅಲೆಮಾರಿ ಪಂಗಡವಾಗಿತ್ತು. ಪುರುಷರು ಶಸ್ತ್ರಾಸ್ತ್ರಗಳನ್ನು ಚೂಪುಗೊಳಿಸುತ್ತಿದ್ದರೆ, ಮಹಿಳೆಯರು ಸೈನಿಕರ ರಂಜನೆಯಲ್ಲಿ ತೊಡಗುತ್ತಿದ್ದರು. ಸ್ವಾತಂತ್ರ್ಯಾನಂತರ ಉದ್ಯೋಗವಿಲ್ಲದೆ ಬಡತನಕ್ಕೆ ಸಿಲುಕಿದ ಈ ಸಮುದಾಯವು ಅನಿವಾರ್ಯವಾಗಿ ಲೈಂಗಿಕ ವೃತ್ತಿಗೆ ಇಳಿಯಿತು.
‘ನನ್ನ ತಾಯಿ ಮತ್ತು ಅಜ್ಜಿ ಗ್ರಾಹಕರ ಬಯಕೆಗಳನ್ನು ಪೂರೈಸಲು ‘ಅಸಮರ್ಥರು’ ಎಂದು ಅನಿಸುವವರೆಗೆ ನನ್ನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಅವರಿಗಾಗಿ ಗ್ರಾಹಕರನ್ನು ಕರೆತರುವುದನ್ನು ನೋಡುತ್ತಲೇ ನಾನು ಬೆಳೆದಿದ್ದೇನೆ. ಬಡತನದ ಕಾರಣದಿಂದಾಗಿ ಇದೊಂದು ಎಲ್ಲರೂ ಅನುಸರಿಸುವ ಸಮಾಜದ ಸಾಮಾನ್ಯ ನಿಯಮದಂತೆ ಕಾಣುತ್ತಿತ್ತು. ಅಷ್ಟೇ ಅಲ್ಲ, ನನ್ನ ತಂದೆಯೇ ನನ್ನ ಹೆತ್ತ ತಂದೆಯೋ ಅಲ್ಲವೋ ಎಂಬುದು ನನ್ನ ತಾಯಿಗೂ ತಿಳಿದಿಲ್ಲ. ನನ್ನ ತಾಯಿ ಅನುಭವಿಸಿದ ಕಷ್ಟವನ್ನು ನಾನು ಅನುಭವಿಸಬಾರದೆಂದು ನನಗೆ ಚಿಕ್ಕ ವಯಸ್ಸಿನಲ್ಲೇ ನಿಶ್ಚಿತಾರ್ಥ ಮಾಡಿಸಿದರು’ ಎಂದು ಯುವತಿಯೊಬ್ಬಳು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.


